31ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ-ಕಂಬಳ ಕೂಟ ಉದ್ಘಾಟಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್-ಕಂಬಳದ ಸಂಭ್ರಮದಲ್ಲಿ ಭಾಗಿಯಾದ ಸಾವಿರಾರು ಕಂಬಳಾಭಿಮಾನಿಗಳು

0

ಪುತ್ತೂರು:ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಇತಿಹಾಸ ಪ್ರಸಿದ್ಧ 31ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನೆಯು ಜ.27ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಿತು.


ಇಡೀ ರಾಜ್ಯಕ್ಕೆ ಮಾದರಿ ಕಂಬಳ-ಕೇಶವ ಪ್ರಸಾದ ಮುಳಿಯ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು 31ನೇ ವರ್ಷದ ಸಂಭ್ರಮದ ಕಂಬಳಕ್ಕೆ ಚಾಲನೆ ನೀಡಿದರು.ಬಳಿಕ ಅವರು ಮಾತನಾಡಿ, ರಾಜ್ಯದಲ್ಲಿ ಹೆಸರುವಾಸಿಯಾದ ಕಂಬಳವೆಂದರೆ ಅದು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವಾಗಿದೆ.ಇಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ಎಲ್ಲರ ಸಹಕಾರದಿಂದ ಕಂಬಳವನ್ನು ಅದ್ದೂರಿಯಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಹೇಳಿದರು.ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈಗಾಗಲೇ ರಾಜ್ಯ ರಾಜಧಾನಿಯಲ್ಲಿಯೂ ಕಂಬಳವು ಅದ್ದೂರಿಯಾಗಿ ನಡೆಯುವ ಮೂಲಕ ಕಂಬಳ ವಿಶ್ವವ್ಯಾಪಿಯಾಗಿ ಹೆಸರುವಾಸಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಪುತ್ತೂರಿನ ಕಂಬಳಕ್ಕೆ ವಿಶಿಷ್ಟ ಹೆಸರಿದೆ-ಸವಣೂರು ಸೀತಾರಾಮ ರೈ:
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ `ಸಹಕಾರ ರತ್ನ’ ಕೆ.ಸೀತಾರಾಮ ರೈ ಮಾತನಾಡಿ ಪುತ್ತೂರಿನ ಕಂಬಳಕ್ಕೆ ವಿಶಿಷ್ಟ ಹೆಸರಿದೆ,ದಿವಂಗತರಾಗಿರುವ ಜಯಂತ ಕುಮಾರ್ ರೈ ಹಾಗೂ ಮುತ್ತಪ್ಪ ರೈ ಅವರು ಕೋಟಿ ಚೆನ್ನಯ ಕಂಬಳವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು ಪ್ರಸ್ತುತ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಇದು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.


ಜಾತಿ ಮತ ಭಾಷೆ ಮೀರಿ ನಡೆಯುವ ಕ್ರೀಡೆ-ಪ್ರಕಾಶ್ ಮೊಂತೆರೋ:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ|ಫಾ|ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ ಧರ್ಮ ಭಾಷೆ ನಂಬಿಕೆ ಒಟ್ಟಾಗಿ ನಡೆಸುವ ಕಂಬಳ 30 ವರ್ಷಗಳ ಕಾಲದಿಂದ ನಿರಂತರವಾಗಿ ಬಹಳಷ್ಟು ಪರಿಶ್ರಮ ಮತ್ತು ಉತ್ತಮ ಮನಸ್ಸಿನ ಮೂಲಕ ಸಾಧ್ಯವಾಗಿದೆ.ಮುಂದೆಯೂ ಪುತ್ತೂರು ಕೋಟಿ ಚೆನ್ನಯ ಕಂಬಳವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.ಅತ್ಯಂತ ಖುಷಿ ನೀಡುವ ಆಟವೆಂದರೆ ಅದು ಕರಾವಳಿ ಜಿಲ್ಲೆಯ ಕಂಬಳ ಎನ್ನುವುದು ಇತಿಹಾಸ ಪ್ರಸಿದ್ಧ ಜಾತಿ ಮತ ಭಾಷೆಗಳನ್ನು ಮೀರಿ ಸೌಹಾರ್ದದಿಂದ ಎಲ್ಲರೂ ಆಚರಿಸಿಕೊಂಡು ಬರುವ ಕಂಬಳವು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.


ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ-ನವೀನ್ ಕುಮಾರ್ ಭಂಡಾರಿ:
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಂಬಳಕ್ಕೆ ಮಹತ್ವವಿದೆ.ಇದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.ಪುತ್ತೂರಿನಲ್ಲಿ ನಡೆಯುವ ಕಂಬಳ ನಿರಂತರ ನಡೆಯಲಿ ಎಂದು ಹಾರೈಸಿದರು.


ಡಾ.ಸುರೇಶ್ ಪುತ್ತೂರಾಯ, ರೆ|ವಿಜಯ ಹಾರ್ವಿನ್‌ರವರಿಗೆ ಸನ್ಮಾನ:
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಳದಲ್ಲಿ ಸಾರ್ವಜನಿಕರಿಗಾಗಿ ಮಾಸಿಕ ಉಚಿತ ವೈದ್ಯಕೀಯ ಶಿಬಿರ ನಡೆಸಿ ಈ ಮೂಲಕ ಮಧುಮೇಹ ತಪಾಸಣೆಯಲ್ಲಿ ಅದ್ವಿತೀಯ ಸೇವೆಯೊಂದಿಗೆ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿರುವುದಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪುತ್ತೂರು ಮಹಾವೀರ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್‌ರವರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.


ಸನ್ಮಾನಿತ ಡಾ.ಸುರೇಶ್ ಪುತ್ತೂರಾಯರವರು ಮಾತನಾಡಿ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ ಹಲವಾರು ವರ್ಷಗಳಿಂದ ನಿರಂತರವಾಗಿ ಶಾಂತಿ ಸೌಹಾರ್ದತೆಯೊಂದಿಗೆ ಎಲ್ಲ ವರ್ಗದ ಜನರ ಕಂಬಳವಾಗಿ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ.ಈ ಮಾದರಿ ಕಂಬಳ ಕ್ರೀಡೆಯು ನಿರಂತರ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಆಶಿಸಿದರು.ಗ್ರಾಮೀಣ ಪ್ರದೇಶದಲ್ಲಿ ನೀಡಿದ ವೈದ್ಯಕೀಯ ಸೇವೆ, ಆರೋಗ್ಯ ಜಾಗೃತಿಗಾಗಿ ತನಗೆ ಈ ಪ್ರಶಸ್ತಿ ದೊರಕಿದ್ದು ನನ್ನನ್ನು ಗುರುತಿಸಿ ಕಂಬಳ ಸಮಿತಿಯವರು ಅಭಿನಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ ಶುಭ ಹಾರೈಸಿದರು.
ರೆ|ವಿಜಯ ಹಾರ್ವಿನ್‌ರವರು ಮಾತನಾಡಿ ಕ್ರೀಡೆಯನ್ನು ಕ್ರೀಡೆಯಾಗಿ ನೋಡಬೇಕು ಎಲ್ಲಾ ಜಾತಿ ಪಂಗಡದವರು ಸೌಹಾರ್ದತೆಯಾಗಿ ಈ ಕ್ರೀಡೆಯನ್ನು ಬೆಳೆಸಿಕೊಂಡು ಬರಬೇಕು ಎಂದರು.


ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ-ಎಲ್.ಟಿ ಅಬ್ದುಲ್ ರಝಾಕ್:
ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಪುತ್ತೂರು ಕೋಟಿ ಚೆನ್ನಯ ಜೋಡು ಕಂಬಳವು ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದ್ದು ಈ ಕಂಬಳವು ನಿರಂತರವಾಗಿ ಮುನ್ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ಕಡಬ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ .ಬಿ.,ಕೆಯ್ಯೂರು ಶ್ರೀಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಬೈಲುಗುತ್ತು ಮಾರಪ್ಪ ಶೆಟ್ಟಿ, ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್, ಪರ್ಪುಂಜ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕ ಭಾಗ್ಯೇಶ್ ರೈ, ಉದ್ಯಮಿ ಉಮೇಶ್ ನಾಡಾಜೆ, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮುಹಮ್ಮದಾಲಿ, ರಮಾನಾಥ ವಿಟ್ಲ, ಧರ್ಮಪ್ಪ ಗೌಡ,ಕೆದಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಕೆ.ಜಯರಾಮ ರೈ, ಸಂಕಪ್ಪ ಶೆಟ್ಟಿ, ಉದ್ಯಮಿ ಸೇಡಿಯಾಪು ಕೋಕೊನೆಟ್ ಇಂಡಸ್ಟ್ರಿ ಮಾಲಕ ಡೆನ್ನಿಸ್ ಮಸ್ಕರೇನ್ಹಸ್, ಕೋಡಿಂಬಾಡಿ ಜುಮ್ಮಾ ಮಸೀದಿಯ ಅಧ್ಯಕ್ಷ, ಉದ್ಯಮಿ ಉಮ್ಮರ್ ಹಾಜಿ ಕೋಡಿಂಬಾಡಿ, ನ್ಯಾಯವಾದಿ ನೋಟರಿ ಫಝುಲ್ ರಹೀಮ್, ಪ್ರಕಾಶ್ ಕುಮಾರ್ ರೈ, ಪ್ರವೀಣ್ ಶೇಟ್, ಸೀತಾರಾಮ ಶೆಟ್ಟಿ, ಸಂಪ್ಯ ಅಕ್ಷಯ್ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಶ್ರೀಕಾಂತ್ ಪುಣಚ, ಪುತ್ತೂರು ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ. ಕಂಬಳ ಸಮಿತಿಯ ಉಪಾಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲು, ನಸೀಬ್ ಬೋರ್ವೆಲ್ ಮಾಲಕ ಅಬೂಬಕ್ಕರ್ ಮುಳಾರ್ ಮೊದಲಾದವರು ಉಪಸ್ಥಿತರಿದ್ದರು.ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಸಂಚಾಲಕ ವಸಂತ ಕುಮಾರ್ ರೈ ದುಗ್ಗಳ ವಂದಿಸಿದರು.ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಶಶಿಕಿರಣ್ ರೈ ನೂಜಿಬೈಲು, ಮಂಜುನಾಥ ಗೌಡ ತೆಂಕಿಲ, ಧೀರಜ್ ಗೌಡ, ಶರತ್ ಕೇಪುಳು, ಪ್ರತೀಕ್ ಚಿಕ್ಕಪುತ್ತೂರು, ಚಂದ್ರಶೇಖರ ಶೆಟ್ಟಿ ಪಾಲ್ತಾಡು, ಉಮೇಶ್ ಕರ್ಕೇರ ಕಾರ್ಯಕ್ರಮ ನಿರ್ವಹಿಸಿದರು.ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ.,ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರುಗಳಾದ ರೋಷನ್ ರೈ ಬನ್ನೂರು,ಸುದರ್ಶನ್ ನಾಕ್ ಕಂಪ, ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ರಂಜಿತ್ ಬಂಗೇರ, ವಿಶ್ವಜಿತ್ ಅಮ್ಮುಂಜ, ವಿನಯ ಕುಮಾರ ಸವಣೂರು, ಹಸೈನಾರ್ ಬನಾರಿ, ಖಾದರ್ ಪೊಳ್ಯ ಉಪಸ್ಥಿತರಿದ್ದರು.

177 ಜೊತೆ ಕೋಣಗಳು
ಈ ಬಾರಿಯ ಕಂಬಳದಲ್ಲಿ 177 ಜೊತೆ ಕೋಣಗಳು ಭಾಗವಹಿಸಿವೆ.ಕನೆಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ನೇಗಿಲು ಕಿರಿಯ ಸಹಿತ ಒಟ್ಟು 177 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿವೆ ಎಂದು ಕಂಬಳ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ತಿಳಿಸಿದ್ದಾರೆ.ಕಳೆದ ಬಾರಿಗಿಂತ ಈ ಬಾರಿ ಕೋಣಗಳ ಸಂಖ್ಯೆ ಹೆಚ್ಚಾಗಿದೆ.

ಕಂಬಳ ನೋಡಲು ಬಂದ ಅಮೇರಿಕಾದ ಟಾಮ್
ಪುತ್ತೂರು ಕಂಬಳವು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಪುತ್ತೂರು ಕಂಬಳದಲ್ಲಿ ವೀಕ್ಷಕರಾಗಿ ಭಾಗವಹಿಸುತ್ತಿರುವ ವಿದೇಶೀಯರೇ ಸಾಕ್ಷಿ. ಈ ಬಾರಿಯೂ ಹಲವು ವಿದೇಶೀ ಕಂಬಳಾಭಿಮಾನಿಗಳು ಪುತ್ತೂರು ಕಂಬಳಕ್ಕೆ ಭೇಟಿ ನೀಡಿದ್ದು, ಈ ಪೈಕಿ ಯುಎಸ್‌ಎನ ಫ್ಲೊರಿಡಾ ಮೂಲದ ಟಾಮ್ ಎನ್ನುವ ಕಂಬಳಾಭಿಮಾನಿ ಸುದ್ದಿಯ ಜೊತೆಗೆ ಮಾತಿಗೆ ಸಿಕ್ಕಿದ್ದಾರೆ. ತಮ್ಮ ಭಾರತ ಯಾತ್ರೆ, ಕಂಬಳದ ಬಗ್ಗೆ ತಿಳಿದುಕೊಂಡ ಬಗೆ, ಭಾರತದ ಬೆಳವಣಿಗೆ, ಇಷ್ಟಪಟ್ಟ ಆಹಾರದ ಬಗ್ಗೆ ಸುದ್ದಿಯ ಜೊತೆಗೆ ಅನಿಸಿಕೆಯನ್ನು ಹಂಚಿಕೊಂಡರು. ಸುದ್ದಿ ಚಾನೆಲ್ ಮುಖ್ಯಸ್ಥರಾದ ದಾಮೋದರ್ ದೊಂಡೋಲೆಯವರು ಟಾಮ್ ಅವರ ಜೊತೆಗೆ ನಡೆಸಿದ ಕಿರು ಸಂದರ್ಶನವೂ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಕ್ಷಣೆ ಮಾಡಬಹುದು.

ಸುದ್ದಿಯ ನಿರೂಪಕರಾದ ಎಡ್ತೂರು ರಾಜೀವ ಶೆಟ್ಟಿ..!!
31ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ವಿಜೃಂಭಣೆಯಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುತ್ತಿದೆ. ಹತ್ತು ಹಲವು ವಿಶೇಷತೆಗಳೊಂದಿಗೆ ನಡೆಯುವ ಕಂಬಳ ಕೂಟದಲ್ಲಿನ ವೈಶಿಷ್ಟ್ಯಗಳ ಬಗ್ಗೆ ಸುದ್ದಿ’ಯು ನಿರಂತರ ನೇರಪ್ರಸಾರದ ಜೊತೆಗೆ ವಿಶೇಷ ವರದಿಗಳನ್ನು ಕೂಡ ಮಾಡುತ್ತಿದೆ. ಈ ನಡುವೆ ಕಂಬಳದ ಖ್ಯಾತ ತೀರ್ಪುಗಾರರು ಜೊತೆಗೆ ಕಾಂತಾರ ಸಿನಿಮಾ ಖ್ಯಾತಿಯ ನಟ ರಾಜೀವ ಶೆಟ್ಟಿ ಎಡ್ತೂರು ಅವರು ಸುದ್ದಿ‘ಯ ನಿರೂಪಕರಾಗಿ ಗಮನ ಸೆಳೆದರು. ಕಂಬಳ ಕ್ಷೇತ್ರದ ತೀರ್ಪುಗಾರರಾದ ಸತೀಶ್ ಹೊಸ್ಮಾರು, ರವೀಂದ್ರ ಕುಮಾರ್ ಕುಕ್ಕುಂದೂರು, ಹಿರಿಯ ತೀರ್ಪುಗಾರ ನಗ್ರಿ ಸಂಕಪ್ಪಣ್ಣ, ಈದು ಪಡ್ಡ್ಯಾರಮನೆ ಅಜಿತ್ ಕುಮಾರ್ ಜೈನ್ ಮೊದಲಾದವರನ್ನು ರಾಜೀವ ಶೆಟ್ಟಿಯವರು ಸಂದರ್ಶಿಸಿ ಅವರ ಅನುಭವಗಳನ್ನು ತಿಳಿಸಿಕೊಟ್ಟರು. ಛಾಯಾಗ್ರಹಣದಲ್ಲಿ ಹಿರಿಯ ಕ್ಯಾಮರಾಮ್ಯಾನ್ ಸುಧಾಕರ್ ಪಡೀಲ್ ಸಹಕರಿಸಿದರು. ಈ ವೀಡಿಯೋ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಕ್ಷಣೆ ಮಾಡಬಹುದು.

ವಿಜಯ ವೇದಿಕೆ ನಿರ್ಮಾಣ ಪೇಟೆಯಲ್ಲಿ ವಿದ್ಯುತ್ ದೀಪಾಲಂಕಾರ
ವರ್ಷದಿಂದ ವರ್ಷಕ್ಕೆ ಒಂದೊಂದು ಹೊಸತನದೊಂದಿಗೆ ಅದ್ದೂರಿಯಾಗಿ ನಡೆಯುತ್ತಿರುವ ಕೋಟಿ ಚೆನ್ನಯ ಕಂಬಳ ಕೂಟದಲ್ಲಿ ಈ ಬಾರಿ ಪುತ್ತೂರಿನ ಪೇಟೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.ಇದರ ಜೊತೆಗೆ ಕಂಬಳದ ಕೋಣದ ಓಟಗಾರರಿಗೆ, ಕೋಣದ ಮಾಲಕರಿಗೆ ಗೌರವಿಸುವ ವಿಶೇಷ `ವಿಜಯ ವೇದಿಕೆ’ಯನ್ನು ಕಂಬಳ ಕೂಟದ ವೇದಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಕಂಬಳ ವೀಕ್ಷಣೆಗೆ ಆಗಮಿಸಿದ್ದಾರೆ.ದೇಶದ ವಿವಿಧ ಪ್ರದೇಶಗಳಿಂದ ಮತ್ತು ವಿದೇಶದಿಂದಲೂ ಕಂಬಳ ವೀಕ್ಷಣೆಗೆ ಹಲವರು ಆಗಮಿಸಿದ್ದಾರೆ.

LEAVE A REPLY

Please enter your comment!
Please enter your name here