ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗದಿರುವುದು ದುರದೃಷ್ಟಕರ- ಮಹೇಶ್ ಶೆಟ್ಟಿ ತಿಮರೋಡಿ
ಕಡಬ : ಸೌಜನ್ಯ ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾಗಿ 11 ವರ್ಷಗಳೇ ಕಳೆದರೂ ನ್ಯಾಯ ಸಿಗದಿರುವುದು ನಾಗರಿಕ ಸಮಾಜದ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಆ ನಿಟ್ಟಿನಲ್ಲಿ ಇಡೀ ಸಮಾಜ ಒಂದಾಗಿ ನ್ಯಾಯ ಸಿಗುವ ತನಕ ವಿರಮಿಸಬಾರದು ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೇಳಿದರು.
ಅವರು ಡಿ.31ರಂದು ಕಡಬ ತಾಲೂಕಿನ ಮರ್ದಾಳದಲ್ಲಿ ಸೌಜನ್ಯ ಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜರಗಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯವೂ ಕೂಡ ಉಳ್ಳವರ ಪರವಾಗಿಯೇ ಇದೆ ಎನ್ನುವ ಭಾವನೆ ಜನರಲ್ಲಿ ಬರುವಂತಾಗಿದೆ. ಆ ಭಾವನೆ ಅಳಿಸಿ ಹೋಗಬೇಕಾದರೆ ಸೌಜನ್ಯ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರು ಮಾತನಾಡಿ, ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಗದೇ ಹೋದರೆ ಜನರು ದಂಗೆ ಏಳುವ ಪರಿಸ್ಥಿತಿ ಎದುರಾಗಬಹುದು. ಒಕ್ಕಲಿಗ ಗೌಡ ಸಂಘ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಮುಂದೆಯೂ ನೀಡಲಿದೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಸೌಜನ್ಯ ತಾಯಿ ಕುಸುಮಾವತಿ, ನ್ಯಾಯವಾದಿ ಮೋಹಿತ್ ಕುಮಾರ್, ತುಳು ವಿಮರ್ಶಕ ತಮ್ಮಣ್ಣ ಶೆಟ್ಟಿ, ನೀತಿ ತಂಡದ ಜಯಂತ್ ಟಿ. ಮಾತನಾಡಿದರು. ಪ್ರತಿಭಟನಾ ಸಮಿತಿಯ ಮುಂದಾಳು ರಾಮಚಂದ್ರ ಮಂಡೆಕರ ಉಪಸ್ಥಿತರಿದ್ದರು. ಹೋರಾಟ ಸಮಿತಿಯ ವತಿಯಿಂದ ಮುಂದಿನ ಹೋರಾಟದಲ್ಲಿ ಸಕ್ರಿಯ ಬೆಂಬಲ ನೀಡುವಂತೆ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರಿಗೆ ಸಂಘಟಕರು ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಗೌಡ ಪಂಜೋಡಿ ಸ್ವಾಗತಿಸಿ, ಶರತ್ ರೈ ಕರ್ಮಾಯಿ ವಂದಿಸಿದರು. ಸುಬ್ರಹ್ಮಣ್ಯ ಸಿ.ಕೆ. ಐವರ್ನಾಡು ಹಾಗೂ ಮಂಜುನಾಥ ಗೌಡ ಕೋಲಂತಾಡಿ ನಿರೂಪಿಸಿದರು.