ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

0

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ
ದೃಢೀಕರಣ ಪತ್ರಕ್ಕೆ ಉಪಾಧ್ಯಕ್ಷರ ಸೀಲ್, ಸಹಿ- ಚರ್ಚೆ ವಾಗ್ದಾಳಿ

ಪುತ್ತೂರು: ಗ್ರಾಮ ಪಂಚಾಯತ್‌ಗೆ ಸಲ್ಲತಕ್ಕ ಕುಡಿಯುವ ನೀರಿನ ಶುಲ್ಕವನ್ನು ಬಹಳಷ್ಟು ಫಲಾನುಭವಿಗಳು ಪಾವತಿಸದೇ ಬಾಕಿ ಇಟ್ಟಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಬಿಲ್ ಬಾಕಿ ಇಟ್ಟಿರುವ ಫಲಾನುಭವಿಗಳಿಗೆ ಈಗಾಗಲೇ ನೋಟೀಸ್ ನೀಡಿದ್ದೇವೆ. ನೋಟೀಸ್ ಕೈ ಸೇರಿದ ತಕ್ಷಣವೇ ಕಛೇರಿಗೆ ಬಂದು ಬಿಲ್ ಪಾವತಿಸಬೇಕು ಇಲ್ಲದಿದ್ದರೆ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಎಂದು ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನ.23 ರಂದು ಗ್ರಾಪಂ ಕಛೇರಿಯಲ್ಲಿ ನಡೆಯಿತು. ಕುಡಿಯುವ ನೀರಿನ ಸರಬರಾಜಿನ ಬಗ್ಗೆ ಸದಸ್ಯರು ಸಭೆಯ ಗಮನ ಸೆಳೆದರು. ನೀರಿನ ಬಿಲ್ ಪಂಚಾಯತ್‌ಗೆ ಸರಿಯಾದ ಪಾವತಿಯಾಗುತ್ತಿಲ್ಲ ಕೆಲವು ಫಲಾನುಭವಿಗಳಿಂದ 10 ಸಾವಿರಕ್ಕೂ ಅಧಿಕ ಮೊತ್ತ ಬರಲು ಬಾಕಿ ಇದೆ. ಈಗಾಗಲೇ ಸುಮಾರು 10 ಲಕ್ಷಕ್ಕೂ ಅಧಿಕ ಹಣ ಬರಲು ಬಾಕಿ ಇದೆ ಈ ಬಗ್ಗೆ ಪಂಚಾಯತ್‌ನಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರು ಕೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಬಿಲ್ ಬಾಕಿ ಇರುವ ಫಲಾನುಭವಿಗಳಿಗೆ ಪ್ರಥಮ ಹಂತದ ನೋಟೀಸ್ ನೀಡುವ ಕೆಲಸ ಆಗುತ್ತಿದೆ. ನೋಟೀಸ್ ಕೈಸೇರಿದ ಬಳಿಕವೂ ಹಣ ಪಾವತಿಸದಿದ್ದರೆ ಸಂಪರ್ಕವನ್ನು ಕಡಿತ ಮಾಡುವುದು ಅಥವಾ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು, ಈ ಬಗ್ಗೆ ಈಗಾಗಲೇ ನೀರಿನ ಸಮಿತಿಯವರ ಮೀಟಿಂಗ್ ಕರೆಸಿ ಚರ್ಚಿಸಿದ್ದೇವೆ ಮತ್ತು ಅವರಿಗೆ ಜವಬ್ದಾರಿ ಕೊಟ್ಟಿದ್ದೇವೆ ಎಂದು ತಿಳಿಸಿದರು. ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಯುವುದಿಲ್ಲ, ನೀರಿನ ಸಮಿತಿ ಮೀಟಿಂಗ್ ಬಗ್ಗೆಯೂ ನಮಗೆ ಗೊತ್ತಾಗುವುದಿಲ್ಲ ಎಂದು ಚಿತ್ರಾ ಬಿ.ಸಿ ಹೇಳಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು, ಮುಂದಿನ ತಿಂಗಳು ಮತ್ತೆ ನೀರಿನ ಸಮಿತಿಯವರ ಮೀಟಿಂಗ್ ಕರೆಯುವ ಎಂದರು. ಪಂಚಾಯತ್ ಸೊತ್ತು ಆಗಿರುವ ಪೈಪುಗಳ ಬಗ್ಗೆ ಕೇಶವರು ಜವಬ್ದಾರಿ ತೆಗೆದುಕೊಳ್ಳಬೇಕು ಅದು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಶೀನಪ್ಪ ನಾಯ್ಕ ತಿಳಿಸಿದರು. ಪ್ರಭಾರ ಪಿಡಿಒ ಬಂದ ಬಳಿಕ ನನಗೆ ಕುಡಿಯುವ ನೀರಿನ ಪೈಪು ದುರಸ್ತಿ ಇತ್ಯಾದಿಗಳ ಬಿಲ್ ಹಣ ಪಾವತಿಯಾಗಿಲ್ಲ ನಾನು ಕೈಯಿಂದ ಹಣ ಹಾಕಿ ದುರಸ್ತಿ ಮಾಡಿಸುತ್ತಿದ್ದೇನೆ ಎಂದು ಪಂಪು ಅಪರೇಟರ್ ಕೇಶವ ಹೇಳಿದರು.


ಖಾಯಂ ಅಭಿವೃದ್ಧಿ ಅಧಿಕಾರಿ ನೇಮಿಸಿ
ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾಗಿದ್ದ ಅವಿನಾಶ್ ಬಿ.ಆರ್‌ರವರು ತೆರಳಿದ ಬಳಿಕ ಪ್ರಭಾರ ಪಿಡಿಓ ಆಗಿ ಕೆಯ್ಯೂರು ಗ್ರಾಪಂನ ನಮಿತಾ ಎ.ಕೆರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಮೂರು ದಿನ ಮಾತ್ರ ಪಿಡಿಓ ಕಾರ್ಯನಿರ್ವಹಿಸುತ್ತಿದ್ದು ಒಳಮೊಗ್ರು ಗ್ರಾಪಂ ದೊಡ್ಡ ಗ್ರಾಮವಾಗಿರುವುದರಿಂದ ಇಲ್ಲಿಗೆ ಖಾಯಂ ಅಭಿವೃದ್ಧಿ ಅಧಿಕಾರಿಯ ಅವಶ್ಯಕತೆ ಇದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳಬೇಕು ಎಂದು ಸದಸ್ಯರು ತಿಳಿಸಿದರು. ಅವಿನಾಶ್ ಬಿ.ಆರ್.ರವರು ತೆರಳಿದ ಬಳಿಕ ಗ್ರಾಪಂನಲ್ಲಿ ಕೆಲಸ ಕಾರ್ಯಗಳು ನಿದಾನಗತಿಯಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂತು.


ಅವಧಿ ಮೀರಿದ ಬ್ಯಾನರ್ ಅನ್ನು ತೆರವುಗೊಳಿಸಿ
ಗ್ರಾಪಂ ವ್ಯಾಪ್ತಿಯಲ್ಲಿ ಪರವಾನಗೆ ಪಡೆದುಕೊಂಡು ಹಾಕಿರುವ ಬ್ಯಾನರ್‌ಗಳನ್ನು ಪರವಾನೆಗೆ ಅವಧಿ ಮುಗಿದ ಬಳಿಕ ತೆರವುಗೊಳಿಸುವ ಕೆಲಸ ನಡೆಯುತ್ತಿದೆಯಾ ಎಂದು ಲತೀಫ್ ಪ್ರಶ್ನಿಸಿದರು. ಕುಂಬ್ರದ ಕೆಲವು ಕಡೆ ತಿಂಗಳುಗಟ್ಟಲೆ ಬ್ಯಾನರ್‌ಗಳು ಇರುತ್ತವೆ ಇದಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದರು. ಇದಕ್ಕೆ ಮಹೇಶ್ ರೈ, ಪ್ರದೀಪ್, ನಿಮಿತಾ ರೈ ಧ್ವನಿಗೂಡಿಸಿದರು. ಅಡ್ಕದಲ್ಲಿ ಉಪಾಧ್ಯಕ್ಷರ ಫೋಟೋ ಇರುವ ಬ್ಯಾನರೇ ಹಾಕಿ ತಿಂಗಳಾಯಿತು ಅದಕ್ಕೆ ಎಷ್ಟು ದಿನದ ಪರವಾನಗೆ ಇದೆ ಎಂದು ಮಹೇಶ್ ರೈ ಮತ್ತಿತರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಅಶ್ರಫ್‌ರವರು, ನಾವು ಈ ಹಿಂದೆ ಒಂದು ನಿರ್ಣಯ ಮಾಡಿದ್ದೇವೆ. ಅವಧಿ ಮೀರಿದ ಬ್ಯಾನರ್ ಅನ್ನು ಪಂಚಾಯತ್‌ನಿಂದಲೇ ತೆರವುಗೊಳಿಸುವುದು ಎಂದು ಅದರಂತೆ ಕ್ರಮ ಕೈಗೊಳ್ಳಿ ಎಂದರು. ಇದಕ್ಕೆ ಅಧ್ಯಕ್ಷೆ ತ್ರಿವೇಣಿಯವರು ಉತ್ತರಿಸಿ, ನೀವು ಉಪಾಧ್ಯಕ್ಷರಾಗಿದ್ದುಕೊಂಡು ಬ್ಯಾನರ್ ಅನ್ನು ತೆರವುಗೊಳಿಸುವ ಕೆಲಸ ಮಾಡಬಹುದಿತ್ತಲ್ವ ಎಂದು ಕೇಳಿದರು. 15 ದಿನಗಳ ಬಳಿಕ ಪರವಾನಗೆ ನವೀಕರಿಸದಿದ್ದರೆ ಅಂತಹ ಬ್ಯಾನರ್‌ಗಳನ್ನು ಮಾಲಕರಿಗೆ ಸೂಚನೆ ನೀಡಿ ತೆರವುಗೊಳಿಸಿ ಎಂದು ಅಧ್ಯಕ್ಷರು ಖಡಕ್ ವಾರ್ನಿಂಗ್ ನೀಡಿದರು. ಇದಕ್ಕೆ ಸಿಬ್ಬಂದಿಗಳು ನಾವು ಬ್ಯಾನರ್ ತೆರವುಗೊಳಿಸಿದ ಬಳಿಕ ನಮಗೆ ಜೋರು ಮಾಡುತ್ತಾರೆ ನಾವೇನು ಮಾಡೋದು ಎಂದು ಹೇಳಿದರು. ಯಾರೇ ಜೋರು ಮಾಡಿದರು ನನಗೆ ತಿಳಿಸಿ ಎಂದು ಅಧ್ಯಕ್ಷರು ಧೈರ್ಯ ತುಂಬಿದರು.


ದೃಢೀಕರಣ ಪತ್ರಕ್ಕೆ ಉಪಾಧ್ಯಕ್ಷರ ಸೀಲ್,ಸಹಿ-ಸದಸ್ಯರೊಳಗೆ ಚರ್ಚೆ, ವಾಗ್ದಾಳಿ
ಗ್ರಾಪಂನಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಇರುವ ಕಾರ್ಯಗಳೇನು? ಅಧ್ಯಕ್ಷರು ಇರುವಾಗಲೇ ಉಪಾಧ್ಯಕ್ಷರು ದಾಖಲೆಗೆ ಸೀಲ್, ಸಹಿ ಹಾಕುವುದು ಎಷ್ಟು ಸರಿ ಎಂದು ಪ್ರದೀಪ್ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಹೇಶ್ ರೈಯವರು, ಪಂಚಾಯತ್‌ಗೆ ಬಂದ ಅರ್ಜಿಗಳಿಗೆ ಅಧ್ಯಕ್ಷರು ಇರುವಾಗಲೇ ಅವರ ಒಪ್ಪಿಗೆ ಪಡೆಯದೇ ಉಪಾಧ್ಯಕ್ಷರು ತಮ್ಮ ಸೀಲ್ ಮತ್ತು ಸಹಿ ಹಾಕಿ ಕೊಟ್ಟಿದ್ದಾರೆ. ಸರಿಯಾದ ದಾಖಲೆ ಇಲ್ಲ ಎಂದು ಪೆಡ್ಡಿಂಗ್ ಇಟ್ಟಿದ್ದ ಅರ್ಜಿಗಳಿಗೆ ಉಪಾಧ್ಯಕ್ಷರು ಸೀಲ್,ಸಹಿ ಹಾಕಿ ಕೊಟ್ಟದ್ದು ಎಷ್ಟು ಸರಿ? ಇದು ಉಪಾಧ್ಯಕ್ಷರು ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ ಮಹೇಶ್ ರೈಯವರು ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಲತೀಫ್ ಟೈಲರ್ ಧ್ವನಿಗೂಡಿಸಿದರು. ಈ ಬಗ್ಗೆ ಕೆಲ ಹೊತ್ತು ಭಾರೀ ಚರ್ಚೆ ನಡೆಯಿತು.


ಪ್ರಭಾರ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಸರಕಾರದ ಸುತ್ತೋಲೆ, ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಬೊಳ್ಳಾಡಿ, ಸಿರಾಜುದ್ದೀನ್, ಚಿತ್ರಾ ಬಿ.ಸಿ, ಸುಂದರಿ, ಶಾರದಾ, ನಿಮಿತಾ ರೈ, ಲತೀಫ್ ಟೈಲರ್, ಮಹೇಶ್ ರೈ ಕೇರಿ, ಪ್ರದೀಪ್, ನಳಿನಾಕ್ಷಿ, ರೇಖಾ, ವನಿತಾ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಮೋಹನ್, ಸಹಕರಿಸಿದ್ದರು.

ಬಡವರಿಗಾಗಿ ನಾನು ಜೈಲಿಗೆ ಹೋಗಲು ಸಿದ್ದ…!
ನಾನು ಎಲ್ಲಿಯೂ ತಪ್ಪು ಮಾಡಿಲ್ಲ, ಆಧಾರ್ ತಿದ್ದುಪಡಿಗಾಗಿ ದೃಢೀಕರಣ ಪತ್ರಕ್ಕಾಗಿ ಪಂಚಾಯತ್‌ಗೆ ಬಂದ 2 ಅರ್ಜಿಗಳಿಗೆ ಅಧ್ಯಕ್ಷರು ಸಹಿ ಹಾಕಿರಲಿಲ್ಲ, ಯಾವ ಕಾರಣಕ್ಕೆ ಸಹಿ ಹಾಕಿರಲಿಲ್ಲ ಎಂದು ನನಗೆ ಗೊತ್ತಿರಲಿಲ್ಲ, ಅರ್ಜಿದಾರರಿಗೆ ಆ ದಿನ ಅಗತ್ಯವಾಗಿ ದೃಢೀಕರಣ ಪತ್ರ ಬೇಕಾಗಿತ್ತು ಅದ್ದರಿಂದ ದೃಢೀಕರಣ ಪತ್ರಕ್ಕೆ ನಾನು ನನ್ನ ಉಪಾಧ್ಯಕ್ಷರ ಸೀಲ್ ಹಾಕಿ ನನ್ನದೇ ಸಹಿ ಮಾಡಿ ಅದನ್ನು ಅರ್ಜಿದಾರರಿಗೆ ಕೊಟ್ಟಿದ್ದೇನೆ. ಅದು ಆಧಾರ್ ಕೇಂದ್ರದಲ್ಲಿ ಪಾಸ್ ಆಗಿದೆ. ನಾನು ಎಲ್ಲಿಯೂ ಅಧ್ಯಕ್ಷರ ಸೀಲ್ ಮತ್ತು ಸಹಿಯನ್ನು ಪೋರ್ಜರಿ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಬಡವರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಅಧ್ಯಕ್ಷರು ಸಹಿ ಹಾಕದೇ ಇಟ್ಟಿದ್ದ ಅರ್ಜಿಗಳಿಗೆ ನಾನು ಸಹಿ ಮಾಡಿಕೊಟ್ಟಿದ್ದು, ಕೇಸು ಕೊಡುವುದಾದರೆ ಕೊಡಿ, ಬಡವರಿಗಾಗಿ ನಾನು ಜೈಲಿಗೆ ಹೋಗಲೂ ಸಿದ್ದನಿದ್ದೇನೆ. ಒಂದು ವೇಳೆ ಅರ್ಜಿಯೊಂದಿಗೆ ಸರಿಯಾದ ದಾಖಲೆಗಳು ಇಲ್ಲದೇ ಇದ್ದಿದ್ದರೆ ಅದು ಆಧಾರ್ ಕೇಂದ್ರದಲ್ಲಿ ರಿಜೆಕ್ಟ್ ಆಗಬೇಕಿತ್ತು ಆದರೆ ಆಗಿಲ್ಲ. ಅಧ್ಯಕ್ಷರು ಆ ಅರ್ಜಿಗಳಿಗೆ ಮಾತ್ರ ಸಹಿ ಮಾಡದೇ ಇರಲು ಕಾರಣವೇನು? ಎಂದು ಗೊತ್ತಿಲ್ಲ, ರಾಜಕೀಯ ಮಾಡುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಸೇವೆ ಮಾಡುವುದು ನಮ್ಮ ಗುರಿಯಾಗಬೇಕು, ಅದನ್ನು ನಾನು ಮಾಡಿದ್ದೇನೆ ವಿನಹ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹೇಳಿದರು.

ಅಧ್ಯಕ್ಷರಿರುವಾಗಲೇ ಉಪಾಧ್ಯಕ್ಷರು ದಾಖಲೆಗಳಿಗೆ ಸಹಿ ಮಾಡುವುದು ಎಷ್ಟು ಸರಿ…?
ಪಂಚಾಯತ್‌ನಲ್ಲಿ ಅಧ್ಯಕ್ಷರು ಇರುವಾಗಲೇ ಪಂಚಾಯತ್‌ಗೆ ಬಂದಿರುವ ಅರ್ಜಿಗಳಿಗೆ ಉಪಾಧ್ಯಕ್ಷರು ತಮ್ಮ ಸೀಲ್ ಮತ್ತು ಸಹಿ ಮಾಡಿಕೊಡುವುದು ಎಷ್ಟು ಸರಿ..? ಎಂದು ಪ್ರಶ್ನಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಉಪಾಧ್ಯಕ್ಷರಾಗಿರುವ ಅಶ್ರಫ್ ಉಜಿರೋಡಿಯವರು, ಪಂಚಾಯತ್‌ಗೆ ಬಂದ ದೃಢೀಕರಣ ಪತ್ರವೊಂದಕ್ಕೆ ನನ್ನ ಒಪ್ಪಿಗೆ ಇಲ್ಲದೆ ಉಪಾಧ್ಯಕ್ಷರ ಸೀಲ್ ಮತ್ತು ಸಹಿ ಮಾಡಿ ಕೊಡುವ ಮೂಲಕ ಅಧಿಕಾರದ ದುರುಪಯೋಗ ಮಾಡಿದ್ದಾರೆ. ಒಂದು ವೇಳೆ ಅಧ್ಯಕ್ಷರು ಅನ್ಯ ಕಾರ್ಯನಿಮಿತ್ತ ಹೋಗಿದ್ದಾಗ ಅವರ ಒಪ್ಪಿಗೆ ಪಡೆದುಕೊಂಡು ಅರ್ಜಿಗಳಿಗೆ, ದಾಖಲೆಗಳಿಗೆ ಉಪಾಧ್ಯಕ್ಷರು ಸಹಿ ಮಾಡಬಹುದಾಗಿದೆ. ಅದು ಬಿಟ್ಟು ಅಧ್ಯಕ್ಷರು ಪಂಚಾಯತ್‌ನಲ್ಲಿ ಇರುವಾಗಲೇ ಅವರ ಒಪ್ಪಿಗೆ ಪಡೆಯದೇ ಮನಬಂದಂತೆ ಸಹಿ ಹಾಕಿ ಕೊಟ್ಟಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಆಧಾರ್ ತಿದ್ದುಪಡಿಗೆ ದೃಢೀಕರಣ ಪತ್ರ ಕೊಡಲು ಬಂದ ಅರ್ಜಿಗೆ ನಾನು ಸಹಿ ಮಾಡುವುದಿಲ್ಲ ಎಂದು ಹೇಳಿಲ್ಲ, ಕಛೇರಿಗೆ ಬಂದ ಅರ್ಜಿಗಳಲ್ಲಿ 1 ಅರ್ಜಿಯಲ್ಲಿ ಸರಿಯಾದ ದಾಖಲೆ ಇಲ್ಲದೆ ಇದ್ದುದರಿಂದ ಪೆಡ್ಡಿಂಗ್ ಇಟ್ಟಿದೆ. ಅರ್ಜಿದಾರರಿಗೆ ಫೋನ್ ಮಾಡಿ ದಾಖಲೆ ಪಡೆದು ಸಹಿ ಮಾಡುವ ಎಂದು ಆದರೆ ಸೋಮವಾರ ಬೆಳಿಗ್ಗೆ ಕಛೇರಿಗೆ ಬಂದು ನೋಡಿದಾಗ ಅರ್ಜಿ ಇರಲಿಲ್ಲ ನಾನು ಸಿಬ್ಬಂದಿಗಳಲ್ಲಿ ವಿಚಾರಿಸಿದೆ. ಬಡವರಿಗೆ ಇದುವರೆಗೆ ಅನ್ಯಾಯ ಮಾಡಿಲ್ಲ ಇನ್ನು ಮುಂದೆಯೂ ಮಾಡುವುದಿಲ್ಲ. ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here