ಪುತ್ತೂರು: 21ದಿನದ ಹಿಂದೆ ಬಸ್ನಿಂದ ಇಳಿಯುತ್ತಿದ್ದ ವೇಳೆ ಬಿದ್ದಿದ್ದ ಪ್ರಯಾಣಿಕರೊಬ್ಬರ ಗಾಯ ಉಲ್ಪಣಗೊಂಡ ಬಳಿಕ ಅವರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದು, ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ನಿವಾಸಿ ರಾಮ್ದಾಸ್ ಎಂಬವರು ಅ.31ರಂದು ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದು ಬೊಳುವಾರಿನಲ್ಲಿ ಇಳಿಯುತ್ತಿದ್ದ ವೇಳೆ ಬಸ್ ದಿಢೀರ್ ಮುಂದಕ್ಕೆ ಚಲಿಸಿದ್ದರಿಂದ ಅವರು ಡಾಮರು ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಅದಾದ ಬಳಿಕ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಪೊಲೀಸರಿಗೆ ದೂರು ನೀಡಿರಲಿಲ್ಲ.ಇದೀಗ ಗಾಯ ಉಲ್ಪಣಗೊಂಡ ಹಿನ್ನೆಲೆಯಲ್ಲಿ ಪುತ್ತೂರು ಸೌಮ್ಯ ಇಎನ್ಟಿ ಕ್ಲಿನಿಕ್ನಲ್ಲಿ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಅವರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಯಾಣಿಕರು ಇಳಿಯುತ್ತಿರುವುದನ್ನು ಸರಿಯಾಗಿ ಗಮನಿಸದೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಆರೋಪದಲ್ಲಿ ಚಾಲಕ ಮತ್ತು ಪ್ರಯಾಣಿಕರು ಪೂರ್ತಿಯಾಗಿ ಇಳಿಯುವುದನ್ನು ಗಮನಿಸದೆ ಚಾಲಕರಿಗೆ ಸರಿಯಾದ ಸೂಚನೆಯನ್ನು ನೀಡದೇ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಬಸ್ ನಿರ್ವಾಹಕನ ವಿರುದ್ಧ ಗಾಯಾಳು ರಾಮದಾಸ್ ಅವರ ಪುತ್ರಿ ದಿವ್ಯಾಶ್ರೀ ಅವರು ನ.20ರಂದು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.