ಕೆಮ್ಮಾಯಿ: ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಅಡಿಕೆ ಬೆಳೆಗಾರರಿಗೆ ಪುತ್ತೂರು ಮುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಘದ ಮೂಲಕ ಅಡಿಕೆ ಕೊಯ್ಲು ತಂಡದ ವ್ಯವಸ್ಥೆ ಮಾಡಲಾಗಿದೆ. ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮಾಡಲು ವಿಶೇಷ ತರಬೇತಿ ಪಡೆದ ತಂಡ ಈಗಾಗಲೇ ಕೃಷಿಕರಿಗೆ ಸೇವೆ ಒದಗಿಸಲು ತಯಾರಾಗಿದೆ. ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪೆನಿಯಲ್ಲಿ ವಿಶೇಷ ತರಬೇತಿ ಪಡೆಯಲಾಗಿದ್ದು ಅಧ್ಯಕ್ಷ ರಾಮಕಿಶೋರ ಮಂಚಿ ಹಾಗೂ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆರವರ ಪ್ರೋತ್ಸಾಹದಿಂದ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಯನಿರ್ವಹಣೆ ಹೇಗೆ?: ಫೈಬರ್ ದೋಟಿ ತಂಡದಲ್ಲಿ ಇಬ್ಬರು ಕಾರ್ಮಿಕರು ಇರುತ್ತಾರೆ. ಒಬ್ಬರು ಅಡಿಕೆ ಕೊಯ್ಯಲು ಹಾಗೂ ಇನ್ನೊಬ್ಬರು ಸಹಾಯಕ. ಸಹಾಯಕರು ಅಡಿಕೆ ಮರದಿಂದ ಕೊಯ್ದು ಕೆಳಗೆ ಬೀಳುವ ಅಡಿಕೆ ಗೊನೆಯನ್ನು ಕ್ಯಾಚರ್ ಬಲೆ ಮೂಲಕ ಸಂಗ್ರಹ ಮಾಡುತ್ತಾರೆ. 80 ಫೀಟ್ ಅಡಿಕೆಯ ಮರಗಳ ಕೊಯಿಲು ಮಾಡುವಂತಹ ಕೌಶಲ್ಯವನ್ನು ಈ ತಂಡ ಹೊಂದಿದೆ. ಈಗಾಗಲೇ 2 ತಂಡ ತಯಾರಾಗಿದ್ದು ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೆಚ್ಚು ತಂಡ ರಚನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಒಬ್ಬ ಕಾರ್ಮಿಕ ದೋಟಿ ಬಳಸಿ ದಿನಕ್ಕೆ 400 ಗೊನೆ ಕೊಯ್ಯಬಲ್ಲವರಾಗಿದ್ದು ಕ್ಯಾಚರ್ ಬಲೆ ಮೂಲಕ ಅಡಿಕೆ ಗೊನೆಯನ್ನು ಸಂಗ್ರಹ ಮಾಡುವುದರಿಂದ ಅಡಿಕೆ ಹೆಕ್ಕುವ ಕೆಲಸವೂ ಕಡಿಮೆ ಇರುತ್ತದೆ. ಕೊಯ್ಲಿನ ಹಂತ ಮುಗಿದ ನಂತರ ಅಡಿಕೆಗೆ ಮದ್ದು ಸಿಂಪಡೆಣೆಗೂ ಇವರು ಸಿದ್ಧರಾಗಿದ್ದಾರೆ.
ಕೃಷಿ ಕಾರ್ಮಿಕರ ಕೊರತೆಯನ್ನು ಮನಗಂಡು ಧರಿತ್ರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ಗೌಡ ಪೋಳ್ಯರವರ ಮುಂದಾಳತ್ವದಲ್ಲಿ ರೈತರಿಗೆ ಸೇವೆ ಒದಗಿಸಲು ತಂಡ ತಯಾರಿದೆ. ಕಾರ್ಮಿಕರನ್ನು ಬೇಕಾದ ಸ್ಥಳಕ್ಕೆ ಕಳುಹಿಸಿ ಕೊಡುವ ಜವಾಬ್ದಾರಿಯನ್ನು ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಿರ್ವಹಿಸುತ್ತಾರೆ. ಕಚೇರಿ ಸಿಬ್ಬಂದಿ ಕಾವ್ಯ ಲೆಕ್ಕಪತ್ರ ನಿರ್ವಹಣೆ ಮಾಡುತ್ತಾರೆ.
ಅಡಿಕೆ ಕೊಯ್ಲು ಮಾಡಲು ರೈತರು 7349508621, 9611309794 ನಂಬರಿಗೆ ಕರೆ ಮಾಡಿ ಬುಕ್ಕಿಂಗ್ ಮಾಡಬಹುದು. ಅಡಿಕೆ ಕೊಯ್ಯುಲು ಕೃಷಿ ಕಾರ್ಮಿಕರ ಕೊರತೆ ವ್ಯಾಪಕವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಧರಿತ್ರಿ ಸೌಹಾರ್ದ ಸಹಕಾರಿಯ ಈ ತಂಡ ಕೃಷಿಕರಲ್ಲಿ ಸಂತಸ ಮೂಡಿಸಿದೆ.