ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಶಿಬಿರದ ರೂವಾರಿ ಡಾ.ಸುರೇಶ್ ಪುತ್ತೂರಾಯರವರಿಗೆ ಅಭಿನಂದನೆ
ಪುತ್ತೂರು: ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ 23ನೇ ತಿಂಗಳ ಶಿಬಿರವು ಫೆ.4ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ರೈ ನುಳಿಯಾಲು ಮಾತನಾಡಿ, ಕಳೆದ 22 ತಿಂಗಳುಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಶಿಬಿರವು ವೈದ್ಯಕೀಯ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದೆ. ಶಿಬಿರ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವೈದ್ಯಕೀಯ ಶಿಬಿರದ ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿಕೊಳ್ಳಬೇಕು ಎಂದು ಅವರು ಶಿಬಿರವು ನಿರಂತರ ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಶಿಬಿರ ನಡೆಸುವ ಯೋಜನೆಯ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಶಿಬಿರವು ಒಬ್ಬನಿಂದ ನಡೆಯುವಂತದಲ್ಲ. ಇದರಲ್ಲಿ ವ್ಯವಸ್ಥಾಪನಾ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ನವಚೇತನ ಯುವಕ ಮಂಡಲ, ಸತ್ಯನಾರಾಯಣ ಪೂಜಾ ಸಮಿತಿ, ಐಕ್ಯಕಲಾ ಸೇವಾಟ್ರಸ್ಟ್, ದಾನಿಗಳು, ವಿವಿಧ ವಿಭಾಗದ ವೈದ್ಯರು, ವಿವಿಧ ಔಷಧಿ ಕಂಪನಿಗಳು, ಲ್ಯಾಬೋರೇಟರಿಗಳು, ಸ್ವಯಂ ಸೇವಕರಾಗಿ ದುಡಿದ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದ್ದು ನಾನು ಪಡೆದ ಪ್ರಶಸ್ತಿಯ ಶಿಬಿರಕ್ಕೆ ದೊರೆತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಶಿಬಿರದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಸಂದ ಗೌರವವಾಗಿದೆ ಎಂದರು.
ಅಭಿನಂದನೆ:
ದೇವಸ್ಥಾನದಲ್ಲಿ ಶಿಬಿರವನ್ನು ಪ್ರಾರಂಭಿಸಿ, ಯಶಸ್ವೀ 22 ಶಿಬಿರಗಳ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಒರಿಸ್ಸಾದ ಭವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ‘ಡಯಾಬಿಟೀಸ್ ಎವೆರ್‌ನೆಸ್ ಇನಿಷೇಟಿವ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಬಿರದ ರೂವಾರಿಯು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಜಯಕುಮಾರ್ ನಾಯರ್, ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ., ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ, ಡಾ.ಸಾಯಿಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಕಲಾ ನಿರಂಜನ ರೈ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉದಯಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು.
ಪ್ರಥಮ ಚಿಕಿತ್ಸೆಯ ಮಾಹಿತಿ:
ಈ ಬಾರಿ ಶಿಬಿರದಲ್ಲಿ ವಿಶೇಷವಾಗಿ ಫಾರ್ಮ್ ಕಂಪನಿಯಿಂದ ಪ್ರಥಮ ಚಿಕಿತ್ಸೆ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಶಿಬಿರದಲ್ಲಿ ತಜ್ಞ ವೈದ್ಯ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ಡಾ. ಸಚಿನ್ ಶಂಕರ್ ಹಾರಕೆರೆ, ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್, ಆಯುರ್ವೇದ ತಜ್ಞರಾದ ಡಾ.ವೇಣುಗೋಪಾಲ್, ಡಾ. ಸಾಯಿ ಪ್ರಕಾಶ್, ಡಾ.ಗ್ರೀಷ್ಮಾ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಟ್ಟರು. ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ ಶ್ವಾಸಕೋಶ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ , ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳ ಜೊತೆಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಪುತ್ತಿಲ ಪರಿವಾರ ಆರ್ಯಾಪು ಘಟಕ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ ಹಾಗೂ ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.