ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಜ.19 ರಿಂದ ಸೀಮೆಗೆ ಸಂಬಂಧಿಸಿ ತಾಲೂಕಿನ 28 ದೇವಸ್ಥಾನಗಳಲ್ಲಿ ಮೂರು ದಿನದ ಶ್ರೀ ರಾಮಾಶ್ವಯಾತ್ರೆ ಮತ್ತು ಜ.22ರಂದು ಶ್ರೀ ರಾಮತಾರಕ ಹವನ ನಡೆಯಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.
ದೇವಳದ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಸೀಮಾ ವ್ಯಾಪ್ತಿಯ ಎಲ್ಲಾ ಗ್ರಾಮ ದೇವಸ್ಥಾನಗಳಿಗೆ ಶ್ರೀ ರಾಮಾಶ್ವಯಾತ್ರೆ ತೆರಳಲಿದ್ದು, ಗ್ರಾಮ ದೇವಸ್ಥಾನಗಳಿಗೆ ಬಂದಿರುವ ರಾಮಾಶ್ವವನ್ನು ಆರತಿ ಬೆಳಗಿ ಸ್ವಾಗತಿಸಿ, ಶ್ರೀ ರಾಮದೇವರಿಗೆ ಮಂಗಳಾರತಿ ಮಾಡಿ ಪ್ರಸಾದ ಹಂಚಲಾಗುತ್ತದೆ. ಇದೇ ಸಂದರ್ಭದಲ್ಲಿ ಜ.22ರಂದು ನಡೆಯುವ ಶ್ರೀರಾಮತಾರಕ ಯಜ್ಞಕ್ಕೆ ಬೇಕಾದ ತುಪ್ಪ, ಬೆಲ್ಲ ಸಹಿತ ಸಮಿತ್ತುಗಳನ್ನು, ಅರ್ಘ್ಯಗಳನ್ನು ಭಕ್ತಾದಿಗಳಿಂದ ಸಂಗ್ರಹಿಸುವ ಕಾರ್ಯವು ನಡೆಯಲಿದೆ. ಶ್ರೀರಾಮತಾರಕ ಯಜ್ಞದಲ್ಲಿ ಹತ್ತು ಸಾವಿರ ಆಹುತಿಯೊಂದಿಗೆ ಸುಮಾರು 1 ಲಕ್ಷ ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ’ ಸಂಕಲ್ಪದೊಂದಿಗೆ ಎಲ್ಲರೂ ಹೇಳಬೇಕು ಎಂದು ಅವರು ಮನವಿ ಮಾಡಿದರು.
ಶ್ರೀ ರಾಮ ತಾರಕ ಹವನ:
ಜ.22 ರಂದು ಶ್ರೀರಾಮಾಶ್ವ ದೇವಳಕ್ಕೆ ತಲುಪಲಿದ್ದು, ಅಂದು ಬೆಳಗ್ಗಿನಿಂದಲೇ ದೇವಳದ ವಠಾರದಲ್ಲಿ ಶ್ರೀ ರಾಮತಾರಕ ಯಜ್ಞ ನಡೆಯಲಿದೆ. ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ ನಡೆಯಲಿರುವ ಸಂದರ್ಭ ನಡೆಯುವ ಈ ಯಜ್ಞಕ್ಕೆ ವೈಯುಕ್ತಿಕ ಸಂಕಲ್ಪ ನಡೆಸಲು ಎಲ್ಲಾ ಭಕ್ತಾಭಿಮಾನಿಗಳಿಗೆ ಅವಕಾಶ ಇದೆ. ಇದಕ್ಕೆ ಯಾವುದೇ ಸೇವಾ ರಶೀದಿ ಮಾಡುವ ಅಗತ್ಯವಿಲ್ಲ. 11 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಈ ಸಂದರ್ಭದಲ್ಲಿ ಬೃಹತ್ ಎಲ್ಇಡಿ ಪರದೆಯಲ್ಲಿ ಶ್ರೀ ರಾಮನ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜ.31ಕ್ಕೆ ಅನ್ನಪೂರ್ಣ ಅನ್ನಛತ್ರ ಲೋಕಾರ್ಪಣೆ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರ ಜ.31ರಂದು ಲೋಕಾರ್ಪಣೆಗೊಳ್ಳಲಿದೆ. ಜ.30ರಂದು ಸಂಜೆ ವಾಸ್ತು ರಾಕ್ಷೋಘ್ನ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಜ.31ರ ಬೆಳಿಗ್ಗೆ, 9.40 ರ ನಂತರದ ಮುಹೂರ್ತದಲ್ಲಿ ಪ್ರವೇಶ ಕಾರ್ಯಕ್ರಮ ನಡೆಯಲಿದೆ. ಬಳಿಕ ಅನ್ನಪೂರ್ಣೇಶ್ವರಿ ಯಜ್ಞ ನಡೆದು ಮಧ್ಯಾಹ್ನ ಅನ್ನದಾಸೋಹ ನಡೆಯಲಿದೆ. ಈ ಸಂದರ್ಭ ಸೀಮೆಯ ಮಾತಾಭಗಿನಿಯರು ಬೊಗಸೆ ಅಕ್ಕಿಯನ್ನು ಅನ್ನಪೂರ್ಣೇಶ್ವರಿಗೆ ಸಮರ್ಪಣೆ ಮಾಡಲು ಅವಕಾಶವಿದೆ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ವೀಣಾ ಬಿ.ಕೆ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ. ಸುಧಾ ಎಸ್ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.
ಫೆ.4ಕ್ಕೆ ಗೋಲೋಕೋತ್ಸವ:
ಹಿಂದಿನ ಸರಕಾರದ ಅವಧಿಯಲ್ಲಿ ಗೋಧಾಮಕ್ಕೆಂದು ಕುರಿಯದ ಸಂಪ್ಯದ ಮೂಲೆಯಲ್ಲಿ 19.10 ಎಕ್ರೆ ಮಂಜೂರುಗೊಂಡಿದ್ದು, ಆ ಜಾಗದಲ್ಲಿ ಫೆ.4ರಂದು ಗೋಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ 19.10 ಎಕ್ರೆ ಸ್ಥಳ ದೇವಸ್ಥಾನದ ಹೆಸರಿನಲ್ಲಿ ನೋಂದಣಿಯಾಗಿದೆ. ಗೋಲೋಕೋತ್ಸವ ಕಾರ್ಯಕ್ರಮದಲ್ಲಿ ದೇಶಿ ಮತ್ತು ವಿದೇಶಿ ತಳಿ ರಾಸುಗಳ ಪ್ರದರ್ಶನ, ಹಾಲಿನ ಉತ್ಪನ್ನಗಳ ಪ್ರದರ್ಶನ, ಮಾರಾಟ, ಗೋವಿನ ಕುರಿತು ವಿವಿಧ ಸಾಂಸ್ಕೃತಿಕ ಜಾಗೃತಿ ಪ್ರದರ್ಶನ, ಧಾರ್ಮಿಕ ಶಿಕ್ಷಣದ ಎಲ್ಲಾ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಮತ್ತು ಭಜನೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ಇದು ಗೋವಿಹಾರ ಧಾಮ ಆಗಲಿದೆ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.