ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನಿಗದಿ ಸಹಿತ ವಿವಿಧ ಬೇಡಿಕೆಗಳ ಆಗ್ರಹ-ನ.7 ರಂದು ದ.ಕ ಜಿಲ್ಲೆಯಲ್ಲಿ ಬಿಸಿಯೂಟ ಕೆಲಸ ಸ್ಥಗಿತ

0

ಪುತ್ತೂರು: ಅಕ್ಷರದಾಸೋಹ ಯೋಜನೆಯನ್ನು ಸಂಪೂರ್ಣ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು, ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿ ಕೆಲಸದ ಭದ್ರತೆ,ಸಹಿತ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅ.30ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಕಾಲ ಬೇಡಿಕೆ ಈಡೇರುವ ತನಕ ನಡೆಯುತ್ತಿರುವ ಹೋರಾಟಕ್ಕೆ ನ.7ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರ ದಾಸೋಹ ನೌಕರರರು ಅಡುಗೆ ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಾದಿಲ್ವಾರು ಜಂಟಿ ಖಾತೆ ಬದಲಾವಣೆ ಹಿಂಪಡೆದು ಮುಖ್ಯ ಅಡುಗೆಯವರ ಹೆಸರಲ್ಲೇ ಇರಿಸಬೇಕು. 2022 ರಲ್ಲಿ 60 ವರ್ಷ ಆಗಿದೆ ಎಂದು ಕೆಲಸದಿಂದ ತೆಗೆದಾಗ ಅವರಿಗೆ ತಲಾ ರೂ. 1ಲಕ್ಷ ಪರಿಹಾರ ನೀಡಬೇಕು. ನಿವೃತ್ತಿ ವೇತನ, ನಿವೃತ್ತಿ ಫಂಡ್ ಜಾರಿಗೆ ಬರಬೇಕು. ಕಳೆದ ಏಪ್ರಿಲ್ ಬಜೆಟ್‌ನಲ್ಲಿ ರೂ.1ಸಾವಿರ ಏರಿಕೆ ಮಾಡಿದ್ದನ್ನು ಜನವರಿ 2023ಕ್ಕೆ ಅನ್ವಯಿಸಿ ಜಾರಿ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯ 6 ನೇ ವಿಷಯಕ್ಕೆ ಸಂಬಂದಿಸಿ ಗ್ಯಾರೆಂಟಿ ವೇತನವನ್ನು ತಕ್ಷಣ ಜಾರಿ ಮಾಡಬೇಕು. ಪ್ರತಿ ಶಾಲೆಯಲ್ಲೂ ಕನಿಷ್ಠ 2 ಜನ ಅಡುಗೆಯವರು ಕಡ್ಡಾಯ ಇರಬೇಕು ಸಹಿತ ವಿವಿಧ ಬೇಡಿಕೆಗಳನ್ನು ಪ್ರತಿಭಟನೆ ವೇಳೆ ಸರಕಾರದ ಮುಂದಿಡಲಿದ್ದಾರೆ. ನ.10ರ ಒಳಗೆ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟ ಬಿಸಿಯೂಟವನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರದಿಂದ ಸಂಬಳ ಏರಿಸದಿರುವುದು ಖಂಡನೀಯ:
ಮಹಿಳಾ ಸಬಲೀಕರಣ ಎಂದು ಬಾಯಲ್ಲಿ ಹೇಳಿದರೆ ಸಾಲದು. ಅದು ದುಡಿದು ಬದುಕುವ ಮಹಿಳೆಯರಿಗೆ ಬದುಕು ಸಂಬಳ ನೀಡುವ ಮೂಲಕ ಸಾಬೀತು ಪಡಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಜಂಟಿ ಜವಾಬ್ದಾರಿಯಲ್ಲಿ ನಡೆಯುವ ಅಕ್ಷರದಾಸೋಹ ಯೋಜನೆಯ ಕೆಲಸಗಾರರಿಗೆ ಕೇಂದ್ರ ಸರಕಾರ ಒಂದು ಪೈಸೆ ಸಂಬಳ ಏರಿಸದಿರುವುದು ಖಂಡನೀಯ ಎಂದು ಬಿ.ಎಂ.ಭಟ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಪಿ.ಕೆ.ಸತೀಶನ್, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಧಾ ಕೊಳ್ತಿಗೆ, ಕಾರ್ಯದರ್ಶಿ ರಂಜಿತ ಕೋಡಿಂಬಾಡಿ, ಖಜಾಂಜಿ ಶ್ವೇತ ಪರ್ಲಡ್ಕ, ಉಪಾಧ್ಯಕ್ಷರದ ಲಕ್ಷ್ಮೀ ಮುಕ್ವೆ, ತೆರೆಸಾ ನಿಡ್ಪಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here