ಪುತ್ತೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕರಸೇವಕರ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ ಹುಟ್ಟಿಸಲು ಈ ರೀತಿಯ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್ಗೆ ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದರಿಂದ ಅದನ್ನು ತಡೆದುಕೊಳ್ಳಲಾಗದೇ ಹತಾಶರಾಗಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋದ್ರಾ ಘಟನೆಯನ್ನು ಇದೀಗ ಮತ್ತೆ ಬಿ.ಕೆ ಹರಿಪ್ರಸಾದ್ ಅವರು ಯಾವ ಆಧಾರದಲ್ಲಿ ಹೇಳಿದ್ದಾರೆ. ಅವರಲ್ಲಿ ಆಧಾರವಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರಲ್ಲದೆ ರಾಜ್ಯ ಸರಕಾರ ಜನರ ರಕ್ಷಣೆ ಮಾಡಬೇಕು ಹೊರತು ಹೆದರಿಸುವ ಮನೋಭಾವ ಇರಬಾರದು ಎಂದರು.
ಬಿ.ಕೆ.ಹರಿಪ್ರಸಾದ್ ಅವರನ್ನು ಬಂಧಿಸಬೇಕು:
ಪುಡಾ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ ಅವರು ಮಾತನಾಡಿ ರಾಮರಾಜ್ಯದ ಭಕ್ತರ ವಿರೋಧಿಯಾಗಿ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ರಾಷ್ಟ್ರೀಯ ವಿಚಾರಧಾರೆ ಮತ್ತು ಜನರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅವರನ್ನು ಎಂ.ಎಲ್.ಸಿಯಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು. ಇದರ ಜೊತೆಗೆ ಮುಖ್ಯಮಂತ್ರಿಯವರ ಪುತ್ರ ಒಬ್ಬ ವೈದ್ಯರಾಗಿ ಹಿಂದೂ ವಿರೋಧಿ ನಿಲುವನ್ನು ತೋರುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಒಲೈಸಲು ಅವರ ಈ ನಿಲುವು ತಾತ್ಕಾಲಿಕ ಗೆಲುವು. ರಾಮ ರಾಜ್ಯದಲ್ಲಿ ಯಾವ ಜಾತಿ, ಧರ್ಮದವರಿಗೆ ತೊಂದರೆ ಆದದ್ದೇ ಇಲ್ಲ ಎಂಬ ಉದಾಹರಣೆ ಚರಿತ್ರೆಯಲ್ಲೂ ಇದೆ. ಹಿಂದು ವಿರೋಧಿ ನಿಲುವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ:
ಹಿಂದು ಜಾಗರಣ ವೇದಿಕೆ ಪ್ರಾಂತ ಸದಸ್ಯ ಅಜಿತ್ ರೈ ಅವರು ಮಾತನಾಡಿ ರಾಮ ಭಕ್ತರು ಎಂಬುದು ಅಪರಾಧವಾದರೆ ಇಡಿ ಸಮಾಜ ರಾಮಭಕ್ತರಾಗಲಿದ್ದಾರೆ. ಆಗ ತಾಕತ್ತಿದ್ದರೆ ನಮ್ಮನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಧಿಸಲಿ ಎಂದು ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾ ಸಹಕಾರ್ಯವಾಹ ಶ್ರೀಧರ್ ತೆಂಕಿಲ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.