ಕಡಬ: ಕಡಬ ಭಾಗದಲ್ಲಿ ನಿಯಮ ಬಾಹಿರವಾಗಿ ಮತ್ತು ಅಕ್ರಮವಾಗಿ ಮರಳುಗಾರಿಕೆ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲೋಕಾಯುಕ್ತದ ಸೂಚನೆಯಂತೆ ಸರ್ವೆ ಕಾರ್ಯ ನಡೆಸಿರುವ ಅಧಿಕಾರಿಗಳು ಕಾಟಾಚಾರದ ತನಿಖೆ ನಡೆಸಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ನೂಜಿಬಾಳ್ತಿಲ ಗ್ರಾಮದ ಪದಕ ನಿವಾಸಿ ಭಾಸ್ಕರ ಗೌಡ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಕಡಬ ತಾಲೂಕಿನ ಸುಮಾರು 20 ಕಡೆ ಮರುಳುಗಾರಿಕೆಗೆ ಭೂ ವಿಜ್ಞಾನ ಇಲಾಖೆ ಟೆಂಡರ್ ಕರೆದು ಹರಾಜು ಮಾಡಿದೆ. ಆ ಪೈಕಿ ಮುಖ್ಯವಾಗಿ ನೂಜಿಬಾಳ್ತಿಲದ ಮರಳು ಬ್ಲಾಕನ್ನು ಹರಾಜು ಪಡೆದಿರುವ ಬಳ್ಪ ಗ್ರಾಮದ ನಿವಾಸಿಯೊಬ್ಬರು ಸರಕಾರ ರೂಪಿಸಿದ ನಿಯಮಾವಳಿಗಳನ್ನು ಗಾಳಿಗೆ ತೂರಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ನಿಯಮ ಪ್ರಕಾರ ಮರಳು ದಿಬ್ಬಗಳಲ್ಲಿ ಮಾತ್ರ ಮರಳುಗಾರಿಕೆ ನಡೆಸಬೇಕು. ಆದರೆ ನೂಜಿಬಾಳ್ತಿಲ ಸೇರಿದಂತೆ ಗುಂಡ್ಯ ಹೊಳೆಯ ಶಿರಾಡಿ, ಉದನೆ, ಎಂಜಿರ, ಬಲ್ಯ, ಹೊಸ್ಮಠ, ಕುಮಾರಧಾರ ನದಿಯ ಕೇನ್ಯ, ಮಜ್ಜಾರು, ಆಲಂಕಾರು ಮತ್ತಿತರ ಕಡೆ ಕೂಡಾ ನಿಯಮಬಾಹಿರವಾಗಿ ಮರಳುಗಾರಿಕೆ ಮಾಡಲಾಗುತ್ತಿದೆ. ಈ ವಿಚಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರೆಲ್ಲಾ ಮರುಳಗಾರಿಕೆ ಮಾಡುವವರಿಂದ ಹಣ ಪಡೆದು ಅಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಕ್ರಮದಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ವಿವರವನ್ನು ಉಲ್ಲೇಖಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ದೂರಿನ ಸತ್ಯಾಸತ್ಯತೆ ಅರಿಯಲು ಜಂಟಿ ಸರ್ವೇಗೆ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಅಕ್ರಮ ದಂಧೆಕೋರರೊಂದಿಗೆ ಸೇರಿಕೊಂಡು ಅವರಿಗೆ ಬೇಕಾದ ಹಾಗೆ ಸರ್ವೆ ನಡೆಸಿ ಕಾಟಾಚಾರಕ್ಕೆ ತನಿಖೆ ನಡೆಸುವ ತಂತ್ರ ಮಾಡಿದ್ದಾರೆ. ಇದರಿಂದಾಗಿ ಅಕ್ರಮಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿರುವುದರಿಂದ ಲೋಕಾಯುಕ್ತ ಅಧಿಕಾರಿಗಳೇ ಈ ಎಲ್ಲಾ ಅಕ್ರಮವನ್ನು ಖುದ್ದು ಪರಿಶೀಲಿಸಿ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಭಾಸ್ಕರ ಗೌಡ ಅಗ್ರಹಿಸಿದರು.