ಒಳಮೊಗ್ರು ಗ್ರಾಪಂಗೆ ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಭೇಟಿ – ಗ್ರಾಪಂ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ಲಾಘನೆ

0

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ತು ಸದಸ್ಯ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಒಳಮೊಗ್ರು ಗ್ರಾಮ ಪಂಚಾಯತ್ ಕಛೇರಿಗೆ ನ.10 ರಂದು ಭೇಟಿ ನೀಡಿ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರ ಜೊತೆ ಮಾತನಾಡಿ ಗ್ರಾಪಂ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಸ್ವಾಗತಿಸಿ, ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಗ್ರಾಪಂಗೆ ಮಂಜೂರುಗೊಂಡ ವಸತಿ ಯೋಜನೆಯಲ್ಲಿ ಸುಮಾರು 8 ಫಲಾನುಭವಿಗಳು ಇನ್ನೂ ಕೂಡ ಮನೆ ನಿರ್ಮಾಣ ಕೆಲಸ ಆರಂಭಿಸದೇ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣವೇ ಅವರಿಗೆ ಕೆಲಸ ಆರಂಭಿಸಲು ಸದಸ್ಯರುಗಳು ಪ್ರೋತ್ಸಾಹ ನೀಡಬೇಕು, ಸರಕಾರದಿಂದ ಸಿಗುವುದು ಕೇವಲ ಪ್ರೋತ್ಸಾಹ ಧನ ಅದರಿಂದ ದೊಡ್ಡ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ ಆದರೆ ವಾಸಕ್ಕೆ ತಕ್ಕುದಾದ ಮನೆ ನಿರ್ಮಿಸಲು ಫಲಾನುಭವಿಗಳಿಗೆ ಗ್ರಾಪಂನಿಂದ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು. ಇದೇ ರೀತಿ ನಿವೇಶನಕ್ಕೆ ಸಂಬಂಧಪಟ್ಟಂತೆ ಗ್ರಾಮದಲ್ಲಿ ಸರಕಾರಿ ಜಾಗವಿದ್ದರೆ ಅದನ್ನು ಗುರುತಿಸಿ ಕಂದಾಯ ಇಲಾಖೆ ಮೂಲಕ ಗ್ರಾಪಂ ವ್ಯಾಪ್ತಿಗೆ ಪಡೆದುಕೊಂಡು ಅರ್ಹರಿಗೆ ಮನೆ ನಿವೇಶನ ಕೊಡುವ ಕೆಲಸ ಆಗಬೇಕು ಎಂದರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ಹೆಚ್ಚು ಮಾನವ ದಿನದ ಗುರಿಯನ್ನು ಪಂಚಾಯತ್ ಸಾಧಿಸಬೇಕು ಎಂದು ತಿಳಿಸಿದರು. ತೆರಿಗೆ ಸಂಗ್ರಹದಲ್ಲಿ ಒಳಮೊಗ್ರು 87 ಶೇ.ಗುರಿ ಸಾಧಿಸಿರುವುದು ಶ್ಲಾಘನೀಯ ಕನಿಷ್ಠ ಶೇ.95 ರಷ್ಟಾದರೂ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.



ಸಭೆ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ
ಪಂಚಾಯತ್‌ನಲ್ಲಿ ತಿಂಗಳಿಗೊಂದು ಸಾಮಾನ್ಯ ಸಭೆ ನಡೆಯುತ್ತದೆ ಆದರೆ ಸಾಮಾನ್ಯ ಸಭೆಯಲ್ಲದೆ ಇತರ ದಿನಗಳಲ್ಲಿ ಪಂಚಾಯತ್‌ನ ಎಲ್ಲಾ ಸದಸ್ಯರುಗಳು ಒಮ್ಮತದಿಂದ ಕಛೇರಿಯಲ್ಲಿ ಸಭೆ ಸೇರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತುಕತೆ ನಡೆಸಬೇಕು ಎಂದು ಸೂಚನೆ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರು ಇದರಿಂದ ಪಂಚಾಯತ್‌ನ ಅಭಿವೃದ್ಧಿ ಮತ್ತಷ್ಟು ಸಾಧ್ಯವಿದೆ ಎಂದರು. ರಾಜಕೀಯ ರಹಿತವಾಗಿ ಸೇರಿಕೊಂಡು ಗ್ರಾಮದ ಅಭಿವೃದ್ಧಿಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಹಾಗೂ ಈ ನಿರ್ಧಾರಗಳನ್ನು ಸಾಮಾನ್ಯ ಸಭೆಯಲ್ಲಿಟ್ಟು ನಿರ್ಣಯಗಳನ್ನು ಜಾರಿ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು. ಇದಲ್ಲದೆ ವಿಶೇಷ ಕೆಡಿಪಿ ಸಭೆಯನ್ನು ಕರೆಯಬೇಕು ಇದಕ್ಕೆ ಶಾಸಕರನ್ನು, ವಿಧಾನ ಪರಿಷತ್ತು ಸದಸ್ಯರುಗಳನ್ನು ಅಲ್ಲದೆ ಎಲ್ಲಾ ಅಧಿಕಾರಿಗಳನ್ನು ಕೂಡ ಆಹ್ವಾನಿಸಬೇಕು ಎಂದು ತಿಳಿಸಿದರು.

ಸಿಬ್ಬಂದಿಗಳ ಕೊರತೆ ಇದೆ
ಒಳಮೊಗ್ರು ಗ್ರಾಪಂನಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಈಗಾಗಲೇ 2 ಹುದ್ದೆ ಖಾಲಿ ಇದೆ. ಅಲ್ಲದೆ ಅಭಿವೃದ್ಧಿ ಅಧಿಕಾರಿ ಹುದ್ದೆ ಕೂಡ ಖಾಲಿ ಇದ್ದು ಪ್ರಭಾರ ಅಭಿವೃದ್ಧಿ ಅಧಿಕಾರಿಯವರು ಕರ್ತವ್ಯದಲ್ಲಿದ್ದಾರೆ ಎಂದು ಸದಸ್ಯರಾದ ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲರವರು ಶಾಸಕರು ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ನೀಡಿದ ಕೋಟರವರು, ಸಿಬ್ಬಂದಿಗಳ ನೇಮಕಾತಿ ಆದೇಶವು ಸದ್ಯದಲ್ಲೇ ಆಗಲಿದೆ, ಪಿಡಿಓರವರ ಬಗ್ಗೆಯೂ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
3 ಲಕ್ಷ ರೂ.ಅನುದಾನ ಭರವಸೆ
ಪಂಚಾಯತ್ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗುವಂತೆ ವಿಧಾನ ಪರಿಷತ್ತು ಸದಸ್ಯರ ಸ್ವಂತ ನಿಧಿಯಿಂದ 3 ಲಕ್ಷ ರೂ.ಅನುದಾನವನ್ನು ಒಳಮೊಗ್ರು ಗ್ರಾಪಂಗೆ ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಈ ಸಂದರ್ಭದಲ್ಲಿ ಭರವಸೆ ನೀಡಿದರು ಇದನ್ನು ಪಂಚಾಯತ್ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.

ಗ್ರಂಥಾಲಯ, ಸಭಾ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ
ಈಗಾಗಲೇ ರಾಜ್ಯದಲ್ಲೇ ಮಾದರಿಯಾಗುವಂತಹ ಪಂಚಾಯತ್ ಕಛೇರಿ ಕಟ್ಟಡವನ್ನು ಎಲ್ಲರ ಸಹಕಾರ ಪಡೆದುಕೊಂಡು ನಿರ್ಮಿಸಲಾಗಿದೆ. ಮುಂದಕ್ಕೆ ಕಟ್ಟಡದ ಮೇಲ್ಭಾಗದಲ್ಲಿ ಪಂಚಾಯತ್ ಸಭಾಭವನ ಹಾಗೂ ಗ್ರಂಥಾಲಯ ನಿರ್ಮಾಣ ಮಾಡುವ ಯೋಜನೆ ಇದ್ದು ಇದಕ್ಕೆ ಅನುದಾನದ ಕೊರತೆ ಇದೆ ಎಂದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ತಾವು ತಮ್ಮ ವತಿಯಿಂದ ಗ್ರಂಥಾಲಯ ಹಾಗೂ ಸಭಾ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಕೋಟರವರು ತಿಳಿಸಿದರು.

ಗ್ರಾಪಂ ನೌಕರರಿಗೆ ಇಎಸ್‌ಐ ಸೌಲಭ್ಯ ನೀಡುವಂತೆ ಮನವಿ
ಗ್ರಾಮ ಪಂಚಾಯತ್ ನೌಕರರಿಗೆ ಯಾವುದೇ ಭದ್ರತೆ ಇರುವುದಿಲ್ಲ, ಭದ್ರತೆ ಇಲ್ಲದೆ ಕೆಲಸ ಮಾಡುವವರು ಪಂಚಾಯತ್ ನೌಕರರು ಆಗಿದ್ದಾರೆ. ಆದ್ದರಿಂದ ಕನಿಷ್ಠ ಇಎಸ್‌ಐ ಸೌಲಭ್ಯವನ್ನಾದರೂ ಸರಕಾರದ ವತಿಯಿಂದ ಮಾಡಿಕೊಡುವಂತೆ ಗ್ರಾಪಂ ಸಿಬ್ಬಂದಿಗಳಾದ ಜಾನಕಿ ಮತ್ತು ಗುಲಾಬಿಯವರು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ನೀಡುವ ಮೂಲಕ ವಿನಂತಿಸಿಕೊಂಡರು. ಈ ಬಗ್ಗೆ ಮಾತನಾಡಿದ ಕೋಟರವರು, ಇಎಸ್‌ಐ ಮಾಡಬೇಕಾದರೆ ಒಂದು ಪಂಚಾಯತ್‌ನಲ್ಲಿ ಕನಿಷ್ಟ 10 ಮಂದಿ ಇರಬೇಕಾಗುತ್ತದೆ ಆದರೆ ತಾಲೂಕಿನಲ್ಲಿ ಒಂದು ಯುನಿಟ್ ಮಾಡಿಕೊಂಡು ಆ ಮೂಲಕ ಇಎಸ್‌ಐ ಸೌಲಭ್ಯ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ಸಿಗುತ್ತಿದ್ದ ಸ್ಕಾಲರ್‌ಶಿಪ್‌ನಿಂದ ಹಿಡಿದು ಹಲವು ಸೌಲಭ್ಯಗಳನ್ನು ಸರಕಾರ ಈ ವರ್ಷದಿಂದ ತಡೆಹಿಡಿದಿದೆ. ಇದರಿಂದ ಕಟ್ಟಡ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲರವರು ಕೋಟರವರ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ಮಾಡುತ್ತೇನೆ ಎಂದು ಕೋಟ ಭರವಸೆ ನೀಡಿದರು. ಪಂಚಾಯತ್ ವತಿಯಿಂದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಶಾಲು, ಹೂ ಗುಚ್ಛ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ತಾಪಂ ಸಹಾಯಕ ಲೆಕ್ಕ ಪರಿಶೋಧಕ ಪ್ರವೀಣ್ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಲತೀಫ್, ರೇಖಾ, ವನಿತಾ, ನಳಿನಾಕ್ಷಿ, ಶಾರದಾ, ಸುಂದರಿ, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಗ್ರಾಪಂ ಮಾಜಿ ಸದಸ್ಯೆ ಉಷಾ ನಾರಾಯಣ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆರವರು ಪಂಚಾಯತ್ ಕೆಲಸ ಕಾರ್ಯಗಳ ಬಗ್ಗೆ ಕೋಟರವರಿಗೆ ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಗ್ರಾಪಂ ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಗ್ರಂಥಪಾಲಕಿ ಸಿರಿನಾ ಸಹಕರಿಸಿದ್ದರು.

LEAVE A REPLY

Please enter your comment!
Please enter your name here