





ಉಪ್ಪಿನಂಗಡಿ: ನಗರ ಭಜನೋತ್ಸವದ ಸಮಯದಲ್ಲಿ ರಾಷ್ಟ್ರ ಕಾಯುವ ಯೋಧರಿಗೆ ಶ್ರೀ ದೇವರ ಕೃಪಾ ಕಟಾಕ್ಷ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಮೂಲಕ ಇಲ್ಲಿನ ಕಾಳಿಕಾಂಬಾ ಭಜನಾ ಮಂಡಳಿಯು ಶ್ರೀ ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ಬಲಿದಾನಗೈದ ಯೋಧರಿಗೆ ನುಡಿ ನಮನ ಸಲ್ಲಿಸಿತು.



ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆಯವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಗಣೇಶ್ ಹೆಗ್ಡೆ ಹಾಗೂ ಸತೀಶ್ ಹೆಗ್ಡೆಯವರು ಹಣತೆಯನ್ನು ಬೆಳಗಿದರು. ನುಡಿ ನಮನ ಸಲ್ಲಿಸಿದ ಸುಧಾಕರ ಶೆಟ್ಟಿ ಮಾತನಾಡಿ, ನಮ್ಮೆಲ್ಲರ ನೆಮ್ಮದಿಯ ಬದುಕಿಗಾಗಿ ಪ್ರಾಣ ತ್ಯಾಗಗೈದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೆಲ ದಿನಗಳ ಹಿಂದೆ ನಮ್ಮಗಲಿದ ಸೇನಾಧಿಕಾರಿ ಕ್ಯಾಪ್ಟನ್ ಪ್ರಾಂಜಲ್ ಮತ್ತವರ ತಂಡ ಹಾಗೂ ಗುರುವಾರ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಗೆ ಬಲಿಯಾದ ಸೇನಾ ಯೋಧರ ಬಲಿದಾನ ವ್ಯರ್ಥವಾಗದಿರಲಿ. ತಾಯಿ ಭಾರತಾಂಬೆಯ ಮಡಿಲಲ್ಲಿ ಹುತಾತ್ಮರಾದ ಎಲ್ಲಾ ಯೋಧರು ಮರಳಿ ಜನ್ಮವೆತ್ತಿ ರಾಷ್ಟ್ರ ಸೇವೆ ಸಲ್ಲಿಸುವಂತಾಗಲಿ. ರಾಷ್ಟ್ರದ ಜನತೆಯ ಹಸಿವು ನೀಗಿಸುವ ರೈತರಿಗೂ ರಾಷ್ಟ್ರದ ಎಲ್ಲಾ ಶಕ್ತಿ ದೇವತೆಗಳೂ ಹರಸಲಿ ಎಂದು ಪ್ರಾರ್ಥಿಸಿದರು.
ಕೊನೆಗೆ ಕೆಲ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಬೆಳಗಿಸಿದ ಹಣತೆಗಳನ್ನು ನೇತ್ರಾವತಿ ನದಿಗೆ ಸಮರ್ಪಿಸಲಾಯಿತು.
ಈ ಸಂಧರ್ಭದಲ್ಲಿ ಮಾಧವ ಆಚಾರ್ಯ, ಶಶಿಧರ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ಕೂಸಪ್ಪ, ಸುಜಾತ ಕೃಷ್ಣ ಆಚಾರ್ಯ, ಚಂದ್ರಾವತಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿಪ್ರಸಾದ್, ರಮೇಶ್ ನಟ್ಟಿಬೈಲು, ಹರಿರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.













