ಬಿಜೆಪಿ ಟಿಕೆಟ್ ತೆಗೆಸಿಕೊಡುವುದಾಗಿ ನಿವೃತ್ತ ಅಧಿಕಾರಿಗೆ ವಂಚನೆ ಆರೋಪ – ತೇಜೋವಧೆಯ ವಿರುದ್ಧ ಪುತ್ತಿಲ ಪರಿವಾರದ ಶೇಖರ್ ಎನ್.ಪಿ. ದೂರು

0

ಪುತ್ತೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ದುಡ್ಡು ಪಡೆದು, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರಾ ನ್ಯಾಯಾಂಗ ಬಂಧನಕ್ಕೊಳಗಾದ ಬಳಿಕ ಟಿಕೆಟ್ ಹೆಸರಲ್ಲಿ ಬಹಳಷ್ಟು ಮಂದಿ ವಂಚನೆಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಉತ್ತರ ಕರ್ನಾಟಕದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರಿಗೆ ಕೋಟ್ಯಾಂತರ ರೂ. ವಂಚನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ವಂಚನೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಲ ಪರಿವಾರದ ಮುಖಂಡ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶೇಖರ್ ಎನ್.ಪಿ.ಯವರ ಹೆಸರು ಕೂಡ ಇದೆ ಎನ್ನುವ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ತನ್ನ ವಿರುದ್ಧ ಮಾನಹಾನಿಕರ, ತೇಜೋವಧೆ ಮಾಡುವಂತಹ ವರದಿ ಪ್ರಕಟಿಸಲಾಗಿದೆ ಎಂದು ಪುತ್ತೂರು ನಗರ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.


ಪ್ರಕರಣದ ಹಿನ್ನೆಲೆ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ನಿವಾಸಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಅಭಿಯಂತರ ಸಿ.ಶಿವಮೂರ್ತಿ ಎನ್ನುವವರಿಗೆ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ರೇವಣ ಸಿದ್ದಪ್ಪ ಮತ್ತು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ.ಯವರು ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೂರ್ತಿಯವರು ಸಿಎಂ ಸಿದ್ದರಾಮಯ್ಯನವರಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಪ್ರತಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಕೆಲ ವೆಬ್‌ಸೈಟ್ ಮತ್ತು ವಾರಪತ್ರಿಕೆಯೊಂದರಲ್ಲಿ ವರದಿಯೂ ಪ್ರಕಟವಾಗಿತ್ತು. ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಉದ್ಯಮಿ ಶೇಖರ್ ಎನ್.ಪಿ.ಯವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ನಾಲ್ಕೈದು ದಿನಗಳಿಂದ ನನ್ನ ಬಗ್ಗೆ, ವಂಚನೆಯ ಬಗ್ಗೆ ಅಪಪ್ರಚಾರ ನಡೆಯುತ್ತಿತ್ತು. ಇದರ ಹಿನ್ನೆಲೆ ಬೇರೆಯೇ ಇದೆ. ಶಿವಮೂರ್ತಿ ಮತ್ತು ಚಂದ್ರಶೇಖರ್ ಎನ್ನುವವರಿಗೆ ಆಗಿರುವ ಅನ್ಯಾಯ ಬೇರೆಯದೇ ವಿಚಾರ. ಶಿವಮೂರ್ತಿ ಮತ್ತು ಚಂದ್ರಶೇಖರ್ ಎನ್ನುವವರು ನನಗೆ ಪರಿಚಿತರೇ. ನಾನು ಗುತ್ತಿಗೆದಾರನಾಗಿದ್ದು ಆ ಭಾಗಕ್ಕೆ ಓಡಾಡುತ್ತಿದ್ದುದರಿಂದ ಅವರ ಪರಿಚಯ ಆಗಿತ್ತು. ಇಬ್ಬರು ವ್ಯಕ್ತಿಗಳು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಊಟ ಮಾಡಿದ್ದೆವು. ಅಲ್ಲಿ ಟಿಕೆಟ್ ವಿಚಾರ ಪ್ರಸ್ತಾಪ ಆಗಿತ್ತು. ಆವತ್ತು ಅಲ್ಲಿಂದ ನಾನು ಬಂದಿದ್ದೆ. ಆದರೆ ನನ್ನನ್ನು ಅವರಲ್ಲಿಗೆ ಕರೆದೊಯ್ದಿದ್ದ ಇಬ್ಬರು ವ್ಯಕ್ತಿಗಳು ಶಿವಮೂರ್ತಿಯವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಟಿಕೆಟ್ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಆದರೆ ಈ ವಿಚಾರಗಳನ್ನು ಶಿವಮೂರ್ತಿಯವರು ನನಗೆ ಹೇಳಿರಲಿಲ್ಲ. ಕೆಲ ಸಮಯದ ಬಳಿಕ ಟಿಕೆಟ್ ವಿಚಾರವನ್ನು ಶಿವಮೂರ್ತಿ ಹೇಳಿದ್ದರು. ಆಗ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಅವರಿಗೆ ಮೋಸವಾಗುತ್ತಿರುವ ಬಗ್ಗೆ ಆ ಇಬ್ಬರು ವ್ಯಕ್ತಿಗಳ ಮುಂದೆಯೇ ಹೇಳಿದ್ದೆ. ಆಗ ಅವರು ಎಚ್ಚೆತ್ತುಕೊಂಡಿದ್ದರು. ಅವರಿಗೆ ಟಿಕೆಟ್ ವಿಚಾರದಲ್ಲಿ ನಾನು ಯಾವುದೇ ಹಣದ ವ್ಯವಹಾರ ಮಾಡಿಲ್ಲ ಎನ್ನುವುದು ಸ್ಪಷ್ಟವಾಯಿತು. ಈ ಬಗ್ಗೆ ಹೋರಾಟಗಾರ ಚಂದ್ರಶೇಖರ್ ಎನ್ನುವವರಿಗೆ ಶಿವಮೂರ್ತಿಯವರು ಎಲ್ಲಾ ವಿಚಾರಗಳನ್ನು ತಿಳಿಸಿದ್ದರು. ಆಗ ಚಂದ್ರಶೇಖರ್ ಅವರು ಈ ಬಗ್ಗೆ ದೂರು ನೀಡೋಣ ಎಂದು ಸಿಎಂ, ಗೃಹಸಚಿವರಿಗೆ ಪತ್ರ ಬರೆಯಲು ಡ್ರಾಫ್ಟ್ ತಯಾರು ಮಾಡಿಟ್ಟುಕೊಂಡಿದ್ದರು. ಆ ಪ್ರತಿಯನ್ನು ನನಗೆ ಕಳಿಸಿದ್ದರು. ಆಗ ಮತ್ತೆ ಶಿವಮೂರ್ತಿಯವರನ್ನು ಬೆಂಗಳೂರಿಗೆ ಕರೆಸಿಕೊಂಡು ಮತ್ತೆ ವಿವರಿಸಿ ಹೇಳಿದಾಗ ಅವರಿಗೂ ಮನವರಿಕೆಯಾಗಿತ್ತು. ಹೀಗಾಗಿ ಅವರು ದೂರು ನೀಡಲಿಲ್ಲ. ಈಗ ವೈರಲ್ ಆಗಿರುವ ಪ್ರತಿ ಎಲ್ಲಿಂದಲೋ ಸೋರಿಕೆ ಆಗಿರುವುದು. ಅದು ಎಲ್ಲಿಂದ ಲೀಕ್ ಆಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅವರಿಬ್ಬರೂ ಸ್ಪಷ್ಟೀಕರಣ ನೀಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಯಾವುದೂ ಇಲ್ಲ. ಆದರೆ ಕೆಲ ಮಾಧ್ಯಮಗಳು ರಾಜಕೀಯ ದುರುದ್ದೇಶದಿಂದ ನಾನು ಅರುಣ್ ಪುತ್ತಿಲರ ಜೊತೆಗೆ ಗುರುತಿಸಿಕೊಂಡಿರುವ ಕಾರಣಕ್ಕೆ ಮತ್ತು ಅರುಣ್ ಪುತ್ತಿಲರ ಹೆಸರಿಗೆ ಕಪ್ಪು ಚುಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಈ ವಿಚಾರದಲ್ಲಿ ನಾನು ಕ್ಲಿಯರ್ ಇದ್ದೇನೆ. ಅವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ನಾನು ಯಾವತ್ತೂ ಇದ್ದೇನೆ ಎಂದು ಸುದ್ದಿಗೆ ಶೇಖರ್ ಬಿ.ಎನ್. ಅವರು ತಿಳಿಸಿದ್ದಾರೆ.

ಪುತ್ತಿಲ ಪರಿವಾರದ ಸ್ಪಷ್ಟೀಕರಣ
ಪ್ರಕರಣದ ಕುರಿತಂತೆ ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಪುತ್ತಿಲ ಪರಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. 2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು. ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಸ್ಪಷನೆ ನೀಡುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ.
ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷನೆಯನ್ನು ಮಾಧ್ಯಮದ ಮುಖಾಂತರ ನೀಡುತ್ತಿದ್ದೇವೆ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.

ಇನ್ನು ಈ ಬಗ್ಗೆ ವೀಡಿಯೋ ಮೂಲಕ ಸ್ಪಷ್ಟೀಕರಣ ನೀಡಿರುವ ಬೆಂಗಳೂರಿನ ಕನ್ನಡಪರ ಹೋರಾಟಗಾರ ಚಂದ್ರಶೇಖರ್ ಅವರು, ಪ್ರಕರಣದಲ್ಲಿ ಶೇಖರ್ ಎನ್‌ಪಿಯವರ ಪಾತ್ರವಿಲ್ಲ. ಈ ಬಗ್ಗೆ ನಾವು ಎಲ್ಲೂ ದೂರು ನೀಡಿಲ್ಲ. ಹೀಗಾಗಿ ಕೊಟ್ಟಮೇಲೆ ವರದಿ ಮಾಡಬೇಕಾಗುತ್ತದೆ. ಇಲ್ಲಿ ಕೋಟ್ಯಾಂತರ ಹಣ ಪಡೆದಿರುವ ವ್ಯಕ್ತಿಗಳು ಬೇರೆ ಇದ್ದಾರೆ. ನಾವಾಗಿಯೇ ಬಂದು ಮಾಹಿತಿ, ದೂರು ನೀಡಿದರೆ ವರದಿ ಮಾಡಬಹುದು. ಆದರೆ ನಾವು ಇದ್ಯಾವುದನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.

ವೈರಲ್ ಮಾಡುವುದಕ್ಕೆ ಬೇಕಾದಷ್ಟು ವೀಡಿಯೋಗಳು ನಮ್ಮಲ್ಲೂ ಇವೆ. ಊರಲ್ಲಿದ್ದುಕೊಂಡು ನಾವು ಹಾಗೆ ಮಾಡಬಾರದು. ನನ್ನ ಬಗ್ಗೆ ಅಪಪ್ರಚಾರ, ತೇಜೋವಧೆ ಮಾಡಿರುವವರ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ. ನನ್ನ ಬಗ್ಗೆ ಎಲ್ಲೂ ದೂರು ದಾಖಲಾಗಿಲ್ಲ. ಶಿವಮೂರ್ತಿಯವರು, ಚಂದ್ರಶೇಖರ್ ಅವರು ಎಲ್ಲೂ ದೂರು ಕೊಟ್ಟಿಲ್ಲ. ಅವರು ನನ್ನ ಜೊತೆಗೇ ಇದ್ದಾರೆ. ಅರುಣ್ ಪುತ್ತಿಲರ ಜೊತೆಗಿದ್ದೇನೆ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡುತ್ತಾರೆಂದಾದರೆ ಮುಂದಕ್ಕೆ ರಾಜಕೀಯವಾಗಿ ಹೇಗೆ ಯಾರನ್ನು ಟಾರ್ಗೆಟ್ ಮಾಡಬೇಕೆನ್ನುವುದು ನನಗೂ ಗೊತ್ತಿದೆ. ನನ್ನ ಬಳಿಯೂ ದಾಖಲೆಗಳು ಬಹಳಷ್ಟಿವೆ. ಅದನ್ನೆಲ್ಲಾ ನಾನು ಬಿಡಲು ಹೋದರೆ ಯಾರೂ ಮುಖ ತೋರಿಸಲು ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here