ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರಕಾರವು ಹೆರಿಗೆ ತಜ್ಞರನ್ನು ನೇಮಿಸಿದ್ದು, ಡಾ.ಸ್ಮಿತಾ ಅವರು ಕರ್ತವ್ಯದಲ್ಲಿದ್ದಾರೆ.
ಗರ್ಭಿಣಿಯರ ತಪಾಸಣೆ, ನಾರ್ಮಲ್ ಹೆರಿಗೆಗಳನ್ನು ಇಲ್ಲೇ ಮಾಡುವ ವ್ಯವಸ್ಥೆಯಿದ್ದು, ಅಪರೇಷನ್ ಥಿಯೇಟರ್ನ ವ್ಯವಸ್ಥೆ ಹಾಗೂ ಅರಿವಳಿಕೆ ತಜ್ಞರ ನೇಮಕಾತಿ ಆದ ಬಳಿಕ ಇಲ್ಲೇ ಸಿಸೇರಿಯನ್ ಹೆರಿಗೆಗಳನ್ನು ಮಾಡಲಾಗುವುದು. ಇಲ್ಲದಿದ್ದಲ್ಲಿ ಇಲ್ಲಿ ಬರುವಂತಹ ಪ್ರಕರಣಗಳನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕಳುಹಿಸಿ, ಇಲ್ಲಿನ ವೈದ್ಯರೇ ಅಲ್ಲಿಗೆ ತೆರಳಿ ಹೆರಿಗೆಗಳನ್ನು ಮಾಡುತ್ತಾರೆ.
ಇನ್ನು ದಂತ ವೈದ್ಯ ಡಾ.ಮನೋಜ್ ಇಲ್ಲಿ ಕರ್ತವ್ಯದಲ್ಲಿದ್ದು, ಸಾರ್ವಜನಿಕರ ಸೇವೆಗೆ ಲಭ್ಯವಿದ್ದಾರೆ. ಅಲ್ಲದೇ, ಡಿಆರ್ಪಿ ಕಾರ್ಯಕ್ರಮದಡಿಯಲ್ಲಿ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಕೂಡಾ ರಾತ್ರಿ, ಹಗಲು ಪಾಳಿಯಲ್ಲಿ ಇಲ್ಲಿ ರೋಗಿಗಳ ಚಿಕಿತ್ಸೆಗೆ ಲಭ್ಯವಿದ್ದಾರೆ ಎಂದು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.