ನಗರಸಭೆ ವಾರ್ಡ್ 1ಮತ್ತು 11ರ ಉಪಚುನಾವಣೆ-ಬಿಜೆಪಿ, ಕಾಂಗ್ರೆಸ್, ಪುತ್ತಿಲ ಪರಿವಾರ ನಡುವೆ ತ್ರಿಕೋನ ಸ್ಪರ್ಧೆ- ಮತದಾರ ಪ್ರಭು ಮತಗಟ್ಟೆಯಲ್ಲಿ

0

ಪುತ್ತೂರು:ನಗರ ಸಭೆಯ ವಾರ್ಡ್ 1 ಹಾಗೂ ವಾರ್ಡ್ 11ರ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಹೊಸದಾಗಿ ಸದಸ್ಯರ ಆಯ್ಕೆಗೆ ಮತದಾನ ಪ್ರಕ್ರಿಯೆಯು ನಡೆಯುತ್ತಿದೆ.ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ.ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ರಿಂದ ಆರಂಭವಾಗಿದ್ದು ಮತದಾರ ತನ್ನ ಹಕ್ಕನ್ನು ಚಲಾಯಿಸಿ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತಿದೆ.


ವಾರ್ಡ್-1 ಕಬಕ ಸಾಮಾನ್ಯ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ1ವಾರ್ಡ್ 11 ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶಕ್ತಿ ಸಿನ್ಹರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.ವಾರ್ಡ್ ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿನೇಶ್ ಕೆ.ಶೇವಿರೆ, ಬಿಜೆಪಿಯಿಂದ ಸುನೀತಾ ಶಿವನಗರ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ ರಾವ್ ಶೇವಿರೆ ಕಣದಲ್ಲಿದ್ದಾರೆ.ವಾರ್ಡ್-11ರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ, ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರದಿಂದ ಚಿಂತನ್ ಪಿ.ಅಂದ್ರಟ್ಟ ಕಣದಲ್ಲಿದ್ದಾರೆ.ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.


ಮೂರು ಪಕ್ಷಗಳ ಮಧ್ಯೆ ಬಿಗ್ ಫೈಟ್:
ಕಳೆದ ಚುನಾವಣೆಯಲ್ಲಿ ವಾರ್ಡ್-1ರಲ್ಲಿ ಬಿಜೆಪಿ ಹಾಗೂ ವಾರ್ಡ್-11ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಈಗ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಿಂದಿನ ಸ್ಥಾನವನ್ನು ಉಳಿಸಿಕೊಂಡು ಇನ್ನೊಂದನ್ನೂ ಗೆಲ್ಲುವ ತವಕದಲ್ಲಿದೆ.ಇದೇ ಮೊದಲ ಬಾರಿಗೆ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳೂ ಹೇಗಾದರೂ ಮಾಡಿ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ.ಒಟ್ಟಾರೆಯಾಗಿ ಎರಡೂ ಕ್ಷೇತ್ರಗಳ ಚುನಾವಣೆಯೂ ಬಿಜೆಪಿ, ಕಾಂಗ್ರೆಸ್ ಮತ್ತು ಪುತ್ತಿಲ ಪರಿವಾರದವರಿಗೆ ಪ್ರತಿಷ್ಠೆಯ ವಿಷಯವಾಗಿದ್ದು ಎರಡೂ ಕಡೆಗಳಲ್ಲಿಯೂ ಒಂದು ರೀತಿ ಬಿಗ್ ಫೈಟ್ ನಡೆಯುತ್ತಿದೆ.
ವಾರ್ಡ್-1ಕ್ಕೆ ಸಂಬಂಧಿಸಿ ಸುದಾನ ವಸತಿಯುತ ಶಾಲೆ ಉತ್ತರ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.ಇಲ್ಲಿ 634 ಪುರುಷರು, 670 ಮಹಿಳೆಯರು ಸೇರಿ ಒಟ್ಟು 1304 ಮತದಾರರು ಮತ ಚಲಾಯಿಸಲಿದ್ದಾರೆ.


ವಾರ್ಡ್-11 ಮತದಾನ ಪ್ರಕ್ರಿಯೆಗಳು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದು ಭಾಗ ಸಂಖ್ಯೆ-13 ಹಾಗೂ ಭಾಗ ಸಂಖ್ಯೆ-14 ಎರಡು ಮತಗಟ್ಟೆಗಳಲ್ಲಿ ನಡೆಯುತ್ತಿದೆ.ಭಾಗ ಸಂಖ್ಯೆ 13ರಲ್ಲಿ 261 ಪುರುಷರು, 243 ಮಹಿಳೆಯರು ಸೇರಿದಂತೆ ಒಟ್ಟು 504 ಮತದಾರರು, ಭಾಗ ಸಂಖ್ಯೆ 14ರಲ್ಲಿ 565 ಪುರುಷರು, 625 ಮಹಿಳೆಯರು ಸೇರಿ ಒಟ್ಟು 1230 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆಯು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದ್ದು ಸಂಜೆ 5 ಗಂಟೆಯ ತನಕ ನಡೆಯಲಿದೆ. .ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹಾಗೂ ನಗರ ಸಭಾ ಇಂಜಿನಿಯರ್ ಶಬರೀನಾಥ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಮದ್ಯ, ಜಾತ್ರೆ, ಸಂತೆ, ಉತ್ಸವ, ಮೇಳ ನಿಷೇಧ:
ಪುತ್ತೂರು ನಗರ ಸಭೆಯ ಉಪ ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಡಿ.26 ಬೆಳಿಗ್ಗೆಯಿಂದ ಡಿ.27ರ ಸಂಜೆಯ ತನಕ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಹಾಗೂ ಮದ್ಯ ಮಾರಾಟ ಮತ್ತು ಡಿ.27ರಂದು ಜಾತ್ರೆ, ಸಂತೆ, ಉತ್ಸವ ಹಾಗೂ ಮೇಳವನ್ನು ನಿಷೇಽಸಿ ದ,ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ.


ಡಿ.30ರಂದು ಫಲಿತಾಂಶ:
ಚುನಾವಣೆಗೆ ಸಂಬಂಧಿಸಿದಂತೆ ಡಿ.26ರಂದು ತಾಲೂಕು ಆಡಳಿತ ಸೌಧದಲ್ಲಿ ಮಸ್ಟರಿಂಗ್ ಕಾರ್ಯಗಳು ನಡೆದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಡಿಮಸ್ಟರಿಂಗ್ ಕಾರ್ಯಗಳು ಡಿ.27ರಂದು ಸಂಜೆ ನಡೆಯಲಿದೆ.ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗಳು ಡಿ.30ರಂದು ತಾಲೂಕು ಆಡಳಿತ ಸೌಧದಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಳ್ಳಲಿದ್ದು 10 ಗಂಟೆಯೊಳಗೆ ಫಲಿತಾಂಶ ಘೋಷಣೆಯಾಗಲಿದೆ.


ಶಾಲಾ ಕಾಲೇಜುಗಳಿಗೆ ರಜೆ:
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ನಡೆಯುವ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶ ನೀಡಿದೆ.
ಈ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಆದೇಶಿಸಿದೆ.

LEAVE A REPLY

Please enter your comment!
Please enter your name here