ಪ್ರಜ್ಞಾವಂತ ನಾಗರಿಕರಾಗಿ, ಒಳ್ಳೆಯ ಹೃದಯವುಳ್ಳ ಮನುಷ್ಯರಾಗಿ-ವಂ|ಆಂಟನಿ ಪ್ರಕಾಶ್
ಪುತ್ತೂರು: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ವಿದ್ಯೆಗೆ ಹೆಚ್ಚಿನ ಒತ್ತು ಕೊಟ್ಟು ಶಿಸ್ತನ್ನು ಮೈಗೂಡಿಸಿಕೊಂಡು, ಮತ್ತೊಬ್ಬರ ಬಗ್ಗೆ ಸದಾ ಒಳ್ಳೆಯದನ್ನು ಚಿಂತಿಸುವ ಮೂಲಕ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ, ಒಳ್ಳೆಯ ಹೃದಯವುಳ್ಳ ಮನುಷ್ಯರಾಗಿ ಬಾಳುವುದೇ ಶಿಕ್ಷಣದ ಉದ್ಧೇಶವಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.
ಡಿ.21 ರಂದು ನೆಹರುನಗರ ಸುದಾನ ವಸತಿಯುತ ಶಾಲೆಯ ವಾರ್ಷಿಕೋತ್ಸವದ ಉದ್ಘಾಟನೆ ಹಾಗೂ ಕೆ.ಜಿ, ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಸಾಧಕರ ದಿನ ಹಾಗೂ ಕಿಂಡರ್ ಗಾರ್ಟನ್ ಘಟಿಕೋತ್ಸವ ದಿನದ ಸಂಭ್ರಮದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮುಂಜಾಗ್ರತೆಯಿಲ್ಲದೆ ಸಾವು, ಪರಸ್ಪರ ನಂಬಿಕೆಯಿಲ್ಲದೆ ವಿಚ್ಛೇದನ ಪ್ರಕರಣಗಳು, ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವುದು ಇತ್ಯಾದಿ ಹೆಚ್ಚಾಗಿದೆ. ಇದರ ಕಡಿವಾಣ ಆಗಬೇಕಾದರೆ ನಾವು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಿ ಎಂದರು.
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ, ಪ್ರೀತಿಸುವವರಾಗಿ-ಜಯಂತ್ ನಡುಬೈಲು:
ಸಂಪ್ಯ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಕರ್ನಾಟಕದಲ್ಲಿ ಎಲ್ಲಿಯೂ ಇರದ ಹಸಿರಿನ ಪ್ರಕೃತಿಯನ್ನು ಒಳಗೊಂಡಿರುವ ಸುದಾನ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಧನ್ಯರು. ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡುವವರು ರಾಜ್ಯಪಾಲರು. ಆದರೆ ಇಲ್ಲಿ ಪುಟಾಣಿ ಮಕ್ಕಳಿಗೆ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಹೆಗ್ಗಳಿಕೆಯಾಗಿದೆ ಮಾತ್ರವಲ್ಲ ಮಕ್ಕಳಿಗೆ ಮುಂದೆ ಸಾಧನೆ ಮಾಡಲು ಪ್ರೇರೇಪಣೆಯಾಗಿದೆ. ಪೋಷಕರಿಗೆ ಮಕ್ಕಳು ಎರಡು ಕಣ್ಣುಗಳು. ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಅವರಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ, ಪ್ರೀತಿಸುವವರಾಗಿ ಎಂದರು.
ಮಕ್ಕಳು ಗುರು-ಹಿರಿಯರಿಗೆ ಗೌರವ ನೀಡಿ-ನಿರಂಜನ್ ರೈ:
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ರವರು ಮಾತನಾಡಿ, ಸಂತೋಷ ಹಂಚಿಕೊಂಡಾಗ ದ್ವಿಗುಣ, ದುಃಖ ಹಂಚಿಕೊಂಡಾಗ ಶಮನ. ಹೀಗೆ ಕಳೆದ 33 ವರ್ಷಗಳಿಂದ ಈ ಸಂಸ್ಥೆ ಬೆಳೆದು ನಿಂತಿದೆ. ಇಚ್ಛಾಶಕ್ತಿ ಪ್ರೇರೇಪಿಸುವ, ಕ್ರಿಯಾ ಶಕ್ತಿ ಪಸರಿಸುವ ಹಾಗೂ ಜ್ಞಾನ ಶಕ್ತಿ ಉದ್ಧೀಪನಗೊಳಿಸುವ ಶಿಕ್ಷಕ ವೃಂದ, ಆಡಳಿತ ಮಂಡಳಿ ಇಲ್ಲಿದೆ. ಮಕ್ಕಳು ಗುರು-ಹಿರಿಯರಿಗೆ ಗೌರವ ನೀಡಿದಾಗ ಆ ಗೌರವ ಪೋಷಕರಿಗೆ, ಶಾಲೆಗೆ ಸಲ್ಲುತ್ತದೆ ಎಂದರು.
ಶಾಲಾ ಗೀತೆ ಅನಾವರಣ:
ಶಾಲಾ ಶಿಕ್ಷಕಿ ರೇಖಾ ಬಲ್ನಾಡು ರಚಿಸಿದ ಶಾಲಾ ಗೀತೆಯನ್ನು ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್ ರವರು ರಿಮೋಟ್ ಕಂಟ್ರೋಲ್ ಅದುಮುವ ಮೂಲಕ ಅನಾವರಣಗೊಳಿಸಿದರು.
ಪೂರ್ಣಕುಂಭ ಸ್ವಾಗತ:
ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಅಭ್ಯಾಗತರನ್ನು ಶಾಲಾ ಬ್ಯಾಂಡ್ ವಾದ್ಯದೊಂದಿಗೆ ವೇದಿಕೆಗೆ ಕರೆ ತರಲಾಯಿತು. ವಿದ್ಯಾರ್ಥಿನಿಯರಿಂದ ಭಾರತದ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಣೀಯ ನೃತ್ಯರೂಪಕ ಹಾಗೂ ಪೂರ್ಣಕುಂಭ ಸ್ವಾಗತ ನೆರವೇರಿತು.
ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಪ್ನಾ ಸೂರಜ್ ನಾಯರ್, ಶಾಲಾ ನಾಯಕ ವಿಶಾಲ್ ಬಿ, ಉಪ ನಾಯಕಿ ಜಿಯಲ್ ಸ್ವೀಡಲ್ ಲಸ್ರಾದೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಪಠ್ಯದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗಾರಾಜ್ ಶಾಲಾ ವರದಿ ಮಂಡಿಸಿದರು. ಸಹ ಮುಖ್ಯ ಶಿಕ್ಷಕಿ ಲವೀನಾ ಹನ್ಸ್ ಸ್ವಾಗತಿಸಿ, ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕಿ ಗಾಯತ್ರಿ ಕೆ ವಂದಿಸಿದರು. ಶಿಕ್ಷಕಿಯರಾದ ವಿನಯ ರೈ, ರೇಖಾಮಣಿ, ಅರ್ಚನಾ, ರೇಶ್ಮಾ, ಪೂಜಾ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿಯರಾದ ಯೋಗೀತ ಎ.ಪ್ರದೀಪ್ ಹಾಗೂ ಅನಿತಾ ಕೆ ಕಾರ್ಯಕ್ರಮ ನಿರೂಪಿಸಿದರು.
ಇಂದು ಶಾಲೆಯಲ್ಲಿ..
ಡಿ.22 ರಂದು ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವ ಜರಗಲಿದ್ದು, ಅಧ್ಯಕ್ಷತೆಯನ್ನು ಶಾಲಾ ಹಿರಿಯ ವಿದ್ಯಾರ್ಥಿ ಡಾ.ಸಂಜನಾ ಎಸ್.ಶೆಟ್ಟಿರವರು ವಹಿಸಲಿರುವರು. ಮುಖ್ಯ ಅತಿಥಿಯಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅವನಿ ಬೆಳ್ಳಾರೆರವರು ಭಾಗವಹಿಸಲಿದ್ದಾರೆ.
ಧ್ಯೇಯವಾಕ್ಯ..
ಪ್ರತಿ ವರ್ಷವು ಒಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಅದರಂತೆಯೇ ಕಾರ್ಯಾಚರಿಸುವ ಸಂಸ್ಥೆಯು 2023-24ರ ಈ ವರ್ಷ ’ಭಾರತದ ಕರಾವಳಿಯ ವೈಭವದ ಪರಂಪರೆ’ ಎಂಬ ಧ್ಯೇಯ ದೃಷ್ಪಿಯನ್ನು ಅಳವಡಿಸಿಕೊಂಡಿದೆ. ಈ ವರ್ಷಎಲ್ಲಾ ಕಾರ್ಯಕ್ರಮಗಳೂ ಈ ಆಶಯದೊಂದಿಗೆ ನಡೆಯಲಿದ್ದು ವಾರ್ಷಿಕೋತ್ಸವದಲ್ಲಿ ಭಾರತದ ಕರಾವಳಿಯ ಸಾಂಸ್ಕೃತಿಕ ಸಿರಿಯ ಅನಾವರಣವು ನಡೆಯಲಿದೆ.
ಸನ್ಮಾನ…
ಪುತ್ತೂರಿನ ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯ ಹರಿಕಾರ, ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದಿಂದ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸುದಾನ ಶಾಲೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್ ರವರನ್ನು ಶಾಲಾ ಪೋಷಕರ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲಾ ಸುರಕ್ಷಾ ಸಮಿತಿಯ ಮಾಮಚ್ಚನ್ ಎಂ.ರವರು ಸನ್ಮಾನಿತರ ಬಗ್ಗೆ ಮಾತನಾಡಿದರು.