ಪುತ್ತೂರು: ದ.ಕ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿರುವ ಅಡಿಕೆಯ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು ರಾಜ್ಯ ಸರಕಾರ ಮಧ್ಯ ಪ್ರವೇಶಿಸಿಸಿ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಫೆ.22ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2002-03ರಲ್ಲಿ ಎಸ್.ಎಂ ಕೃಷ್ಣ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಲೆ ಕುಸಿದಾಗ ಅವರು ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸಿ ಮಾರ್ಕೆಟ್ ಇಂಟರ‍್ಯಾಕ್ಚವಲ್ ಸ್ಕೀಂನ್ನು ಜಾರಿ ಮಾಡಿ ಅದರಿಂದ ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ಮಾಡುವ ಮೂಲಕ ಬೆಲೆಗಾರರನ್ನು ರಕ್ಷಿಸುವ ಕೆಲಸ ಮಾಡಿದೆ. ನಂತರ ಸಹಜವಾಗಿ ಧಾರಣೆ ಏರಿಕೆಯಾಗಿತ್ತು. ಇದರಿಂದಾಗಿ ಇತರ ಬೆಲೆ ಬೆಲೆಯುತ್ತಿದ್ದ ರೈತರು ಅಡಿಕೆ ಬೆಲೆಯಲಾರಂಭಿಸಿದ್ದು ಇಂದು 1,09,699 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜಿಲ್ಲೆಯ ಏಕೈಕ ಬೆಲೆ ಅಡಿಕೆಯಾಗಿದೆ. ಇದನ್ನೇ ನಂಬಿರುವ ರೈತ ಇತ್ತೀಚಿನ ದಿನಗಳಲ್ಲಿ ಧಾರಣೆ ಕುಸಿತದಿಂದಾಗಿ ರೈತ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಹೀಗಾಗಿ ತಕ್ಷಣಾ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರನ್ನು ರಕ್ಷಿಸಬೇಕು ಎಂದರು.
2019ರಲ್ಲಿ ರಾಜ್ಯದಲ್ಲಿ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀರುಳ್ಳಿ, ಕೊಬ್ಬರಿ, ತೊಗರಿ ಮೊದಲಾದ ಆಹಾರ ಬೆಳೆಗಳ ದರ ಕುಸಿದಾಗ ಅವರು ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಉಪ ಸಮಿತಿ ಮಾಡಿ ಕ್ಯಾಬಿನೆಟ್ ಮೂಲಕ ಎಲ್ಲಾ ಬೆಲೆಗಳಿಗೆ ಬೆಂಬಲ ಬೆಲೆ ನೀಡಿದ್ದಾರೆ. ಸರಕಾರ ಪ್ರತಿವರ್ಷ ಎಪಿಎಂಸಿಗಳಲ್ಲಿ ಶುಲ್ಕ ಸಂಗ್ರಹಿಸುತ್ತಿದೆ. ಆ ಶುಲ್ಕ ಕರ್ನಾಟಕದಲ್ಲಿ ಆವರ್ತನ ನಿಧಿಯ ಮೂಲಕ ರೈತರಿಗೆ ಸಲ್ಲಬೇಕು. ಆವರ್ತನ ನಿಧಿಯಿಂದ ರಾಜ್ಯ ಸರಕಾರ ತಕ್ಷಣ ಬೆಂಬಲ ಬೆಲೆ ನೀಡಿ ರೈತರನ್ನು ಅನಾಹುತದಿಂದ ಪಾರು ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಸವಲತ್ತು ತಡೆಹಿಡಿದ ರೈತ ವಿರೋಧಿ ಸರಕಾರ:
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಘೋಷಣೆ ಮಾಡಿದ ರೂ.3 ದಿಂದ ರೂ5 ಲಕ್ಷಕ್ಕೆ ಏರಿಕೆ ಮಾಡಿದ ಬಡ್ಡಿ ರಹಿತ ಅಲ್ಪಾವಧಿ ಸಾಲ, ರೂ.10 ಲಕ್ಷದಿಂದ ರೂ.15 ಲಕ್ಷಕ್ಕೆ ಏರಿಕೆ ಮಾಡಿದ ಶೇ.3 ಬಡ್ಡಿ ದರದ ಸಾಲವನ್ನು ಈ ತನಕ ರೈತರಿಗೆ ನೀಡಿಲ್ಲ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ನೀಡುತ್ತಿದ್ದ ರೂ.5 ಸಬ್ಸಿಡಿಯನ್ನು ರೂ.7ಕ್ಕೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೂ ಅದೂ ರೈತರಿಗೆ ಬಂದಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ನೀಡುತ್ತಿದ್ದ ರೂ.3000 ದಿಂದ 12,000ದ ರೈತ ವಿದ್ಯಾನಿಧಿ ಮತ್ತು ಕೇಂದ್ರ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ರೂ.4000 ಮೊತ್ತದ ಪಾಲನ್ನು ಸಿದ್ದರಾಮಯ್ಯ ಸರಕಾರ ತಡೆಹಿಡಿದಿದೆ. ರೈತರಿಗೆ ದೊರೆಯಬೇಕಾದ ಸವಲತ್ತುಗಳನ್ನು ತಡೆಹಿಡಿಯುವ ಕೆಲಸ ಮಾಡುತ್ತಿದ್ದು ಸಿದ್ದರಾಮಯ್ಯ ಸರಕಾರ ರೈತ ವಿರೋಧಿ ಸರಕಾರವಾಗಿದೆ. ರೈತರಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿದಾಗ ಮಾತ್ರ ಆ ಸರಕಾರ ರೈತ ಪರವಾಗಲಿದೆ. ಇದು ದ.ಕ ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಜಿಲ್ಲೆಯ ಶಾಸಕರು, ಸಂಸದರು ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಗಂಬೀರ ಚರ್ಚೆ ಮಾಡಿ ಕ್ಯಾಂಪ್ಕೋ ನೇತೃತ್ವದಲ್ಲಿ ನಿಯೋಗವು ಕೇಂದ್ರ ಕೃಷಿ ಹಾಗೂ ಸಹಕಾರ ಸಚಿವರ ಭೇಟಿಯಾಗಲಿದ್ದಾರೆ. ರಾಜ್ಯದಿಂದಲೂ ಈ ಕುರಿತು ಕೇಂದ್ರಕ್ಕೆ ಮನವಿ ಮಾಡಬೇಕು. ರಾಜ್ಯ ಸರಕಾರ ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರೈತರಿಗೆ ದೊರೆಯಬೇಕಾದ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಹಾಲಿಗೆ ಪ್ರೋತ್ಸಾಹ ಧನ, ಬಡ್ಡಿ ರಿಯಾಯಿತಿ ಸಾಲವನ್ನು ತಕ್ಷಣ ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕಳ್ಳಸಾಗಾಣೆ ಮೂಲಕ ಅಡಿಕೆ ಬರುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಡಿಕೆಗೆ ಕೇಂದ್ರ ಸರಕಾರ ಉತ್ಪಾದನೆ ವೆಚ್ಚವನ್ನು 251ರಿಂದ 351ಕ್ಕೆ ಏರಿಕೆ ಮಾಡಿದೆ. ಇದರ ಆದಾರದಲ್ಲಿ ಡಿಜಿಎಫ್‌ಟಿ ಆಮದು ಮತ್ತು ರಪ್ತು ಮಾಡುವ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಾರೆ. ಆಮದಿಗೆ ನಿಯಂತ್ರಿಸಲು ಉತ್ಪಾದನಾ ವೆಚ್ಚದ ಆದಾರದಲ್ಲಿ ಶೇ.110ರಷ್ಟು ಆಮದು ಆಗುವ ಅಡಿಕೆಗೆ ತೆರಿಗೆ ವಿಧಿಸಲಾಗುತ್ತಿದೆ. ಆಮದು ನಿಯಂತ್ರಿಸಲು ಕ್ಯಾಂಪ್ಕೋ ಡಿಜಿಎಫ್‌ಟಿ ಹಾಗೂ ಸಚಿವರ ಗಮನಕ್ಕೆ ತರಲಾಗಿದೆ. ಅಲ್ಲದೆ ಇತರ ಒಪ್ಪಂದಗಳಿಂದಾಗಿಯೂ ಸಮಸ್ಯೆಯಾಗಿರಬಹುದು. ಜೊತೆಗೆ ಬೇಡಿಕೆ ಮತ್ತು ಸರಬರಾಜು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಕೋವಿಡ್ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಹೀಗಾಗಿ ದರ ಏರಿಕೆಯಾಗಿತ್ತು. ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಿತ್ತು. ನಂತರ ಅಡಿಕೆಯ ಉತ್ಪಾದನೆಯೂ ಅಧಿಕವಾಗಿದೆ. ಯಾವ ಯಾವ ಭಾಗಗಳಿಂದ ಕಳ್ಳ ಸಾಗಾಣಿಕೆ ಮೂಲಕ ಅಡಿಕೆ ಆಮದು ಮಾಡುವುದನ್ನು ಗಡಿ ಭಾಗದಲ್ಲಿ ತಡೆಹಿಡಿಯಲಿದೆ. ಅಡಿಕೆಗೆ ಬೆಂಬಲ ಬೆಲೆ ನೀಡುವಂತೆ ವಿಧಾನ ಸಭೆಯ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಲು ಜಿಲ್ಲೆಯ ಶಾಸಕರಿಗೆ ಸೂಚಿಸಲಾಗಿದೆ ಎಂದರು.
ಅಡಿಕೆಯಿಂದ ಅತೀ ಹೆಚ್ಚು ಜಿಎಸ್‌ಟಿ:
ತೋಟಗಾರಿಕೆ ಬೆಳೆಗಳು ಸರಕಾರಕ್ಕೆ ಜಿಎಸ್‌ಟಿ ನೀಡುತ್ತಿದೆ. ಎಪಿಎಂಸಿಗೆ ಸೆಸ್ ನೀಡುತ್ತದೆ. ದ.ಕ ಜಿಲ್ಲೆಯಲ್ಲಿ ಅಡಿಕೆಯಿಂದಾಗಿ ಅತೀ ಹೆಚ್ಚು ಜಿಎಸ್‌ಟಿ ಸಂದಾಯವಾಗುತ್ತಿದೆ. ಎಪಿಎಂಸಿಯ ಸೆಸ್ ಮೂಲಕ ಶೇ.90ರಷ್ಟು ಸೆಸ್ ಅಡಿಕೆಯಿಂದ ಸರಕಾರಕ್ಕೆ ಬರುತ್ತಿದೆ. ಹೀಗಾಗಿ ಸರಕಾರ ಅಡಿಕೆ ಬೆಳೆಗಾರರಿಗೆ ರಕ್ಷಣೆ ನೀಡಬೇಕು ಎಂದು ಸಂಜೀವ ಮಠಂದೂರು ಒತ್ತಾಯಿಸಿದರು.
ನಗರ ಸಭಾ ನಿಟಕಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಹ ಸಂಚಾಲಕರು, ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ ಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಹಾಗೂ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.