ಪುತ್ತೂರು: 2022ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾಗಿರುವ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ತೆರೆಜಾ ಎಂ.ಸಿಕ್ವೇರಾರವರು ಡಿ.31ರಂದು ಶಿಕ್ಷಕ ವೃತ್ತಿಯಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ.
34 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಶಿಕ್ಷಕಿ ತೆರೆಜಾ ಸಿಕ್ವೇರಾರವರು ಮಂಗಳೂರಿನ ಸೈಂಟ್ ಆನ್ಸ್ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಶಿಕ್ಷಣ ಪಡೆದು ಮೈಸೂರಿನ ಹುಣಸೂರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಭಟ್ಕಳದ ಆನಂದಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 1989ರಿಂದ 1992ರ ವರೆಗೆ ಬೈಂದೂರು ತಾಲೂಕಿನ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1992ರಿಂದ 1994ರ ವರೆಗೆ ಪುತ್ತೂರು ತಾಲೂಕಿನ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1994ರಿಂದ 2014ರ ವರೆಗೆ ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2014ರಿಂದ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಭಡ್ತಿ ಹೊಂದಿ ಸೇವೆಯನ್ನು ಸಲ್ಲಿಸಿರುತ್ತಾರೆ.
ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯವನ್ನು ಹೊಂದಿರುವ ತೆರೆಜಾ ಸಿಕ್ವೇರಾರವರು ಊರ, ಪರವೂರ ದಾನಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಮತ್ತು ಕುಟುಂಬ ವರ್ಗದವರಿಂದ ಕೊಡುಗೆಯನ್ನು ಸಂಗ್ರಹಿಸಿ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸಿರುತ್ತಾರೆ. ಇವರು ಪರಿಸರ ಪ್ರೇಮಿಯಾಗಿದ್ದು ತನ್ನ ವಿದ್ಯಾರ್ಥಿಗಳು ಹಸಿರು ಪರಿಸರದಲ್ಲಿ ಕಲಿಯಬೇಕೆಂಬ ಉದ್ಧೇಶದಿಂದ ಶಾಲೆಯಲ್ಲಿ ತೆಂಗಿನ ತೋಟ, ನರೇಗಾ ಪೌಸ್ಟಿಕ ತೋಟ, ದಾನಿಗಳಿಂದ ಮೂರು ಲಕ್ಷ ವೆಚ್ಚದ ಚಿಣ್ಣರ ಪಾರ್ಕ್ ರಚನೆ ಮಾಡಿರುತ್ತಾರೆ. ತೆರೆಜಾ ಸಿಕ್ವೇರಾರವರು ಸುಮಾರು 34 ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸಿದ್ದು, ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಎನಿಸಿದ ಪುತ್ತೂರು ರೋಟರಿ ಕ್ಲಬ್ನಲ್ಲಿ ತಮ್ಮ ಪತಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇವರ ಸೇವಾ ಅವಧಿಯ ಕ್ಲಸ್ಟರ್ ಹಂತ, ಬ್ಲಾಕ್ ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ಶಾಲೆಗಳಿಗೆ ಜಿಲ್ಲಾ ಅತ್ತ್ಯುತ್ತಮ ಶಾಲೆ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಮಟ್ಟದ ಹಸಿರು ಶಾಲೆ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ನಲಿಕಲಿ ಘಟಕ(2019-20) ಪ್ರಶಸ್ತಿ, ಹುಡುಗಿಯರ ವಿಭಾಗದ ವಾಲಿಬಾಲ್ನಲ್ಲಿ ಏಳು ಸಲ ದ್ವಿತೀಯ ಸ್ಥಾನ ಸಿಕ್ಕಿರುತ್ತದೆ.
ತೆರೆಜಾ ಸಿಕ್ವೇರಾರವರು ಬಿ.ಆರ್.ಸಿ ಪುತ್ತೂರು ಇವರಿಂದ ಚೈತನ್ಯ 1 ಮತ್ತು 2, ಸಮನ್ವಯ ತರಬೇತಿ, ಬ್ರಿಟಿಷ್ ಕೌನ್ಸಿಲ್ ಇಂಗ್ಲೀಷ್ ತರಬೇತಿ, ನಲಿ-ಕಲಿ ತರಬೇತಿ, ಗುರುಚೇತನ-ಕನ್ನಡ ತರಬೇತಿಯನ್ನು ಹೊಂದಿದ್ದು, ಪ್ರಸ್ತುತ ಇವರು ಪತಿ ರೊಟೇರಿಯನ್ ಹೆರಾಲ್ಡ್ ಮಾಡ್ತಾ ಹಾಗೂ ಪುತ್ರಿ ರಿಶಲ್ ಮಾಡ್ತಾ, ಪುತ್ರ ರೂಪೇಶ್ ಮಾಡ್ತಾ, ಅಳಿಯ ನಿತಿನ್ ಡಾಯಸ್ರವರೊಂದಿಗೆ ಮರೀಲು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿಯ ಹ್ಯಾರಿಯೆಟ್ ನಿವಾಸದಲ್ಲಿ ವಾಸ್ತವ್ಯ ಹೊಂದಿದ್ದಾರೆ.