ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗರವರಿಗೆ ಶ್ರದ್ಧಾಂಜಲಿ-ನುಡಿನಮನ

0

ಅನನ್ಯ ಸಾಧಕರ ಪಟ್ಟಿಯಲ್ಲಿ ಅಕ್ಷಯ್ ಹೆಸರು ಸದಾ ಇರುತ್ತದೆ:ಮಹೇಶ್ ಕಜೆ

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗರವರ ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಕಲ್ಲೇಗದಲ್ಲಿರುವ ಅಕ್ಷಯ್‌ರವರ ನಿವಾಸದಲ್ಲಿ ದ.4ರಂದು ನಡೆಯಿತು.


ಕಜೆ ಲಾ ಛೇಂಬರ್ಸ್ ಮುಖ್ಯಸ್ಥರಾದ ಖ್ಯಾತ ವಕೀಲ ಮಹೇಶ್ ಕಜೆ ಮಾತನಾಡಿ ಸುಂದರವಾದ ನಗು, ಮುಗ್ಧ ಮುಖ, ಆಕರ್ಷಕವಾದ ವ್ಯಕ್ತಿತ್ವಕ್ಕೆ ಅಕ್ಷಯ್ ಕಲ್ಲೇಗ ಎಂದು ಹೆಸರಿಡಬಹುದು. ಎಲ್ಲರ ಮನಸ್ಸಿನಲ್ಲಿಯೂ ತನ್ನದೇ ಛಾಪನ್ನು ಮೂಡಿಸಿದ ವ್ಯಕ್ತಿ ಅಕ್ಷಯ್ ಕಲ್ಲೇಗ. ಆತ ಮಾಡಿದ ಉತ್ತಮ ಕೆಲಸಕ್ಕೆ ಯಾರೂ ಸರ್ಟಿಫಿಕೇಟ್ ನೀಡಬೇಕಿಲ್ಲ. ಪ್ರಚಾರವೂ ಬೇಡ. ಅದು ಎಲ್ಲರ ಮನಸ್ಸಲ್ಲಿ ಇರುತ್ತದೆ. ಆತನ ಬಗ್ಗೆ ಇರುವ ಕೆಟ್ಟ ಅಭಿಪ್ರಾಯಗಳ ಬಗ್ಗೆ ಆತನಿಗೂ ನೋವಿತ್ತು. ಈ ನೋವೇ ಆತನ ಸಾಧನೆಗೆ ಪ್ರೇರಣೆಯಾಗಿತ್ತು ಎಂದರು. ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ಬೇರೆ ಯಾವುದೇ ಒಳ್ಳೆಯ ವಿಷಯಗಳ ಬಗ್ಗೆ ಯಾರೂ ತಿಳಿದುಕೊಳ್ಳಲಿಲ್ಲ. ಅಕ್ಷಯ್ ಮಾಡಿದ ಒಳ್ಳೆಯ ಕೆಲಸಗಳು ಜನಮಾನಸಕ್ಕೆ ತಲುಪಲಿ. ಆತನ ಜೀವ ಬಲಿದಾನ ಆಗಿದ್ದೂ ಕೂಡ ಆತನ ಒಳ್ಳೆಯ ಗುಣಗಳಿಂದಲೇ. ಅವನ ಮನೋಧರ್ಮ, ಉತ್ಸಾಹ ಯಾವ ಯೋಧನಿಗೂ ಕಡಿಮೆ ಇಲ್ಲ. ಅನನ್ಯ ಸಾಧಕರ ಪಟ್ಟಿಯಲ್ಲಿ ಅಕ್ಷಯ್ ಎನ್ನುವ ಹೆಸರು ಸದಾ ಇರುತ್ತದೆ ಎಂದು ಹೇಳಿದ ಮಹೇಶ್ ಕಜೆ ಅವರು ಆತನ ಆತ್ಮಕ್ಕೆ ಸದ್ಗತಿ ಸಿಗಲಿ. ಆತ ಹಾಕಿಕೊಟ್ಟ ಹಾದಿಯನ್ನು ಆತನ ಒಡನಾಡಿಗಳು ಹಾಗೂ ಮನೆಯವರು ಮುಂದುವರಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.

ಅಕ್ಷಯ್ ಶ್ರಮಜೀವಿ-ಶ್ಯಾಮ್ ಸುದರ್ಶನ್:
ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಮಾತನಾಡಿ ಅಕ್ಷಯ್ ಕಲ್ಲೇಗ ಒಬ್ಬ ಶ್ರಮಜೀವಿ. ಧರ್ಮಾತ್ಮನಾಗಿ ಬಾಳಿದವ. ಮಹಾಪುರುಷರಿಗೆ ಕಡಿಮೆ ಇಲ್ಲದಂತೆ ಬದುಕಿದ್ದಾನೆ. ಅವನನ್ನು ಕಳಕೊಂಡ ನೋವು ನಮಗೆಲ್ಲರಿಗಿದೆ. ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದವರನ್ನು ತನ್ನ ಕಡೆಗೆ ಬೇಗ ಕರೆಸಿಕೊಳ್ಳುತ್ತಾನೆ. ಹುಲಿಕುಣಿತಕ್ಕೆ ಸ್ಟಾರ್‌ವ್ಯಾಲ್ಯೂ ತಂದುಕೊಟ್ಟವನು ಅಕ್ಷಯ್ ಕಲ್ಲೇಗ. ಕಲ್ಲೇಗ ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾನೆ. ಅವನು ಮಾಡಿದ ಒಳ್ಳೆಯ ಕೆಲಸಗಳು, ಸಮಾಜಕ್ಕೆ ನೀಡಿದ ಕೊಡುಗೆಗಳು ಚಿರವಾಗಿರುತ್ತದೆ. ಟೈಗರ್ಸ್ ತಂಡ ಅಕ್ಷಯ್‌ನ ಕನಸುಗಳನ್ನು ನನಸು ಮಾಡಲಿ. ನಿಮ್ಮೆಲ್ಲರ ಜೊತೆ ನಾವಿದ್ದೇವೆ ಎಂದರು.


ಮಧ್ಯಸ್ಥ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಅಕ್ಷಯ್‌ರವರ ತಂದೆ ಚಂದ್ರಶೇಖರ ಗೌಡ ಮತ್ತು ತಾಯಿ ಕುಸುಮಾವತಿಯವರು ಅಕ್ಷಯ್‌ರವರ ಭಾವಚಿತ್ರದ ಎದುರು ದೀಪ ಬೆಳಗಿಸಿದರು. ಬಳಿಕ ಅಕ್ಷಯ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಲ್ಲೇಗ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕಲ್ಲೇಗ, ಮಾಜಿ ಶಾಸಕ ಸಂಜೀವ ಮಠಂದೂರು, ಪುರಸಭಾ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಬನ್ನೂರು ಹಾಗೂ ಲೊಕೇಶ್ ಹೆಗ್ಡೆ ಉರ್ಲಾಂಡಿ, ಊರ ಗುರಿಕ್ಕಾರ ವೆಂಕಪ್ಪ ಗೌಡ ಶೇವಿರೆ, ಲೋಕಯ್ಯ ಗೌಡ ಕೆದಿಕ್ಕಾರು, ಯುವರಾಜ್ ಗೌಡ ಕೆದಿಕ್ಕಾರು, ಚಂದ್ರಶೇಖರ ಗೌಡರ ಸಹೋದರಿ ಸುಮತಿ ನಾರಾಯಣ ಗೌಡ ಹರಿಯಕೋಡಿ, ಅಕ್ಷಯ್ ಕಲ್ಲೇಗ ಸಹೋದರರಾದ ಅಖಿಲ್ ಮತ್ತು ಅಂಕಿತ್ ಸಹಿತ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಅಕ್ಷಯ್ ಕಲ್ಲೇಗ ಅವರು ಮುಖ್ಯಸ್ಥರಾಗಿದ್ದ ಟೀಮ್ ಕಲ್ಲೇಗ ಟೈಗರ್ಸ್ ತಂಡದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here