ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಅಶೋಕ್ ರೈ-ಎಸ್ ಪಿ ಕಚೇರಿ ಸದ್ಯಕ್ಕೆ ಪುತ್ತೂರಿಗೆ ಸ್ಥಳಾಂತರವಿಲ್ಲ; ಗೃಹ ಸಚಿವರ ಸ್ಪಷ್ಟನೆ

0

ಪುತ್ತೂರು:ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಪೊಲೀಸ್ ಅಧಿಕ್ಷಕ(ಎಸ್.ಪಿ.)ರ ಕಚೇರಿಯನ್ನು ಸದ್ಯ ಪುತ್ತೂರಿಗೆ ಸ್ಥಳಾಂತರ ಮಾಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ.ಆದರೆ ಡಿಎಆರ್‌ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವ ಕುರಿತು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ|ಎಚ್.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.


ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಸದನದಲ್ಲಿ ಸರಕಾರವನ್ನು ಆಗ್ರಹಿಸಿದರು.ಮಂಗಳೂರುನಲ್ಲಿ ಈಗಾಗಲೇ ಪೊಲೀಸ್ ಕಮಿಷನರೇಟ್ ಕಚೇರಿ ಇರುವುದರಿಂದ ಎಸ್‌ಪಿ ಕಚೇರಿಯನ್ನು ಮಂಗಳೂರುನಿಂದ ಪುತ್ತೂರಿಗೆ ಸ್ಥಳಾಂತರಿಸಬೇಕು.ಈ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಸರಕಾರವನ್ನು ಆಗ್ರಹಿಸಿದರು.ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತುಕಡಬ ತಾಲೂಕಿನ ಸಾರ್ವಜನಿಕರು ತಮ್ಮ ಅಗತ್ಯ ಕೆಲಸ ಕಾರ್ಯಗಳಿಗಾಗಿ ಎಸ್‌ಪಿಯವರ ಭೇಟಿಯಾಗಬೇಕಾದರೆ ದೂರದ ಮಂಗಳೂರಿಗೆ ಹೋಗಬೇಕಾಗಿದೆ.ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತದೆ.ಸುಳ್ಯದಿಂದ ಅಥವಾ ಕಡಬದಿಂದ ಮಂಗಳೂರಿಗೆ ತೆರಳಲು ತುಂಬಾ ದೂರವಾಗುತ್ತದೆ.ಜೊತೆಗೆ ಎಸ್‌ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರವಾದರೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಅನುಕೂಲಕ ಎಂದು ಶಾಸಕರು ಸರಕಾರದ ಗಮನ ಸೆಳೆದರು.


ಈ ಕುರಿತು ಉತ್ತರ ನೀಡಿದ ಗೃಹ ಸಚಿವ ಡಾ|ಎಚ್.ಜಿ.ಪರಮೇಶ್ವರ್, ಮಂಗಳೂರು ಕೆಂದ್ರೀಕೃತವಾಗಿರುವ ಜಿಲ್ಲಾ ಎಸ್‌ಪಿ ಕಚೇರಿಯನ್ನು ಸದ್ಯಕ್ಕೆ ಪುತ್ತೂರಿಗೆ ಸ್ಥಳಾಂತರ ಮಾಡುವುದಿಲ್ಲ.ಜಿಲ್ಲಾಽಕಾರಿ ಕಚೇರಿ, ಜಿಪಂ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಕಚೇರಿಗಳು ಮಂಗಳೂರಿನಲ್ಲೇ ಇರುವಾಗ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯನ್ನು ಮಾತ್ರ ಪುತ್ತೂರಿಗೆ ಸ್ಥಳಾಂತರ ಮಾಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ.ಜಿಲ್ಲಾಽಕಾರಿಗಳ ಕಚೇರಿ ಮತ್ತು ಜಿಪಂ ಕಚೇರಿಗೆ ಸಾರ್ವಜನಿಕರು ಮಂಗಳೂರಿಗೆ ಬರುವುದರಿಂದ ಎಸ್‌ಪಿ ಕಚೇರಿಯೂ ಅಲ್ಲೇ ಇರುವುದು ಸೂಕ್ತವಾಗುತ್ತದೆ. ಮುಂದೆ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಎಂದು ಸಭೆಯಲ್ಲಿ ತಿಳಿಸಿದರಲ್ಲದೆ,ಪುತ್ತೂರಿನಲ್ಲಿ ಸಹಾಯಕ ಪೊಲೀಸ್ ಅಽಕ್ಷಕರ ಕಚೇರಿ ಈಗಾಗಲೇ ಕಾರ್ಯಾಚರಿಸುತ್ತಿದ್ದು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಾವು ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದರು.


ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವ ವಿಚಾರ ಚರ್ಚೆಯಾಗಿತ್ತು.ಆಗಿನ ಶಾಸಕ ಸಂಜೀವ ಮಠಂದೂರು ಅವರು ಈ ಕುರಿತು ಸರಕಾರವನ್ನು ಆಗ್ರಹಿಸಿದ್ದರು.ಆದರೆ ಸರಕಾರ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.ಇದೀಗ ಹಾಲಿ ಶಾಸಕ ಅಶೋಕ್ ಕುಮಾರ್ ರೈಯವರು ಸದನದಲ್ಲಿ ವಿಚಾರ ಪ್ರಸ್ತಾಪಿಸಿ, ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಡಿಎಆರ್ ಪುತ್ತೂರಿಗೆ ಸ್ಥಳಾಂತರಕ್ಕೆ ಕ್ರಮ
ಜಿಲ್ಲಾ ಸಶಸ ಮೀಸಲು ಪಡೆ-ಡಿಎಆರ್(ಡಿಸ್ಟ್ರಿಕ್ಟ್ ಆರ್ಮ್ ರಿಸರ್ವ್ ಪೊಲೀಸ್) ವ್ಯವಸ್ಥೆಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ತುಂಬಾ ಪ್ರಯೋಜನವಾಗಲಿದೆ.ಪುತ್ತೂರು ಹಾಗೂ ಇತರೆ ತಾಲೂಕುಗಳಲ್ಲಿ ಅಶಾಂತಿಯ ವಾತಾವರಣ ಕಂಡು ಬಂದಾಗ ಮಂಗಳೂರಿನಿಂದ ಡಿಎಆರ್ ಬರಬೇಕಾಗಿರುವುದರಿಂದ ಸುಮಾರು 2 ಗಂಟೆ ವಿಳಂಬವಾಗಲಿರುವುದರಿಂದ ಕ್ಷಿಪ್ರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಡಿಎಆರ್‌ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ|ಎಚ್.ಜಿ.ಪರಮೇಶ್ವರ್ ಅವರು ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here