ಉಪ್ಪಿನಂಗಡಿ: ಸಬ್ ಮೆರೀನ್‌ನಲ್ಲಿ ಕೆಲಸ ತೆಗಿಸಿಕೊಡುವುದಾಗಿ ನಂಬಿಸಿ ಅದಕ್ಕಾಗಿ 3 ಲಕ್ಷ ರೂಪಾಯಿ ಖರ್ಚಾಗುವುದಾಗಿ ತಿಳಿಸಿ ಹಂತ ಹಂತವಾಗಿ 2.10 ಲಕ್ಷ ರೂಪಾಯಿ ಹಣ ಪಡೆದು ಬಳಿಕ ಕೆಲಸವನ್ನೂ ಒದಗಿಸದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿರುವ ಕೃತ್ಯಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕಳೆಂಜ ಮನೆ ನಿವಾಸಿ, ಪ್ರಸಕ್ತ ಮೆರೈನ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿಕೊಂಡಿರುವ ಭವಿತ್ ಕೆ.ಎನ್. ಎಂಬವರು ವಂಚನೆಗೆ ಒಳಗಾದವರಾಗಿದ್ದು, ತನಗೆ ಇನ್ಸ್ಟ್ರಾಗ್ರಾಮ್ ಮೂಲಕ ಪರಿಚಯವಾದ ಕೋಲಾರದ ಕೆಂಬೋಡಿ ಅಂಚೆ ನಿವಾಸಿ ಪ್ರಜ್ವಲ್ (29) ವಂಚಿಸಿರುವುದಾಗಿ ದೂರು ನೀಡಿದ್ದಾರೆ. ಆರೋಪಿ ಪ್ರಜ್ವಲ್ ಕಳೆದ ಜೂನ್ 5 ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮೆರೈನ್‌ನಲ್ಲಿ ಕೆಲಸ ಸಿಗಬೇಕಾದರೆ 3 ಲಕ್ಷ ಖರ್ಚು ಇರುವುದೆಂದು ತಿಳಿಸಿದ್ದು, ಅದರಂತೆ ಆರೋಪಿಯ ಮೊಬೈಲ್ ಸಂಖ್ಯೆ 9686853417 ಕ್ಕೆ ಗೂಗಲ್ ಪೇ ಮೂಲಕ ವಿವಿಧ ದಿನಗಳಲ್ಲಿ ವಿವಿಧ ಕಂತುಗಳಲ್ಲಿ ಒಟ್ಟು 2,10,000 ರೂಪಾಯಿ ಹಣವನ್ನು ಪಾವತಿಸಿರುತ್ತೇನೆ. ಬಳಿಕ ಆರೋಪಿಯು ಕೆಲಸ ಮಾಡಿಕೊಡಲು ಆಗುವುದಿಲ್ಲ. ನೀನು ಕೊಟ್ಟ ಹಣವನ್ನು 10 ದಿನಗಳ ಒಳಗಾಗಿ ಹಿಂದಿರುಗಿಸುತ್ತೇನೆಂದು ಹೇಳಿದಾತ ತಿಂಗಳು ಹಲವು ಕಳೆದರೂ ಹಣ ನೀಡದೆ ವಂಚಿಸಿರುತ್ತಾನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.