ಶರನ್ ಡಿ’ಸಿಲ್ವ ಗರಿಷ್ಟ ಪಾಯಿಂಟ್ಗೆ ಕ್ರಿಶಲ್ ವಾರಿಯರ್ಸ್ ತೆಕ್ಕೆಗೆ, ಪ್ರೀತಂ
ಮಸ್ಕರೇನ್ಹಸ್ ಫ್ಲೈಝೋನ್ ಅಟ್ಯಾಕರ್ಸ್, ರಾಕೇಶ್ ಡಿ’ಸೋಜ ಲೂವಿಸ್ ಕ್ರಿಕೆಟರ್ಸ್ ತಂಡಕ್ಕೆ
ಪುತ್ತೂರು: ಮಾಯಿದೆ ದೇವುಸ್ ಚರ್ಚ್ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2024-ಸೀಸನ್ 3′ ಫೆ.11ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದ್ದು, ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜ.14 ರಂದು ನೆರವೇರಿತು.
ಹೈಸ್ಕೂಲ್ ಬಾಲಕ ಶರನ್ ಡಿ’ಸಿಲ್ವರವರಿಗೆ ಹೆಚ್ಚಿನ ಬಿಡ್ಡಿಂಗ್:
ಪುತ್ತೂರಿನಲ್ಲಿ ತೃತೀಯ ಬಾರಿಗೆ ಐಪಿಎಲ್ ಮಾದರಿಯಲ್ಲಿ ಮೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ ಸೀಮಿತ ಓವರ್ಗಳ ಓವರ್ ಆರ್ಮ್ ಟೆನ್ನಿಸ್ ಬಾಲ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ಬಲಿಷ್ಟ ಆರು ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಪ್ರತೀ ತಂಡವು ತಂಡದ ಮಾಲಕರು ಹಾಗೂ ತಂಡದಲ್ಲಿ ಐಕಾನ್ ಆಟಗಾರರನ್ನು ಹೊಂದಿದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಪ್ರತಿ ಆರು ತಂಡಗಳಿಗೆ ಒಂದು ಲಕ್ಷ ಪಾಯಿಂಟ್ನ್ನು ಸಂಘಟಕರು ನಿಗದಿಪಡಿಸಲಾಗಿದ್ದು, ಆ ಒಂದು ಲಕ್ಷ ಪಾಯಿಂಟ್ ಒಳಗಡೆ ಆಟಗಾರರನ್ನು ಖರೀದಿಸಬಹುದಾಗಿತ್ತು. ಒಟ್ಟು 76 ಆಟಗಾರರಲ್ಲಿ ಐಕಾನ್ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರ ನಡುವೆ ಬಿಗ್ ಫೈಟ್ ಬಿಡ್ ಪ್ರಕ್ರಿಯೆಗೆ ಒಳಪಟ್ಟಿತ್ತು. ಇದರಲ್ಲಿ ಹೈಸ್ಕೂಲ್ ಬಾಲಕ, ವೇಗದ ಬೌಲರ್ ಆಗಿರುವ ಸಾಮೆತ್ತಡ್ಕದ ಶರನ್ ಡಿ’ಸಿಲ್ವರವರು 58 ಸಾವಿರ ಪಾಯಿಂಟ್ಸ್ಗಳಿಗೆ ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ್ಸ್ ತೆಕ್ಕೆಗೆ ಬಿಕರಿಯಾದರು. ಕಳೆದ ವರ್ಷ ಸೀಸನ್-2ನಲ್ಲಿ ನವೀನ್ ಪಸನ್ನ, ಸೀಸನ್ 1ರಲ್ಲಿ ಡ್ಯಾನಿಯಲ್ ಸುವಾರಿಸ್ರವರು ಗರಿಷ್ಟ ಪಾಯಿಂಟ್ಸ್ಗಳಿಗೆ ಬಿಕರಿಯಾಗಿದ್ದರು.
ಪ್ರೀತಂ ಮಸ್ಕರೇನ್ಹಸ್/ರಾಕೇಶ್ ಡಿ’ಸೋಜ ನಂತರದ ಸ್ಥಾನ:
ಪುತ್ತೂರು ಸಾಮೆತ್ತಡ್ಕ ನಿವಾಸಿ ಪ್ರೀತಂ ಮಸ್ಕರೇನ್ಹಸ್ರವರು 50 ಸಾವಿರ ಪಾಯಿಂಟ್ಸ್ಗಳೊಂದಿಗೆ ದ್ವಿತೀಯ ಸ್ಥಾನದೊಂದಿಗೆ ಫ್ಲೈಝೋನ್ ಅಟ್ಯಾಕರ್ಸ್ ತಂಡಕ್ಕೆ ಹಾಗೂ ಮರೀಲ್ ನಿವಾಸಿ ರಾಕೇಶ್ ಡಿ’ಸೋಜರವರು 39 ಸಾವಿರ ಪಾಯಿಂಟ್ಸ್ಗಳೊಂದಿಗೆ ತೃತೀಯ ಸ್ಥಾನದೊಂದಿಗೆ ಲೂವಿಸ್ ಕ್ರಿಕೆಟರ್ಸ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಕಳೆದ ಬಾರಿ ರೋಹನ್ ಡಿ’ಕುನ್ಹಾ ಹಾಗೂ ಲೋಯ್ ಮೆಲ್ಡನ್ರವರು ನಂತರದ ಸ್ಥಾನ ಪಡೆದಿದ್ದರು.
ಬಿಡ್ ಪ್ರಕ್ರಿಯೆ:
ಸಂಜೆ ನಡೆದ ಬಿಡ್ ಪ್ರಕ್ರಿಯೆಗೆ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಗಿದ್ದು, ಈ ಬಿಡ್ ಪ್ರಕ್ರಿಯೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಆಟಗಾರರ ಹೆಸರು ಹಾಗೂ ಯಾವ ಶೈಲಿಯ ಆಟಗಾರ ಎನ್ನುವುದನ್ನು ಪವರ್ಪಾಂಟ್ ಮುಖೇನ ಬಿಡ್ಡಿಂಗ್ನಲ್ಲಿ ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ ಡೊನ್ ಬೊಸ್ಕೊ ಕ್ಲಬ್ನ ಅಧ್ಯಕ್ಷ ಆಂಟನಿ ಒಲಿವೆರಾರವರು ಕಾರ್ಯಕ್ರಮಕ್ಕೆ ಶುಭ ಹಾರೈಸುವ ಮೂಲಕ ಬಿಡ್ ಪ್ರಕ್ರಿಯೆಗೆ ಚಾಲನೆಯಿತ್ತರು. ಲೀಗ್ ಹಂತದಲ್ಲಿ ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ತೇರ್ಗಡೆ ಹೊಂದುವ ಅರ್ಹತೆ ಹೊಂದುತ್ತದೆ. ಲೀಗ್, ಫ್ಲೇ ಆಫ್ ಸುತ್ತಿನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಒಟ್ಟು 18 ಪಂದ್ಯಗಳು ನಡೆಯಲಿವೆ. ಫಿಲೋಮಿನಾದ ಎರಡು ಮೈದಾನಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಿಝ್ಲರ್ ಸ್ರೈಕರ್ಸ್ ತಂಡದ ಮಾಲಕ ರೋಶನ್ ರೆಬೆಲ್ಲೋ ಕಲ್ಲಾರೆ, ಸೋಜಾ ಸೂಪರ್ ಕಿಂಗ್ಸ್ ತಂಡದ ಮಾಲಕ ದೀಪಕ್ ಮಿನೇಜಸ್ ದರ್ಬೆ, ಕ್ರಿಶಲ್ ವಾರಿಯರ್ಸ್ ತಂಡದ ಮಾಲಕರಾದ ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಸ್ ನೂಜಿ, ಫ್ಲೈ ಝೋನ್ ಅಟ್ಯಾಕರ್ಸ್ ತಂಡದ ಮಾಲಕ ಪ್ರವೀಣ್ ವೇಗಸ್(ಬಾಬಾ), ಎಸ್.ಎಲ್ ಗ್ಲ್ಯಾಡಿಯೇಟರ್ಸ್ ತಂಡದ ಮಾಲಕ ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ, ಲೂವಿಸ್ ಕ್ರಿಕೆಟರ್ಸ್ ತಂಡದ ಮಾಲಕ ಲೆಸ್ಟರ್ ಲೂವಿಸ್ರವರೊಂದಿಗೆ ಆಯಾ ತಂಡದ ಐಕಾನ್ ಪ್ಲೇಯರ್ ಉಪಸ್ಥಿತರಿದ್ದರು. ಡೊನ್ ಬೊಸ್ಕೊ ಕ್ಲಬ್ನ ಸದಸ್ಯರಾದ ರೋಯ್ಸ್ ಪಿಂಟೊ, ಅರುಣ್ ಪಿಂಟೊ, ಸಿಲ್ವೆಸ್ತರ್ ಗೊನ್ಸಾಲ್ವಿಸ್, ಸಂದೀಪ್ ಪಾಯಿಸ್ಸ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘಟಕರಾದ ರಾಕೇಶ್ ಮಸ್ಕರೇನ್ಹಸ್, ಆಲನ್ ಮಿನೇಜಸ್, ರೋಹನ್ ಡಾಯಸ್ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿಸೋಜಾ ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ಜ್ಯೋ ಡಿ’ಸೋಜ ವಂದಿಸಿದರು.
6 ಐಕಾನ್ ಆಟಗಾರರು…
ಕೂಟದಲ್ಲಿ ಡೋಯ್ ಕೂರ್ನಡ್ಕ(ಲೂವಿಸ್ ಕ್ರಿಕೆಟರ್ಸ್), ಜೇಮ್ಸ್ ಸಂಟ್ಯಾರ್(ಸೋಜಾ ಸೂಪರ್ ಕಿಂಗ್ಸ್), ಐವನ್ ಡಿ’ಸಿಲ್ವ(ಸಿಝ್ಲರ್ ಸ್ಟ್ರೈಕರ್ಸ್),ವಿಕ್ಟರ್ ಶರೋನ್(ಎಸ್.ಎಲ್ ಗ್ಲ್ಯಾಡಿಯೇಟರ್ಸ್), ಜೋನ್ಸನ್ ಗಲ್ಬಾವೊ ಬನ್ನೂರು(ಕ್ರಿಶಲ್ ವಾರಿಯರ್ಸ್), ಮೇಗಸ್ ಮಸ್ಕರೇನ್ಹಸ್(ಫ್ಲೈಝೋನ್ ಅಟ್ಯಾಕರ್ಸ್) ಹೀಗೆ ಆರು ಮಂದಿ ಐಕಾನ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಆರು ತಂಡಗಳು..
-ಸಿಝ್ಲರ್ ಸ್ಟ್ರೈಕರ್ಸ್
-ಸೋಜಾ ಸೂಪರ್ ಕಿಂಗ್ಸ್
-ಕ್ರಿಶಲ್ ವಾರಿಯರ್ಸ್
-ಫ್ಲೈಝೋನ್ ಅಟ್ಯಾಕರ್ಸ್
-ಎಸ್.ಎಲ್ ಗ್ಲ್ಯಾಡಿಯೇಟರ್ಸ್
-ಲೂವಿಸ್ ಕ್ರಿಕೆಟರ್ಸ್