ರಾಜ್ಯ ಸರಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ, ಜನವಿರೋಧಿ ನಿಲುವು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

0

ರಾಜ್ಯದಲ್ಲಿ ಸುಲಿಗೆಕೋರರ ಪಕ್ಷ ಆಡಳಿತ ನಡೆಸುತ್ತಿದೆ-ಸಂಜೀವ ಮಠಂದೂರು
60% ಕಮಿಷನ್ ಸರಕಾರ ಆಡಳಿತದಲ್ಲಿ-ವಿಶ್ವೇಶ್ವರ ಭಟ್ ಬಂಗಾರಡ್ಕ

ಪುತ್ತೂರು:ರಾಜ್ಯ ಕಾಂಗ್ರೆಸ್ ಸರಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ ಹಾಗೂ ಜನ ವಿರೋಧಿ ನಿಲುವು ಖಂಡಿಸಿ ಬಿಜೆಪಿಯ ವತಿಯಿಂದ ಅ.16ರಂದು ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಪ್ರಾರಂಭದಲ್ಲಿ ಪಕ್ಷದ ಕಚೇರಿಯ ಬಳಿಯಿಂದ ಮೆರವಣಿಗೆಯಲ್ಲಿ ಆಗಮಿಸಿ ಬಳಿಕ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿಸಿದರು. ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ಸರಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸುಲಿಗೆಕೋರ ಪಕ್ಷ ಆಡಳಿತ ನಡೆಸುತ್ತಿದೆ-ಸಂಜೀವ ಮಠಂದೂರು:
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರದಲ್ಲಿ ಹಣಕ್ಕೆ ಬರವಿದೆ. ಆದರೆ ಸಚಿವರ ಸೂಟ್‌ಕೇಸ್ ಬರಪೂರ ಭರ್ತಿಯಾಗಿದೆ. ಸಿದ್ದರಾಮರಾಮಯ್ಯ ಸರಕಾರದ ಅಸ್ತಿತ್ವಕ್ಕೆ ಕೆಲವೇ ತಿಂಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದ್ದು, ಮುಂದಿನ ನಾಲ್ಕೂವರೆ ವರ್ಷ ಯಾವ ರೀತಿ ಇರಬಹುದು. ಸಿದ್ದರಾಮಯ್ಯ ಆಡಳಿತಕ್ಕೆ ಬಂದರೆ ಬರ, ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಭ್ರಷ್ಟಾಚಾರ ನಿಶ್ಚಿತ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು ಲಕ್ಷ ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ರಾಜ್ಯದಲ್ಲಿಯೂ ಅಂತದೇ ಸ್ಥಿತಿ ನಿರ್ಮಾಣವಾಗಿದ್ದು,ಕೋಟ್ಯಾಂತರ ಹಣ ಮಂತ್ರಿಗಳಿಗೆ ಬರುತ್ತಿದೆ ಎಂದು ಆರೋಪಿಸಿದರು.


ಒಬ್ಬ ಕಲಾವಿದನಿಂದ 60 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಈಗ 80 ಪರ್ಸೆಂಟ್ ಆಗಿದೆ. ಗುತ್ತಿಗೆದಾರನ ಮನೆಯಲ್ಲಿ 100 ಕೋಟಿ ರೂಪಾಯಿ ಪತ್ತೆಯಾಗಿದ್ದು ಭ್ರಷ್ಟಾಚಾರದ ಕೂಪ ರಾಜ್ಯದಲ್ಲಿದೆ. ತಮಿಳುನಾಡಿನೊಂದಿಗೆ ಕದ್ದುಮುಚ್ಚಿ ಒಪ್ಪಂದ ಮಾಡಿಕೊಂಡು ನೀರು ಬಿಡುತ್ತಾರೆ. ಬಿ.ಎಸ್ ಯಡಿಯೂರಪ್ಪನವರು ಜಾರಿಗೆ ತಂದಿರುವ ರೂ.4000 ಕಿಸಾನ್ ಸನ್ಮಾನ್, ರೈತರ ಮಕ್ಕಳ ವಿದ್ಯಾನಿಧಿಯನ್ನು ತಡೆ ಹಿಡಿಯಲಾಗಿದ್ದು ಸರಕಾರದಲ್ಲಿ ಹಣವಿಲ್ಲದಿದ್ದರೆ ಹೇಳಲಿ ನಾವು ಬಿಕ್ಷೆ ಬೇಡಿ ಸರಕಾರಕ್ಕೆ ನೀಡುವುದಾಗಿ ತಿಳಿಸಿದರು. ಅನಿಷ್ಠ ಸರಕಾರ ಆಡಳಿತದಲ್ಲಿದ್ದು ಜವಾಬ್ದಾರಿಯಿಲ್ಲದ ಕ್ಯಾಬಿನೆಟ್, ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ ಸುಲಿಗೆ ಕೋರರಾಗಿದ್ದಾರೆ. ಸುಲಿಗೆಕೋರ ಸರಕಾರ ಆಡಳಿತದಲ್ಲಿದೆ. ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಕೋಟಿ ಕೋಟಿ ಅನುದಾನಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜನರಿಂದ ಕೋಟ್ಯಾಂತರ ತೆರಿಗೆ ಸಂಗ್ರಹಿಸಿ ಸೋನಿಯಾ ಗಾಂಧೀ, ರಾಹುಲ್ ಗಾಂಧೀಯವರಿಗೆ ಕಪ್ಪ ಕಾಣಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.


60% ಕಮಿಷನ್ ಸರಕಾರ ಆಡಳಿತದಲ್ಲಿ-ವಿಶ್ವೇಶ್ವರ ಭಟ್ ಬಂಗಾರಡ್ಕ:
ರಾಜ್ಯ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ರಾಜ್ಯದಲ್ಲಿ ಸರಕಾರ ಇದೆಯಾ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ. ಇವರು ಆಡಳಿತ ನಡೆಸಲು ಲಾಯಕ್ಕಿಲ್ಲ. ಕೇವಲ ರಾಜಕೀಯ, ಭ್ರಷ್ಟಾಚಾರ ಮಾತ್ರ. ಜನರ ಸಮಸ್ಯೆಗೆ ಪರಿಹಾರ ಮಾಡುತ್ತಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಬಿಜೆಪಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರದಲ್ಲಿ ಮಾತ್ರ ಮಾತನಾಡುವುದು ಬಿಟ್ಟರೆ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಅಧಿಕಾರಕ್ಕೆ ಬಂದ ನಂತರವೂ ರಾಜಕೀಯ ಮಾಡುವುದಾದರೆ ಅವರಿಗೆ ಆಡಳಿತ ನಡೆಸಲು ಅರ್ಹತೆಯಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೋಟ್ಯಾಂತರ ಹಣ ಸಂಗ್ರಹಿಸುವ ಸರಕಾರವಾಗಿದೆ. ರಾಜ್ಯ ಬರಪೀಡಿತವಾಗಿದ್ದರೂ 100ಕೋಟಿ ಅಧಿಕ ಹಣ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾಗಿದ್ದು ಇದು ಪಂಚ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸಂಗ್ರಹಿಸಿಡಲಾಗಿದೆ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. 18 ಜಿಲ್ಲೆಗಳಲ್ಲಿ ಬರವಿದ್ದರೂ ರಾಜ್ಯ ಸರಕಾರ ಏನು ಮಾಡದೇ ಕೇಂದ್ರ ಸರಕಾರ ಕಡೆ ಕೈ ತೋರಿಸುತ್ತಿದ್ದು ಬರ ನಿವಾರಿಸಲು ಇವರಲ್ಲಿ ಯಾವ ಮಾನಸಿಕತೆಯಿಲ್ಲ. ಅಕ್ಟೋಬರ್‌ನಲ್ಲೇ ವಿದ್ಯುತ್ ಕೊರತೆ ಉಂಟಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಪಂಚ ಗ್ಯಾರಂಟಿಯ ಬಹುದೊಡ್ಡ ನಾಟಕವಾಡಿ ಈಗ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಶಾಸಕರ ನಿಧಿಯಿಲ್ಲ. ಯಾವುದೇ ತೊಂದರೆ ಆದಾಗ ಶಾಸಕರು ಅಲ್ಲಿಗೆ ಭೇಟಿ ನೀಡಿ ಹೇಳಿಕೆ ನೀಡುವುದು ಮಾತ್ರ. ಒಂದು ಪರ್ಲಾಂಗ್ ರಸ್ತೆ ಅಭಿವೃದ್ಧಿಯಾಗಿಲ್ಲ. ಅಲ್ಲಲ್ಲಿ ಟೇಪ್ ಕತ್ತರಿಸುವುದು ಮಾತ್ರ. ಯಾವುದೇ ಅನುದಾನವಿಲ್ಲ. ರಾಜಕೀಯ ಭಾಷಣ ಮಾತ್ರ. ರೈತರಿಗೆ ಬೇಕಾದ ಸವಲತ್ತು ನೀಡುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಪೆಟಿಎಂ, 40 ಪರ್ಸೆಂಟ್‌ನ ಆರೋಪ ಮಾಡಿದವರು ಈಗ 60ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಕಲಾವಿದರಲ್ಲಿಯೂ ಕಮಿಷನ್ ಪಡೆಯುವ ಮೂಲಕ ನಾಡ ಹಬ್ಬ ದಸಾರಕ್ಕೆ ಕಲಂಕ ತಂದಿದ್ದಾರೆ ಎಂದು ಆರೋಪಿಸಿದರು.


ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ವಂದಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ ಮನವಿ ಪತ್ರ ವಾಚಿಸಿದರು. ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.
ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಮುಕುಂದ ಬಜತ್ತೂರು, ಹರೀಶ್ ಬಿಜತ್ರೆ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ,
ನಗರ ಸಭಾ ಸದಸ್ಯರಾದ ವಿದ್ಯಾಗೌರಿ, ಗೌರಿ ಬನ್ನೂರು, ಇಂದಿರಾ ಪುರುಷೋತ್ತಮ ಆಚಾರ್ಯ, ಮೋಹಿನಿ ವಿಶ್ವನಾಥ, ಮನೋಹರ್ ಕಲ್ಲಾರೆ, ಪೂರ್ಣಿಮಾ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಸದಸ್ಯ ರಾಘವೇಂದ್ರ, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ, ಉಪಾಧ್ಯಕ್ಷ ಉಮೇಶ್, ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ, ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ ಕಬ್ಬಿನಹಿತ್ತಿಲು, ರವೀಂದ್ರ ಭಂಡಾರಿ ಬೈಂಕ್ರೋಡು, ಶರತ್‌ಚಂದ್ರ ಬೈಪಾಡಿತ್ತಾಯ, ಜಯಶ್ರೀ ಶೆಟ್ಟಿ, ಯಶಸ್ವಿನಿ ಶಾಸ್ತ್ರೀ ಸೇರಿದಂತೆ ಹಲವು ಮಂದಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here