‘ಭಗವಂತನ ನಾಮಸ್ಮರಣೆಯಿಂದ ಪರಿವರ್ತನೆ’-ಆತೂರು ಸದಾಶಿವ ದೇವಸ್ಥಾನದಲ್ಲಿ ನಡೆದ ಭಜನೋತ್ಸವದಲ್ಲಿ ನ.ಸೀತಾರಾಮ

0

ರಾಮಕುಂಜ: ಹಿಂದೂ ಸಮಾಜವನ್ನು ಪರಮ ವೈಭವದೆಡೆಗೆ ಮತ್ತೊಮ್ಮೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಭಾರತವನ್ನು ಧರ್ಮ ಭೂಮಿ ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ನಮ್ಮ ಧರ್ಮದ ಮೇಲೆ ಅನೇಕ ಅಕ್ರಮ ನಡೆದರೂ ಮತ್ತೊಮ್ಮೆ ಅತ್ಮವಿಶ್ವಾಸದಿಂದ ಎದ್ದು ನಿಲ್ಲಲು ನಮ್ಮ ಹಿರಿಯರು ಧಾರ್ಮಿಕ ಸಂಘಟನೆ ಮೊರೆಹೊಗುತ್ತಿದ್ದರು. ವರ್ತಮಾನದಲ್ಲಿ ಭಜನಾ ಸಂಘಟನೆಗಳು ಹಿಂದೂ ಸಮಾಜದ ಪರಿರ್ತನೆ ಮಾಡುತ್ತಿದೆ. ಇದಕ್ಕೆ ಹಿಂದೂ ಸಮಾಜದ ಎಲ್ಲಾ ಮನೆಯಿಂದಲೂ ಬಲ ನೀಡಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ಸಹಸೇವಾ ಪ್ರಮುಖ್ ನ.ಸೀತಾರಾಮ ಅವರು ಹೇಳಿದರು.


ಅವರು ಜ.14ರಂದು ಆತೂರು ಶ್ರೀ ಸದಾಶಿವ ಮಹಾಗಣಪತಿ ಮೈದಾನದಲ್ಲಿ ಆತೂರು-ಕೊಯಿಲ ಶ್ರೀ ಸದಾಶಿವ ಭಜನಾ ಪರಿಷತ್, ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಹಾಗೂ ಕಡಬ ತಾಲೂಕು ದೇವಾಲಯಗಳ ಸಹಯೋಗದೊಂದಿಗೆ ನಡೆದ ಭಜನೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ವ್ಯಕ್ತಿಗತ ಜೀವನ ಸಂತುಲಿತವಾಗಿ ಇರಲು ಯೋಗದಿಂದ ಸಾಧ್ಯ. ಇದರಿಂದ ಸಮಾಜದ ಆರೋಗ್ಯವನ್ನೂ ಕಾಪಾಡಲು ಸಾಧ್ಯವಿದೆ. ಭಕ್ತಿ ಪ್ರಧಾನವಾಗಿರುವ ಭಗವಂತನ ನಾಮಸ್ಮರಣೆಯಿಂದ ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಿದೆ. ಗ್ರಾಮವೂ ತೀರ್ಥ ಕ್ಷೇತ್ರವಾಗಲು ಸಾಧ್ಯವಿದೆ. ಇದಕ್ಕಾಗಿ ಒಳ್ಳೆಯ ಸದ್ಗುಣ ಮೈಗೂಡಿಸಿಕೊಂಡು ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ನ.ಸೀತಾರಾಮ ಹೇಳಿದರು.

ಪ್ರಾಸ್ತಾವನೆಗೈದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರೂ ಆದ ಶ್ರೀ ಸದಾಶಿವ ಭಜನಾ ಪರಿಷತ್ ಅಧ್ಯಕ್ಷ ಯದುಶ್ರೀ ಆನೆಗುಂಡಿ ಅವರು, ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ದೇವಸ್ಥಾನದಲ್ಲಿ ನಿರಂತರ ಚಟುವಟಿಕೆ ಮೂಲಕ ಹೊಸ ಹೊಸ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರ ದೊರೆತಿದೆ. 12 ಬೈಲುವಾರ ಸಮಿತಿ ರಚಿಸಿ ಅದಕ್ಕೆ ಮಹಿಳಾ ಪ್ರಮುಖರು, ಸಂಚಾಲಕರ ನೇಮಕ ಮಾಡಲಾಗಿತ್ತು. 12 ಬೈಲುವಾರುಗಳಲ್ಲೂ ಭಜನೆ ಆರಂಭಿಸಿ ತಿಂಗಳಿಗೆ 1 ಸಲ ದೇವಸ್ಥಾನದಲ್ಲಿ ಭಜನೆ, 12 ಬೈಲಿನಲ್ಲೂ ಏಕಕಾಲದಲ್ಲಿ ಭಜನೆ ನಡೆಸಲಾಗುತ್ತಿದೆ. ಇದಕ್ಕೆ ತಾಯಂದಿರಿಂದ ಉತ್ತಮ ಪ್ರತಿಕ್ರಿಯೆ ಬಂತು. ಇವರೆಲ್ಲರ ಅಪೇಕ್ಷೆಯಂತೆ ಕಡಬ ತಾಲೂಕು ದೇವಾಲಯಗಳ ಸಂವರ್ಧನ ಸಮಿತಿ ಸಹಕಾರದೊಂದಿಗೆ ಭಜನೋತ್ಸವ ಆಯೋಜಿಸಲಾಗಿದೆ. ಪ್ರತಿ ಗ್ರಾಮಗಳಲ್ಲೂ ಭಜನೋತ್ಸವ ನಡೆಸಲು ದೇವಾಲಯಗಳ ಸಂವರ್ಧನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದಿನ ಭಜನಾ ಕಮ್ಮಟ ನಡೆಸುವ ಗ್ರಾಮಗಳಿಗೆ ಇಲ್ಲಿ ಕಲಶ ಹಸ್ತಾಂತರಿಸಲಾಗುವುದು. ಹಿಂದೂ ಸಂಸ್ಕೃತಿ ಉಳಿಸಲು, ಜನರಲ್ಲಿ ಸಾಮರಸ್ಯ ಮೂಡಿಸಲು ಭಜನೆಯ ಅಗತ್ಯವಿದೆ ಎಂದರು.

ಶ್ರೀ ಸದಾಶಿವ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೇಶವ ಅಮೈ, ದೇವಸ್ಥಾನದ ಆಡಳಿತಾಧಿಕಾರಿ ಸುಜಾತ ಮಾತನಾಡಿದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಮುಖ್ ಆನಂದ ಕುಂಟಿನಿ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಪ್ರಸನ್ನ ದರ್ಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೈಲುವಾರು ಸಮಿತಿ ಮಹಿಳಾ ಪ್ರಮುಖ್ ಸುಶೀಲಾ ಓಕೆ ಸ್ವಾಗತಿಸಿದರು. ದೇವಸ್ಥಾನದ ಕಾರ್ಯದರ್ಶಿ ಭವಿತ್ ಪಲ್ಲಡ್ಕ ವಂದಿಸಿದರು. ಶಿಕ್ಷಕ ಪರಮೇಶ್ವರ ಸಬಳೂರು, ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಈ ಸಂದರ್ಭ ಮುಂದಿನ ಭಜನಾ ಕಮ್ಮಟ ನಡೆಸಲು ಹಳೆನೇರೆಂಕಿ ಭಜನಾ ಮಂಡಳಿಗೆ ಹಾಗೂ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಳಸ ಹಸ್ತಾಂತರಿಸಲಾಯಿತು.

ಗೌರವಾರ್ಪಣೆ:
ಭಜನಾ ತರಬೇತುದಾರರಾದ ಜನಾರ್ದನ ಸೂಡ್ಲು, ಸುಂದರ ಗೌಡ ಬಿಳಿನೆಲೆ, ಸದಾನಂದ ಅಚಾರ್ಯ ಕಾಣಿಯೂರು, ರಾಮಕೃಷ್ಣ ಹೊಸಮನೆ, ಯೋಗಿತ ವೈ ಕೊಯಿಲ, ಚಂದ್ರಶೇಖರ ನಾಯ್ಕ ಹಿರೆಬಂಡಾಡಿ, ಚಾರ್ವಾಕ ಸಿಂಗಾರಿ ಮೇಳದ ರಕ್ಷಿತ್ ಕುದ್ಮಾರು, ಧಾರ್ಮಿಕ ಶಿಕ್ಷಕಿ ರಕ್ಷಿತಾ ಬರಮೇಲು ಅವರನ್ನು ಗೌರವಿಸಲಾಯಿತು. ಮಧುರಾ ಪಲ್ಲಡ್ಕ, ದಿವ್ಯಾ ಚೇತನ್ ಆನೆಗುಂಡಿ ಅವರು ಗೌರವ ಸ್ವೀಕರಿಸಿದವರನ್ನು ಪರಿಚಯಿಸಿದರು. ಕಾರ್ಯಕ್ರಮದ ವಿವಿಧ ಪ್ರಾಯೋಜಕರನ್ನು ಗುರುತಿಸಲಾಯಿತು. ಭಜನಾ ತಂಡದ ಪ್ರಮುಖರಿಗೆ ಗೌರವಾರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here