ಮತಗಟ್ಟೆಯಲ್ಲಿ ಮತದಾನದ ಅರಿವು ನಿರಂತರ ನಡೆಯಬೇಕು-ನವೀನ್ ಭಂಡಾರಿ
ಪುತ್ತೂರು:ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವ ಹಿನ್ನೆಲೆ ಮತದಾರರಲ್ಲಿ ಮತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೆಚ್ಚುವರಿ ಸಹಾಯಕ ಮತದಾರರ ನೋಂದಾವಣಾ ಅಧಿಕಾರಿ,ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೇಳಿದರು.
ತಾ.ಪಂ.ಸಭಾಂಗಣದಲ್ಲಿ ಜ.9ರಂದು ಹಮ್ಮಿಕೊಂಡಿದ್ದ 206 ಪುತ್ತೂರು ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಒಟ್ಟು ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಎಲ್ಲಾ ಮತಗಟ್ಟೆ ಅಧಿಕಾರಿಗಳನ್ನು ಮೇಲುಸ್ತುವಾರಿ ಮಾಡಿಕೊಂಡು, ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು.ಅದೇ ರೀತಿ ಮತದಾನದ ಯಂತ್ರಗಳಾದ ಇವಿಎಂ ಹಾಗೂ ವಿವಿ ಪ್ಯಾಟ್ ನ ಮೂಲಕ ಮತದಾನ ಪಾರದರ್ಶಕವಾಗಿ, ಯಾವುದೇ ಗೊಂದಲಗಳಿಲ್ಲದೆ ನಡೆಯುತ್ತದೆ ಎಂಬುದನ್ನು ಮತದಾರರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಬೇಕು ಎಂದರು.
ಮಾಸ್ಟರ್ ತರಬೇತುದಾರರಾದ ಪ್ರಶಾಂತ್ ಅವರು ಸೆಕ್ಟರ್ ಅಽಕಾರಿಗಳಿಗೆ ಮತದಾನ ಯಂತ್ರ ಇವಿಎಂ ಹಾಗೂ ವಿವಿ ಪ್ಯಾಟ್‌ನ ಕಾರ್ಯವಿಧಾನ, ಮತ ಚಲಾವಣೆ, ಮತ ಎಣಿಕೆ ಕಾರ್ಯ ಹೇಗೆ ಪಾರದರ್ಶಕವಾಗಿ ನಡೆಯುತ್ತದೆ ಎಂಬುದನ್ನು ತಿಳಿಸಿದರು.ಈ ಸಂದರ್ಭ ಪ್ರಶಾಂತ್ ನಾಯಕ್ ತಾಂತ್ರಿಕ ವಿಚಾರ ತಿಳಿಸಿದರು.206 ಪುತ್ತೂರು ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.