ಚೆನ್ನಾವರ ಶಾಲೆಯಲ್ಲಿ ಸಾಹಿತ್ಯ ಜಾಗೃತಿ ಕಾರ್ಯಕ್ರಮ

0

ಸವಣೂರು: ಮಕ್ಕಳಿಗೆ ಎಳವೆಯಲ್ಲೇ ಸಾಹಿತ್ಯದ ಕುರಿತು ಒಲವು ಮೂಡಿಸುವ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ ಶ್ಲಾಘನೀಯ. ಎಳವೆಯಲ್ಲೇ ಮಕ್ಕಳಿಗೆ ಕನ್ನಡ ಸಾಹಿತ್ಯ ಹಾಗೂ ಸ್ಪಷ್ಟ ಓದು, ಶುದ್ದ ಬರಹದ ಕುರಿತು ನಡೆಸುವ ಜಾಗೃತಿ ಕಾರ್ಯ ಉತ್ತಮ ಪ್ರಯತ್ನ ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.‌ ಹೇಳಿದರು. ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಡಬ ತಾಲೂಕು ಘಟಕ ಮತ್ತು ಚೆನ್ನಾವರ ಸ.ಕಿ.ಪ್ರಾ.ಶಾಲೆಯ ಸಹಯೋಗದಲ್ಲಿ ಚೆನ್ನಾವರ ಶಾಲೆಯಲ್ಲಿ ನಡೆದ ಸಾಹಿತ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಯ್ಯೂರು ಕ್ಲಸ್ಟರ್‌ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ, ಚೆನ್ನಾವರ ಶಾಲೆಯು ತಾಲೂಕಿನಲ್ಲಿ ಉತ್ತಮ ನಲಿಕಲಿ ಶಾಲೆ ಎಂದು ಗುರುಸಿದೆ. ಸ್ಪಷ್ಟ ಓದು-ಶುದ್ದ ಬರಹ ಕ.ಸಾ.ಪ.ನ ಜಾಗೃತಿ ಕಾರ್ಯ ಮಾತ್ರ ಅಲ್ಲ. ಶಿಕ್ಷಣ ಇಲಾಖೆಯ ಉದ್ದೇಶವೂ ಅದೇ. ಮಕ್ಕಳು ಬರೆದ ಕವನವನ್ನು ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸುವ ಕಲೆಯನ್ನೂ ಕರಗತಮಾಡಿಕೊಂಡರೆ ಉತ್ತಮ ಕವಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಸವಣೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂದೇಶ್‌ಕೆ.ಎನ್.‌ ಮಾತನಾಡಿ, ಇಡೀ ರಾಜ್ಯದಲ್ಲೇ ಶುದ್ದ ಕನ್ನಡ ಮಾತನಾಡುವವರು ದಕ್ಷಿಣ ಕನ್ನಡದವರು ಇದು ಹೆಮ್ಮೆಯ ವಿಚಾರ. ಮಕ್ಕಳಿಗೆ ಎಳವೆಯಲ್ಲೇ ಕಲಿಕೆಯ ಜತೆಗೆ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ ಅಭಿನಂದನೀಯ. ಶಾಲೆಯ ಎಲ್ಲಾ ಕಾರ್ಯಗಳಲ್ಲೂ ಗ್ರಾ.ಪಂ.ಸಂಪೂರ್ಣ ಸಹಕಾರ ಇರಲಿದೆ ಎಂದರು.

ಗ್ರಾ.ಪಂ.ಸದಸ್ಯೆ ವಿನೋದಾ ರೈ ಮಾತನಾಡಿ, ಚೆನ್ನಾವರ ಶಾಲೆಯೆಂದರೆ ಹಳ್ಳಿಯ ಮೂಲೆಯಲ್ಲಿರುವ ಶಾಲೆ.ಆದರೆ ಈ ಸಣ್ಣ ಶಾಲೆ ಜಿಲ್ಲೆ ,ರಾಜ್ಯ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.ಚೆನ್ನಾವರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಂತಾ ಕುಮಾರಿ ಅವರಿಗೆ ಜಿಲ್ಲಾ ಪ್ರಶಸ್ತಿ ಬಂದಿದ್ದು, ಶಾಲೆಯ ಬೆಳವಣಿಗೆಗೆ ಸಂದ ಗೌರವ. ಅದೇ ರೀತಿ 3 ಬಾರಿ ಪರಿಸರ ಇಲಾಖೆಯಿಂದ ಜಿಲ್ಲಾ ಪ್ರಶಸ್ತಿ ಬಂದಿದೆ. ಮಕ್ಕಳು ಕೂಡ ಎಲ್ಲಾ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್‌ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ಮಾತನಾಡಿ, ಚೆನ್ನಾವರ ಶಾಲೆ ಉತ್ತಮ ಪರಿಸರದಲ್ಲಿ ಇದೆ. ಮಕ್ಕಳಲ್ಲಿ ಕನ್ನಡ ಕುರಿತಾದ ಪ್ರೀತಿ ಹಾಗೂ ಒಲವು ಮೂಡಿಸವಲ್ಲಿ ಪೋಷಕರ ಪಾತ್ರವೂ ಮಹತ್ವದ್ದು. ಸಾಹಿತ್ಯ ಪರಿಷತ್‌ನ ಚಟುವಟಿಕೆಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಕ.ಸಾ.ಪ.ಅಧ್ಯಕ್ಷ ಕೆ. ಸೇಸಪ್ಪ ರೈ ಮಾತನಾಡಿ, ಕೊರೋನಾ ಬಂದ ಬಳಿಕ ಮಕ್ಕಳಲ್ಲಿ ಬರೆಯುವ ಹಾಗೂ ಓದುವ ಸಾಮರ್ಥ್ಯ ಕುಂಠಿತವಾಗಿದೆ ಎಂಬುದು ಅಧ್ಯಯನದಿಂದ ಕಂಡು ಕೊಂಡ ವಿಚಾರ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸ್ಪಷ್ಟ ಓದು ಶುದ್ದ ಬರಹ- ಸಾಹಿತ್ಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಪ್ರೋತ್ಸಾಹ ನೀಡಬೇಕು. ಹೀಗಾದಾಗ ಪ್ರತಿಭಾನ್ವಿತರ ಬೆಳವಣಿಗೆ ಸಾಧ್ಯ. ಮುಂದಿನ ವರ್ಷ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು, ಪೋಷಕರು ಪ್ರಯತ್ನಿಸಬೇಕು. ಅಭಿವೃದ್ದಿ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಪ್ರೋತ್ಸಾಹ ನೀಡುತ್ತೇವೆ ಎಂದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಶಾಲಾ ಭೂ ದಾನಿ ಬಾಲಕೃಷ್ಣ ರೈ ಚೆನ್ನಾವರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸದಸ್ಯ ಶರೀಫ್ ಕುಂಡಡ್ಕ, ಸವಣೂರು ಗ್ರಾ.ಪಂ.ಸಿಬ್ಬಂದಿ ದಯಾನಂದ ಮಾಲೆತ್ತಾರು, ಕ.ಸಾ.ಪ.ಕಡಬ ತಾಲೂಕಿನ ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್, ಸದಸ್ಯೆ ಪ್ರೇಮಾ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಜಯಂತಿ ರೈ ನೆಲ್ಯಾಜೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ, ಹಳೆ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಗುರು ಮಲ್ಲೇಶಯ್ಯ ಎಚ್.ಎಂ. ಪ್ರಸ್ತಾವನೆಯೊಂದಿಗೆ  ಸ್ವಾಗತಿಸಿದರು. ಶಿಕ್ಷಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಫೀಫಾ ಬಹುಮಾನಿತರ ಪಟ್ಟಿ ವಾಚಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ಕೆ. ವಂದಿಸಿದರು.

LEAVE A REPLY

Please enter your comment!
Please enter your name here