*ಮಕ್ಕಳಿಗೆ ಚಿಕ್ಕಂದಿನಲ್ಲೇ ಪ್ರೋತ್ಸಾಹ ಸಿಕ್ಕಾಗ ಅವರ ಭವಿಷ್ಯ ಉತ್ತಮವಾಗಲು ಸಾಧ್ಯ: ವಿಷ್ಣುನಾರಾಯಣ ಹೆಬ್ಬಾರ್
*ಕ್ರೀಡೆಯಲ್ಲಿ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಜ್ಜೆ ಗುರುತನ್ನು ಅಚ್ಚು ಒತ್ತಿರುವುದು ಸಂತಸದ ವಿಚಾರ: ಡಾ. ರವಿಕುಮಾರ್ ಎಲ್.ಪಿ.
ವಿಟ್ಲ: ಬಹಳ ಸುಂದರ ವಾತಾವರಣದಲ್ಲಿ ಶಾಲೆಯ ನಿರ್ಮಾಣವಾಗಿದೆ. ಒಂದಲ್ಲೊಂದು ವಿಚಾರದಲ್ಲಿ ಮಕ್ಕಳು ಪಾಲ್ಗೊಳ್ಳುವಿಕೆ ಇಲ್ಲಿ ಎದ್ದು ಕಾಣುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಜನಪ್ರೀಯತೆಯನ್ನು ಕಂಡ ಶಾಲೆ ಇದಾಗಿದೆ.
ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪ್ರೋತ್ಸಾಹ ನೀಡಿದಾಗ ಮಕ್ಕಳ ಭವಿಷ್ಯ ಉತ್ತಮವಾಗಲು ಸಾಧ್ಯ. ಸಣ್ಣದರಲ್ಲೇ ಮಕ್ಕಳಿಗೆ ಸುಂದರ ವೇದಿಕೆ ಕಲ್ಪಿಸುವ ಕೆಲಸ ಈ ‘ಜನಪ್ರೀಯ ಸೆಂಟ್ರಲ್ ಸ್ಕೂಲ್’ ನಿಂದ ಆಗುತ್ತಿದೆ. ಎಲ್ಲಾ ರೀತಿಯಲ್ಲಿಯೂ ಶಾಲೆ ವ್ಯವಸ್ಥಿತವಾಗಿದೆ. ಶಾಲೆ ಉತ್ತಮ ರೀತಿಯಲ್ಲಿ ಮುನ್ನಡೆದು ಯಶಸ್ಸು ಕಾಣಲಿ ಎಂದು ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ರವರು ಹೇಳಿದರು. ಅವರು ಕಂಬಳಬೆಟ್ಟುವಿನಲ್ಲಿರುವ ಜನಪ್ರೀಯ ಸೆಂಟ್ರಲ್ ಸ್ಕೂಲ್ ನಲ್ಲಿ ಡಿ.16ರಂದು ನಡೆದ ಮಕ್ಕಳ ವಾರ್ಷಿಕ ಕ್ರೀಡಾಕೂಟ ‘ಕ್ರೀಡೆ-2023’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ.ರವಿಕುಮಾರ್ ಎಲ್.ಪಿ.ರವರು ಮಾತನಾಡಿ ಪ್ರತೀ ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಪ್ರತೀ ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರಶಂಸೆ ಸಿಗಬೇಕಾಗಿರುವುದು ಅತೀ ಮುಖ್ಯ. ಮಕ್ಕಳ ಜೊತೆ ಪೋಷಕರಿಗೆ ಹಾಗೂ ಸಿಬ್ಬಂದಿಗಳಿಗೂ ಆಟೋಟವನ್ನು ಆಯೋಜನೆ ಮಾಡಿದ್ದೇವೆ. ಈ ಒಂದು ಪುಟ್ಟ ಹಳ್ಳಿಗಾಡಿನಲ್ಲಿರುವ ನಮ್ಮ ಶಾಲೆಯ ಮಕ್ಕಳು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಜ್ಜೆ ಗುರುತನ್ನು ಅಚ್ಚು ಒತ್ತಿದ್ದಾರೆ ಎನ್ನುವುದು ತುಂಬಾ ಖುಶಿಯ ವಿಚಾರ. ಕ್ರೀಡೆಯ ಮೂಲಕ ಮಕ್ಕಳನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಬಡ್ಡಿಪಟು ಅಬ್ದುಲ್ ಜಬ್ಬರ್ ಐ.ಪಿ., ಹಾಗೂ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ರವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ವಿ.ಕೆ.ಅಬ್ದುಲ್ ಗಫೂರ್ ಹಾಜಿ, ರಾಷ್ಟ್ರೀಯ ಕಬಡ್ಡಿಪಟು ಅಬ್ದುಲ್ ಜಬ್ಬರ್ ಐ.ಪಿ., ಜನಪ್ರೀಯ ಸೆಂಟ್ರಲ್ ಶಾಲಾ ನಿರ್ದೇಶಕರಾದ ಎ.ಆರ್. ನೌಸೀನ್ ಬದ್ರಿಯಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಾಕೀರ್ ಅಳಕೆಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಿಬ್ಬಂದಿ ಅಶ್ವಿನಿ ಸನ್ಮಾನಿತರ ಪರಿಚಯ ಮಾಡಿದರು. ಶಾಲಾ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಸ್ವಾಗತಿಸಿದರು. ಸಿಬ್ಬಂದಿಗಳಾದ ಗುಣವತಿ ಹಾಗೂ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ವಂದಿಸಿದರು.