ರಾಜ್ಯಮಟ್ಟದ ಬಲಿಷ್ಟ 8 ತಂಡಗಳು | ನಿಗದಿತ ಓವರಿನ ಓವರ್ ಆರ್ಮ್ ಕ್ರಿಕೆಟ್ | ಅಹರ್ನಿಶಿ ಪಂದ್ಯಾಟ
ಸಾಮೆತ್ತಡ್ಕ ಯುವಕ ಮಂಡಲ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ರವರಿಂದ ಆಯೋಜನೆ
ಪುತ್ತೂರು: ಕ್ರಿಕೆಟ್, ಕ್ರಿಕೆಟ್, ಕ್ರಿಕೆಟ್..ಎಲ್ಲಡೆ ಕ್ರಿಕೆಟ್ ಜ್ವರ. ಯುವಸಮೂಹಕ್ಕೆ ಕ್ರಿಕೆಟ್ ಅಂದರೆ ಪ್ರಾಣ ಎಂಬುದು ಎಲ್ಲರಿಗೂ ತಿಳಿದಿದೆ. ಐಪಿಎಲ್ ಎಂಟ್ರಿ ಪಡೆದ ಮೇಲಂತೂ ಕ್ರಿಕೆಟ್ ಅನ್ನು ಹೊಡಿಬಡಿ ಲೋಕಕ್ಕೆ ತೆರೆದುಕೊಂಡಿರುವುದಂತೂ ನಿಜ. ಪುತ್ತೂರಿನಲ್ಲೂ ಅಲ್ಲಿ, ಇಲ್ಲಿ ಕ್ರಿಕೆಟ್ ಪಂದ್ಯಾಟಗಳು ಆಯೋಜನೆಯಾಗಿವೆ. ಆದರೆ ರಾಷ್ಟ್ರಮಟ್ಟದ ಆಟಗಾರರ ದಂಡೇ ಇರುವ ಘಟಾನುಘಟಿ ತಂಡಗಳ ಪಂದ್ಯಾಟಗಳು ಪುತ್ತೂರಿನಲ್ಲಿ ನಡೆದಿರುವುದು ಬಹಳ ಕಡಿಮೆ. ಇದೀಗ ಕ್ರಿಕೆಟ್ ಪ್ರೇಕ್ಷಕರಿಗೆ ಸಾಪ್ಟ್ಬಾಲ್ ಕ್ರಿಕೆಟ್ ದಿಗ್ಗಜರನ್ನು ಮೈದಾನದಲ್ಲಿ ನೋಡಿ, ಆಟವನ್ನು ಸವಿಯುವ ಸುವರ್ಣಾವಕಾಶವನ್ನು ಪುತ್ತೂರಿನ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರ ನೇತೃತ್ವದಲ್ಲಿ ಎರಡು ಸಂಘಟಕರು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.
ಹೌದು, ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಜಂಟಿ ಆಶ್ರಯದಲ್ಲಿ ದಿ|ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಹೊನಲು-ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್ನಲ್ಲಿನ ಕ್ರೀಡಾಂಗಣದಲ್ಲಿ ಜ.20 ಹಾಗೂ 21 ರಂದು ಎರಡು ದಿನಗಳ ಕ್ರಿಕೆಟ್ ಹವಾ ‘ಸಿಝ್ಲರ್ ಟ್ರೋಫಿ’ ಜರಗಲಿದ್ದು, ಫಿಲೋಮಿನಾ ಕಾಲೇಜು ಕ್ಯಾಂಪಸ್ ಒಂದರ್ಥದಲ್ಲಿ ಕ್ರಿಕೆಟ್ ಹಬ್ಬವನ್ನು ಸೃಷ್ಟಿಸುತ್ತಿದೆ. ಈ ಹಿಂದೆಯೂ ಇದೇ ಫಿಲೋಮಿನಾ ಮೈದಾನದಲ್ಲಿ ಸಾಮೆತ್ತಡ್ಕ ಯುವಕ ಮಂಡಲ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ರವರು ಯಶಸ್ವಿ ಕ್ರಿಕೆಟ್ ಕೂಟವನ್ನು ಆಯೋಜಿಸಿದ್ದರು.
ಬಲಿಷ್ಟ ಆಟಗಾರರ ದಂಡು ಫಿಲೋಮಿನಾದತ್ತ:
ಸಂಘಟಕರು ಆಯೋಜಿಸಿದ ಐದನೇ ಆವೃತ್ತಿಯಲ್ಲಿ ಫ್ರೆಂಡ್ಸ್ ಬೆಂಗಳೂರು ಚಾಂಪಿಯನ್ ಹಾಗೂ ಎಎಫ್ಸಿ ಪುತ್ತೂರು ರನ್ನರ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಈ ಬಾರಿ ಮುಂಬಯಿ, ಮಧ್ಯಪ್ರದೇಶ, ಚೆನ್ನೈ, ಕುಂದಾಪುರ, ಬೆಂಗಳೂರು, ಪುತ್ತೂರು ಹೀಗೆ ವಿವಿಧೆಡೆಯ ಎಂಟು ಬಲಿಷ್ಟ ತಂಡಗಳು ಆರನೇ ಬಾರಿಯ ಸಿಝ್ಲರ್ ಟ್ರೋಫಿಯಲ್ಲಿ ಕಣಕ್ಕಿಳಿಯುತ್ತಿದ್ದು ಈ ಬಾರಿ ಯಾವ ರಾಜ್ಯಕ್ಕೆ, ಯಾವ ತಂಡಕ್ಕೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಲಿಷ್ಟ ಆಟಗಾರರಾದ ಸಾಗರ್ ಭಂಡಾರಿ, ರಾಜ ಸಾಲಿಗ್ರಾಮ, ಲೋಕಿ ಪುತ್ತೂರು, ರಿಯಲ್ ಫೈಟರ್ ಹರಿ, ಮೈಟಿ ಸಲೀಂ, ಸಚಿನ್ ಮಹಾದೇವ, ಅಕ್ಷಯ್, ಧೀರಜ್ ಅಲೆವೂರು ಹೀಗೆ ಹಲವಾರು ಬಲಿಷ್ಟ ಆಟಗಾರರು ಅವರಲ್ಲದೆ ಉದಯೋನ್ಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಬಿಲ್ಲಿ ಬೌಡೆನ್ ಮತ್ತೊಮ್ಮೆ
ಅಂಪೈರ್ ಮದನ್ ಮಡಿಕೇರಿ ಪುತ್ತೂರಿಗೆ..
ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ತನ್ನ ವಿಶೇಷ ಭಂಗಿಯ ಮೂಲಕ ಕ್ರಿಕೆಟ್ ಸಿಗ್ನಲ್ಗಳನ್ನು ನೀಡುತ್ತಾ ಎಲ್ಲರ ಪ್ರಶಂಸೆಗೆ ಒಳಗಾಗಿರುವ ನ್ಯೂಝಿಲೆಂಡ್ನ ಬಿಲ್ಲಿ ಬೌಡೆನ್ನಂತೆಯೇ ರಾಜ್ಯದ ‘ಬಿಲ್ಲಿ ಬೌಡೆನ್’ ಎಂದೇ ಖ್ಯಾತರಾಗಿರುವ ಉದ್ದುದ್ದ ಕೇಶರಾಶಿ ಹಾಗೂ ಗಡ್ಡ ಹೊಂದಿರುವ ಅಂಪಾಯರ್ ಮದನ್ ಮಡಿಕೇರಿರವರಿಗೆ ಪುತ್ತೂರಿನಲ್ಲಿ ಪ್ರಶಂಸೆಯ ಸುರಿಮಳೆ ಅಂದು ವ್ಯಕ್ತವಾಗಿತ್ತು. ಬೌಂಡರಿ, ಸಿಕ್ಸರ್, ಲೆಗ್ ಬೈ, ಅಗಲ ಎಸೆತ, ನೋಬಾಲ್, ಫ್ರೀಹಿಟ್ಗೆ ವಿಶೇಷ ನೃತ್ಯ ಭಂಗಿಯ ಮೂಲಕ ಗಮನಸೆಳೆದ ಮದನ್ ಮಡಿಕೇರಿರವರು ಗಣ್ಯರ ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಕೋರಿಕೆಯ ಮೇರೆಗೆ ವೀಕ್ಷಕ ವಿವರಣೆಗಾರ ವಿನಯ್ ಉದ್ಯಾವರರವರ ಕಂಠಸಿರಿಯಲ್ಲಿ ಬೌಂಡರಿ, ಸಿಕ್ಸರ್, ಲೆಗ್ ಬೈ, ಅಗಲ ಎಸೆತ, ನೋಬಾಲ್, ಫ್ರೀಹಿಟ್ಗೆ ತನ್ನದೇ ಸ್ಟೈಲ್ ಡ್ಯಾನ್ಸ್ ಶೋ ಮುಖೇನ ಪ್ರಸ್ತುತಪಡಿಸಿ ಎಲ್ಲರಿಗೂ ರಸದೌತಣವನ್ನು ಉಣಬಡಿಸಿದ್ದರು ಮಾತ್ರವಲ್ಲ ಇದೇ ರಸದೌತಣವನ್ನು ಮತ್ತೊಮ್ಮೆ ಪ್ರೇಕ್ಷಕರಿಗೆ ಉಣಬಡಿಸಲು ಅಂಪೈರ್ ಮದನ್ ಮಡಿಕೇರಿ ಬರುತ್ತಿದ್ದಾರೆ.
ಬಹುಮಾನಗಳು..
-ಪ್ರಥಮ ರೂ.2 ಲಕ್ಷ ಹಾಗೂ ಸಿಝ್ಲರ್ ಟ್ರೋಫಿ
-ದ್ವಿತೀಯ ರೂ.1 ಲಕ್ಷ ಹಾಗೂ ಸಿಝ್ಲರ್ ಟ್ರೋಫಿ
-ಪಂದ್ಯಶ್ರೇಷ್ಟ, ಬೆಸ್ಟ್ ಬ್ಯಾಟರ್/ಬೌಲರ್/ಸರಣಿಶ್ರೇಷ್ಟ ಪ್ರಶಸ್ತಿ
-ಸರಣಿಶ್ರೇಷ್ಟ ಆಟಗಾರನಿಗೆ ರೂ.1 ಲಕ್ಷ ಮೌಲ್ಯದ ಬೈಕ್ ಕೊಡುಗೆ
-ಚಲನಚಿತ್ರ ನಟ-ನಟಿಯರ ಪ್ರಮುಖ ಆಕರ್ಷಣೆ
-ಇನ್ನೂ ಅನೇಕ ಆಕರ್ಷಕ ಬಹುಮಾನಗಳು