ಪುತ್ತೂರು: ಲೋಕೋಪಯೋಗಿ ಇಲಾಖೆ ಕೇಂದ್ರ ವಲಯ ವ್ಯಾಪ್ತಿಯ ಶಿವಮೊಗ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ದಾವಣಗೆರೆ ವ್ಯಾಪ್ತಿಯಲ್ಲಿ ಬರುವ ಕಟ್ಟಡ, ಸೇತುವೆ ಮತ್ತು ರಸ್ತೆ ಇತ್ಯಾದಿ ಕಾಮಗಾರಿಗಳ ಸ್ಟ್ರಕ್ಟರಲ್ ವಿನ್ಯಾಸ ಇಂಜಿನಿಯರ್ ಆಗಿ ಪುತ್ತೂರಿನ ಪ್ರಸನ್ನ ದರ್ಬೆ ಆಯ್ಕೆಯಾಗಿದ್ದಾರೆ. ಸರಕಾರಿ ಹುದ್ದೆಯನ್ನು ತೊರೆದು ದಕ್ಷಿಣ ಕನ್ನಡ, ಉಡುಪಿ ಮತ್ತು ಹಾಸನ ಭಾಗದಲ್ಲಿ ತಾಂತ್ರಿಕ ಸಮಾಲೋಚಕರಾಗಿ ಕೆಲಸ ಮಾಡುತ್ತಿರುವ ಪ್ರಸನ್ನ ದರ್ಬೆಯವರು ಕುಕ್ಕೆ ಸುಬ್ರಹ್ಮಣ್ಯದ ಸೇತುವೆ, ಹೊಸಮಠದ ಸೇತುವೆ, ಉದನೆ ಸೇತುವೆ, ಮಂಗಳೂರು ಏರ್ಪೋರ್ಟ್ ಎಕ್ಸಿಟ್ ರಸ್ತೆ ಮತ್ತು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ ಹಾಗೂ ಹಾಸನ ಜಿಲ್ಲೆಗಳ ಪ್ರಮುಖ ಸೇತುವೆ ಮತ್ತು ರಸ್ತೆಗಳಿಗೆ ತಾಂತ್ರಿಕ ವಿನ್ಯಾಸಗಾರರಾಗಿ ಕೆಲಸ ಮಾಡಿದ್ದಾರೆ. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ತಾತ್ಕಾಲಿಕ ನಗರ ನಿರ್ಮಾಣದಲ್ಲಿ ಮೂಲ ಸೌಕರ್ಯ ನಿರ್ಮಾಣದ ಮುಖ್ಯ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿ ಸರ್ಕಾರದ ಅಧಿಕಾರಿಗಳಿಂದ, ಸ್ವಾಮೀಜಿ ಮತ್ತು ಮುನಿಗಳಿಂದ ಗೌರವಿಸಲ್ಪಟ್ಟಿದ್ದ ಪ್ರಸನ್ನ ಅವರು ಪ್ರಸ್ತುತ ತಾಂತ್ರಿಕ ವಿನ್ಯಾಸದ ಸ್ವಂತ ಕಂಪನಿಯನ್ನು ಹುಟ್ಟು ಹಾಕಿ ಕಡಬದ ಪಾಲೋಳಿ ಸೇತುವೆ, ಪುತ್ತೂರು ಕೋರ್ಟ್, ಸುಳ್ಯ ಜಡ್ಜ್ ಕ್ವಾರ್ಟಸ್, ಮುಲ್ಕಿ ಮಿನಿ ವಿಧಾನ ಸೌಧ ಹಾಗೂ ಇನ್ನಿತರ ಕಟ್ಟಡಗಳ ವಿನ್ಯಾಸಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯ ನಾಗಪ್ಪ ಗೌಡ ಮತ್ತು ಬೇಬಿ ದಂಪತಿಯ ಪುತ್ರರಾಗಿದ್ದು ಪ್ರಸ್ತುತ ಪುತ್ತೂರಿನ ಬೊಳುವಾರಿನಲ್ಲಿ ಪತ್ನಿ ಅಕ್ಷತಾ ಮತ್ತು ಪುತ್ರಿ ವಯಶವಿ ಪ್ರಸನ್ನರವರೊಂದಿಗೆ ವಾಸವಿದ್ದಾರೆ. ಪ್ರಸನ್ನರವರು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು.