ಒಳಮೊಗ್ರು ಗ್ರಾಪಂ ಮಕ್ಕಳ ಹಕ್ಕುಗಳ ಗ್ರಾಮ ಸಭೆ – ಯಾವುದೇ ಸಮಸ್ಯೆ ಇದ್ದರೂ ಹೆತ್ತವರಿಗೆ, ಶಿಕ್ಷಕರಿಗೆ ತಿಳಿಸಿ: ಎಸ್.ಐ ಜಂಬೂರಾಜ್

0

ಪುತ್ತೂರು: ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರನ್ನು ಮಕ್ಕಳು ಎಂದು ಕರೆಯಲಾಗಿದೆ. ಮಕ್ಕಳು ತಮಗೆ ಆಗುವ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಡದೆ ಅದನ್ನು ತಮ್ಮ ಹೆತ್ತವರಲ್ಲಿ ಅಥವಾ ಶಿಕ್ಷಕರಲ್ಲಿ ಹೇಳಿಕೊಳ್ಳಿ, ಯಾರಿಂದ ಯಾವುದೇ ರೀತಿಯ ತೊಂದರೆ, ಮಾನಸಿಕ, ಲೈಂಗಿಕ ಕಿರುಕುಳ ಅಥವಾ ಇನ್ನಿತರ ತೊಂದರೆಗಳಾಗುತ್ತಿದ್ದರೆ ಅದನ್ನು ಹೆತ್ತವರಿಗೆ ತಿಳಿಸಿ ಅವರ ಮೂಲಕ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 1098 ಅಥವಾ 112 ಕರೆ ಮಾಡಿ ತಿಳಿಸಿ, ಪೊಲೀಸರು ನಿಮ್ಮ ಸಹಾಯಕ್ಕೆ ಬಂದೇ ಬರುತ್ತಾರೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಹೇಳಿದರು.


ಅವರು ಒಳಮೊಗ್ರು ಗ್ರಾಮ ಪಂಚಾಯತ್‌ನಿಂದ ಜ.11ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಾಹಿತಿ ನೀಡಿದರು.ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ಪರಿಚಯಸ್ಥರಿಂದಲೇ ನಡೆಯುತ್ತಿದ್ದು ಈ ಬಗ್ಗೆ ಮಕ್ಕಳು ಜಾಗೃತರಾಗಿರಬೇಕು, ಏನೇ ತೊಂದರೆಯಾದರೂ ಹೆತ್ತವರಿಗೆ ಕೂಡಲೇ ತಿಳಿಸಿ ಎಂದು ಜಂಬೂರಾಜ್ ಹೇಳಿದರು.
ಗ್ರಾಮಸಭೆಯೆ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಗ್ರಾಪಂ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿ ಬಗ್ಗೆ ಗ್ರಾಪಂ ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಕಳೆದ ವರ್ಷ ಮಕ್ಕಳಿಂದ ಬಂದ ಬೇಡಿಕೆಗಳಲ್ಲಿ ಗ್ರಾಪಂನಿಂದ ಸಾಧ್ಯವಾಗುವ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ. ಈ ಸಲವೂ ತುಂಬಾ ಬೇಡಿಕೆಗಳು ಬಂದಿವೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಕೆಲವೊಂದು ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ ಬರೆದು ತಿಳಿಸಲಾಗುವುದು ಎಂದು ಹೇಳಿದರು. ಸಂಪನ್ಮೂಲ ಆಗಮಿಸಿದ್ದ ಚೈಲ್ಡ್ ರೈಟ್ಸ್ ಬೆಂಗಳೂರು ಇದರ ತಾಲೂಕು ಸಂಯೋಜಕಿ ಕಸ್ತೂರಿ ಬೊಳುವಾರು ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಆದ್ದರಿಂದ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯತೆ ತುಂಬಾ ಇದೆ. ಇಂದಿನ ದಿನಗಳಲ್ಲಿ ಮಕ್ಕಳ ದಾರಿ ತಪ್ಪಿಸುವ ಕೆಲಸ ವಿವಿಧ ರೀತಿಯಲ್ಲಿ ನಡೆಯುತ್ತಿದೆ ಒಂದು ಕಡೆಯಲ್ಲಿ ಮಾದಕ ವಸ್ತುಗಳು ಮಕ್ಕಳು ಕೈಗೆ ಸಿಕ್ಕಿ ಮಕ್ಕಳ ಭವಿಷ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳು ಎಲ್ಲಾ ವಿಧದಲ್ಲೂ ಜಾಗೃತರಾಗಿರಬೇಕು ತಮಗೆ ಯಾವುದೇ ರೀತಿಯ ತೊಂದರೆ, ಸಮಸ್ಯೆ ಉಂಟಾದರೆ ತಕ್ಷಣವೇ ಶಿಕ್ಷಕರ, ಹೆತ್ತವರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಮಾದಕ ವಸ್ತುಗಳು ಹೆಬ್ಬಾಗಿಲು ಆಗುತ್ತಿದ್ದು ಇಲ್ಲಿಂದಲೇ ಎಲ್ಲಾ ಕಡೆಗಳಿಗೆ ಮಾದಕ ವಸ್ತುಗಳು ರವಾನೆಯಾಗುತ್ತಿದೆ ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿ, ಆರೋಗ್ಯ ಇಲಾಖೆಯ ಸುಶ್ಮಿತಾ, ಕುಂಬ್ರ ಸಿಆರ್‌ಪಿ ಶಶಿಕಲಾರವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಬಿ.ಸಿ ಚಿತ್ರಾ, ನಳಿನಾಕ್ಷಿ, ಶಾರದಾ, ರೇಖಾ ಕುಮಾರಿ, ಲತೀಫ್ ಟೈಲರ್, ಕೈಕಾರ ಶಾಲೆಯ ಚಿನ್ಮಯಿ, ಪರ್ಪುಂಜ ಶಾಲೆಯ ಧೃತಿ ಹಾಗೂ ಶಾಲೆಗಳ ಮುಖ್ಯಗುರುಗಳು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಜಯಂತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮಹೇಶ್ ರೈ ಕೇರಿ ವಂದಿಸಿದರು. ಸಿಬ್ಬಂದಿಗಳಾದ ಗುಲಾಬಿ, ಸಿರಿನಾ, ಲೋಕನಾಥ್ ಸಹಕರಿಸಿದ್ದರು.

ಗ್ರಾಮಸಭೆಯಲ್ಲಿ ಮಕ್ಕಳಿಂದ ಬಂದ ಬೇಡಿಕೆಗಳು
ತಿಂಗಳಾಡಿಯಿಂದ ಕುಂಬ್ರಕ್ಕೆ ಬರುವ ಮಕ್ಕಳನ್ನು ಬಸ್ಸಿಗೆ ಹತ್ತಿಸುವುದಿಲ್ಲ, ನಡೆದುಕೊಂಡು ಬನ್ನಿ ಎಂದು ನಿರ್ವಾಹಕರು ಹೇಳುತ್ತಾರೆ.
ಕುಂಬ್ರ ಶಾಲೆಗೆ ತಿಂಗಳಾಡಿ, ತ್ಯಾಗರಾಜನಗರ, ಕೊಲ್ಲಾಜೆ, ಸಾರೆಪುಣಿ ಇತ್ಯಾದಿ ಕಡೆಗಳಿಂದ ಬರುವ ವಿದ್ಯಾರ್ಥಿಗಳನ್ನು ಬಸ್ಸಿನವರು ಹತ್ತಿಸುವುದಿಲ್ಲ. ಬೆಳಿಗ್ಗೆ 8.3೦ ಒಂದು ಬಸ್ಸು ಮಾತ್ರ ಇದ್ದು ಇದಕ್ಕೆ ಹೆತ್ತುವಾಗ ನಿರ್ವಾಹಕರು ಕುಂಬ್ರಕ್ಕೆ ಬರುವ ವಿದ್ಯಾರ್ಥಿಗಳು ಹತ್ತಬೇಡಿ ನೀವು ನಡೆದುಕೊಂಡು ಹೋಗಿ ಪುತ್ತೂರಿಗೆ ಬರುವ ಮಕ್ಕಳು ಮಾತ್ರ ಬನ್ನಿ ಎಂದು ಹೇಳುತ್ತಾರೆ. ಮತ್ತೆ ನಮಗೆ ಬಸ್ಸು ಇಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ 8 ಗಂಟೆಗೆ ಒಂದು ಬಸ್ಸು ಬೇಕು ಎಂದು ಕುಂಬ್ರ ಕೆಪಿಎಸ್ ವಿದ್ಯಾರ್ಥಿನಿ ಕೃತಿಕಾ ಕೇಳಿಕೊಂಡರು. ಈ ಬಗ್ಗೆ ಸಾರಿಗೆ ಇಲಾಖೆಗೆ ಬರೆಯುವುದು ಎಂದು ನಿರ್ಣಯಿಸಲಾಯಿತು. ಕುಂಬ್ರ ಶಾಲೆಗೆ ನಳ್ಳಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಡುವಂತೆ ವಿದ್ಯಾರ್ಥಿಗಳು ಕೇಳಿಕೊಂಡರು. ಕೈಕಾರ ಶಾಲಾ ಬಳಿ ವಾಹನಗಳು ಅತೀ ವೇಗವಾಗಿ ಸಂಚರಿಸುವುದರಿಂದ ಇಲ್ಲಿ ರಸ್ತೆ ಉಬ್ಬುಗಳನ್ನು ಅಳವಡಿಸುವಂತೆ ಸಿಂಚನಾ ಕೇಳಿಕೊಂಡರು. ದರ್ಬೆತ್ತಡ್ಕ ಶಾಲೆಯ ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ತೊಂದರೆಯಾಗಿದೆ ಎಂದು ಪ್ರತೀಕ್ಷಾ ಹೇಳಿದರು. ದರ್ಬೆತ್ತಡ್ಕ ಶಾಲಾ ಬಳಿಯ ರಸ್ತೆಯಿಂದ ಧೂಳು ಶಾಲೆಗೆ ಬರುತ್ತಿದ್ದು, ಸಮಸ್ಯೆಯಾಗುತ್ತಿದೆ ಎಂದು ಗುಣಶ್ರೀ ತಿಳಿಸಿದರು. ಪರ್ಪುಂಜ ಶಾಲಾ ಆಟದ ಮೈದಾನಕ್ಕೆ ಹೊರಗಿನವರು ಬಂದು ಆಟವಾಡುತ್ತಿದ್ದು ಶಾಲಾ ವಸ್ತುಗಳಿಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಕುಂಬ್ರ ಕೆಪಿಎಸ್ ಶಾಲಾ ಕೆಲವು ಕೊಠಡಿಗಳ ಕಿಟಕಿಗಳ ಬಾಗಿಲು ಹಾಳಾಗಿದ್ದು ಬಾಗಿಲು ಇಲ್ಲದೆ ಕ್ಲಾಸ್‌ರೂಮ್‌ಗೆ ಹಾವುಗಳು ಬರುತ್ತಿವೆ, ಅಡುಗೆ ಕೊಠಡಿಗೆ ಶೀಟುಗಳ ಅವಶ್ಯಕತೆ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಕುಟ್ಟಿನೋಪಿನಡ್ಕ ಶಾಲಾ ಶೌಚಾಲಯಕ್ಕೆ ರಾತ್ರಿ ವೇಳೆ ಅಪರಿಚಿತರು ಬಂದು ಬೀಡಿ, ಸಿಗರೇಟ್ ಸೇದಿ ಗಲೀಜು ಮಾಡಿ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಿದ್ಯಾರ್ಥಿಗಳ ಬೇಡಿಕೆ, ಸಮಸ್ಯೆಗಳನ್ನು ಆಲಿಸಿದ ಗ್ರಾ.ಪಂ ಅಧ್ಯಕ್ಷರು ಸೂಕ್ತ ಸಲಹೆ ಸೂಚನೆ ನೀಡಿದರು ಅಲ್ಲದೆ ಬೇಡಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.

ಅಟೋ ರಿಕ್ಷಾದಲ್ಲಿ ಕಾನೂನಿನ ಪರಿಮಿತಿಗಿಂತ ಹೆಚ್ಚಾಗಿ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿರುವುದು ಕಂಡುಬಂದರೆ ನಿಮ್ಮ ಶಿಕ್ಷಕರಿಗೆ, ಹೆತ್ತವರಿಗೆ ತಿಳಿಸಿ ಇಂತಹ ರಿಕ್ಷಾ ಚಾಲಕರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಐ ತಿಳಿಸಿದರು. ಮಕ್ಕಳನ್ನು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಇರುವ ಪ್ರಕರಣಗಳು ಕಂಡುಬರುತ್ತಿದೆ. ಮಕ್ಕಳಿಗೆ ಹೆಲ್ಮೆಟ್ ಹಾಕಬೇಕು ಹಾಗೇ ವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ದಂಡ ವಿಧಿಸಲಾಗುವುದು ಎಂದ ಜಂಬೂರಾಜ್ ಮಹಾಜನ್‌ರವರು, ಮಕ್ಕಳು ಮೊಬೈಲ್ ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಬೇಕು, ಹದಿಹರೆಯದ ಹೆಣ್ಣು ಮಕ್ಕಳ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್, ಪೇಸ್‌ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿಗಳಿಗೆ ಹಾಕಬೇಡಿ ಎಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here