ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ-ದೇವರ ದರ್ಶನ ಬಲಿ

0

ಪುತ್ತೂರು; ಇತಿಹಾಸ ಪ್ರಸಿದ್ದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಡಿ.18ರ ಷಷ್ಠಿಯಂದು ಬೆಳಿಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.


ಬೆಳಿಗ್ಗೆ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ದೇವರ ಪಲ್ಲಕಿ ಉತ್ಸವ, ದರ್ಶನ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ ನಡೆಯಿತು. ನಂತರ ಕೆಮ್ಮಿಂಜೆ ಗ್ರಾಮ ದೈವ ಶಿರಾಡಿ ದೈವದ ಕಿರುವಾಳು ಬೀಳ್ಕೊಡುಗೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಷಷ್ಠಿ ಮಹೋತ್ಸವದಲ್ಲಿ ವಿಶೇಷವಾಗಿ ಮಧ್ಯಾಹ್ನ ಷಷ್ಠಿ ವೃತಧಾರಿಗಳಿಗೆ ಅನ್ನದಾನವು ಪ್ರತ್ಯೇಕವಾಗಿ ವ್ಯವಸ್ಥಿತ ರೀತಿಯಲ್ಲಿ ಕಲ್ಪಿಸಲಾಗಿತ್ತು. ಸಂಜೆ ದೈವಗಳ ಭಂಡಾರ ತೆಗೆದು ರಂಗಪೂಜೆ ವೈದಿಕ ಮಂತ್ರಾಕ್ಷತೆ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲವನ ಮಹಿಳಾ ಯಕ್ಷ ತಂಡ ಪುತ್ತೂರು ಇವರಿಂದ ಶ್ರೀದೇವಿ ಲೀಲಾಮೃತ ಎಂಬ ಯಕ್ಷಗಾನ ಬಯಲಾಟ ನಡೆಯಿತು.


ದೇವಸ್ಥಾನದ ಆಡಳಿತಾಧಿಕಾರಿ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸಂಚಾಲಕ ದಯಾನಂದ ಎಂ., ಸದಸ್ಯರಾದ ಗಣೇಶ ನೈತ್ತಾಡಿ, ವಿಶ್ವನಾಥ ನಾಯ್ಕ್, ಗಣೇಶ್ ದೇವಾಡಿಗ, ಲೋಕೇಶ್ ಗೌಡ ಮುಕ್ರಂಪಾಡಿ, ಕೃಷ್ಣ ಪ್ರಸಾದ್ ಕೆದಿಲಾಯ, ರಂಗನಾಥ ರಾವ್, ಅರ್ಚಕರಾದ ವೆಂಕಟೇಶ್ ಭಟ್, ರಮೇಶ್ ಭಟ್, ಗುಮಾಸ್ತ ಪ್ರಶಾಂತ್ ಕೆಮ್ಮಿಂಜೆ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಊರ, ಪರವೂರ ಸಹಸ್ರರಾರು ಮಂದಿ ಭಕ್ತಾದಿಗಳು ಷಷ್ಠಿ ಮಹೋತ್ಸವದಲ್ಲಿ ಭಾಗವಹಿಸಿ, ದೇವರ ವೈಭವದ ಜಾತ್ರೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ವಾಹನ ಸಂಚಾರ ನಿರ್ವಹಣೆ ಹಾಗೂ ಬಂದೋಬಸ್ತ್‌ನಲ್ಲಿ ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆಯ ಪೊಲೀಸರು ಹಾಗೂ ಪ್ರಶಾಂತ್ ಸೆಕ್ಯೂರಿಟಿ ಏಜೆನ್ಸಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here