ಪುಣಚ ವ್ಯವಸಾಯ ಸೇವಾ ಸಹಕಾರ ಸಂಘದ ಸಾಮಾನ್ಯ ಸಭೆ – ರೂ.1,99,82,594.85 ಲಾಭ, ಶೇ.10 ಡಿವಿಡೆಂಡ್

0

ಪುತ್ತೂರು: ಪುಣಚ ವ್ಯವಸಾಯ ಸೇವಾ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಪ್ಪ ಮೂಲ್ಯ ಎಮ್. 2022-23ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಸಂಘವು ಪ್ರಸ್ತುತ ಸಾಲಿನಲ್ಲಿ ಎ ತರಗತಿಯಲ್ಲಿ ವರ್ಗೀಕರಣಗೊಂಡಿದೆ. ವರದಿ ವರ್ಷದಲ್ಲಿ 4,85,85,050 ಪಾಲು ಬಂಡವಾಳ, 49,74,51,495.71 ಠೇವಣಾತಿಗಳನ್ನು ಹೊಂದಿದ್ದು ರೂ.8,97,598.32 ವ್ಯಾಪಾರ ಲಾಭ ಬಂದಿರುತ್ತದೆ. ಪ್ರಸಕ್ತ ಸಾಲಿನಲ್ಲಿ 257 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ ಎಂದು ಹೇಳಿದರು. 2023-24ನೇ ಸಾಲಿನ ಕಾರ್ಯಯೋಜನೆಗಳನ್ನು ತಿಳಿಸಿದರು. ಸಂಘದ ಪ್ರಗತಿಗೆ ಕಾರಣರಾದ ಸದಸ್ಯರಿಗೆ, ಠೇವಣಿದಾರರಿಗೆ, ಸಾಲಗಾರರಿಗೆ, ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಖಾ ಮ್ಯಾನೇಜರ್ ಶಂಕರ್ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಓದಿದರು. ಲೆಕ್ಕಪರಿಶೋಧನಾ ವರದಿ, ಅನುಪಾಲನಾ ವರದಿ ಮಂಡಿಸಲಾಯಿತು.

ಸಂಘದ ಅಧ್ಯಕ್ಷ ಜನಾರ್ದನ ಭಟ್ ಮಾತನಾಡಿ 2022-23ನೇ ಸಾಲಿನ ಲಾಭ ವಿಂಗಡಣೆ ತಿಳಿಸಿ ಸಂಘವು 1,99,82,594.85 ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನಿವೇಶನ ಖರೀದಿ ಮಾಡಿದ್ದೇವೆ. ಮುಂದಿನ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಕ್ಷೇಮನಿಧಿ ಹೆಚ್ಚಳ ಮಾಡಲಾಗಿದೆ. ವ್ಯವಹಾರದ ವಿಸ್ತರಣೆಗೆ ಹೊಸ ಕಟ್ಟಡದ ಅಗತ್ಯವಿದೆ ಎಂದು ತಿಳಿಸಿದರು. 2024ರ ಜನವರಿಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ನಮ್ಮ ಆಡಳಿತಾವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ತಿಳಿಸಿದರು.

ಪ್ರತ್ಯೇಕ ಸಹಕಾರ ಸಂಘ ಸ್ಥಾಪನೆಯ ಚರ್ಚೆ: ಗ್ರಾಮ ಪಂಚಾಯತ್‌ಗೆ ಪ್ರತ್ಯೇಕ ಸಹಕಾರ ಸಂಘ ಸ್ಥಾಪನೆ ಕುರಿತು ಇಲಾಖೆಯ ಆದೇಶದ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷರು ವಿಷಯ ಪ್ರಸ್ತಾಪಿಸಿ ಪ್ರಸ್ತುತ ಸಂಘವು ಪುಣಚ ಮತ್ತು ಕೇಪು ಗ್ರಾಮ ಪಂಚಾಯತ್ ಒಳಪಟ್ಟು ಕಾರ್ಯನಿರ್ವಹಿಸುತ್ತಿದೆ. ಕೇಪು ಗ್ರಾಮಕ್ಕೆ ಸಂಬಂಧಿಸಿ ಪ್ರತ್ಯೇಕ ಸಹಕಾರ ಸಂಘ ರಚನೆ ಕುರಿತಂತೆ ಸದಸ್ಯರು ಅಭಿಪ್ರಾಯ ತಿಳಿಸುವಂತೆ ಹೇಳಿದರು. ಸದಸ್ಯರುಗಳು ಪರ ವಿರೋಧ ಅಭಿಪ್ರಾಯ ತಿಳಿಸಿದರು. ಬಳಿಕ ಎಲ್ಲರ ಅಭಿಪ್ರಾಯ ಪಡೆದುಕೊಂಡು ಆಡಳಿತ ಮಡಳಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನೀರ್ಣಯ ಕೈಗೊಳ್ಳಲಾಗುವುದೆಂದು ಹೇಳಿದರು.

ಪರಿಹಾರ ಧನ ವಿತರಣೆ: ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರಿಗೆ ಸಂಘದ ವತಿಯಿಂದ ಪರಿಹಾರ ಧನ ವಿತರಿಸಲಾಯಿತು. ಸದಸ್ಯರಾದ ದುಗ್ಗಯ್ಯ, ಕಲಾವತಿ, ದಯಾನಂದ, ವೆಂಕಪ್ಪ ಗೌಡ, ನೀಲಮ್ಮ, ಪ್ರಾನ್ಸಿಸ್ ಕುಟಿನ್ಹಾ, ಮೀನಾಕ್ಷಿ, ಪುರುಷೋತ್ತಮ, ರಾಮ ಮುಗೇರರವರಿಗೆ ಚಿಕಿತ್ಸಗೆ ಪರಿಹಾರ ಧನ ವಿತರಿಸಲಾಯಿತು.
ಸದಸ್ಯರು ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ನಿರ್ದೇಶಕರಾದ ದೇವಿಪ್ರಸಾದ್ ಕೆ., ಉದಯಕುಮಾರ್ ಡಿ., ಕೃಷ್ಣಪ್ಪ ಪುರುಷ, ರಾಜೀವಿ, ಬಾಲಚಂದ್ರ ಕೆ., ಭಾರತಿ ಜೆ. ಭಟ್, ಜಗದೀಶ, ಗೋವಿಂದ ನಾಯ್ಕ ಬಿ., ತಾರನಾಥ ಆಳ್ವ, ರಾಧಾಕೃಷ್ಣ ಪಿ., ಪ್ರವೀಣ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಯೋಗೀಶ್ ಉಪಸ್ಥಿತರಿದ್ದರು. ಲೆಕ್ಕಾಧಿಕಾರಿ ಪದ್ಮನಾಭ ಗೌಡ, ಕವಿತಾ ಎಸ್. ನಾಯ್ಕ ಹಾಗೂ ಸಿಬಂದಿಗಳು ಸಹಕರಿಸಿದರು. ಗ್ರಂಥಪಾಲಕಿ ಜಯಲಕ್ಷ್ಮಿ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷ ಸಂತೋಷ್ ವಂದಿಸಿದರು.

ಹಿರಿಯ ಸಾಧಕ ಸದಸ್ಯರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಳಕಟ್ಟೆ ಶಂಕರ ಭಟ್, ಶ್ರೀನಿವಾಸ ರೈ ಕುಂಡಕೋಳಿ, ಜಯಂತ್ ನಾಯಕ್ ಪೊಸವಳಿಕೆ ಹಾಗೂ ರಾಮನಾಯ್ಕ ಪಿ.ರವರನ್ನು ಶಲ್ಯ, ಪೇಟ, ಹಾರ ಹಾಕಿ ಸಂಘದ ಅಧ್ಯಕ್ಷರು, ನಿರ್ದೇಶಕರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here