ವಿದ್ಯಾಮಾತಾ ಅಕಾಡೆಮಿ, ಜೆ.ಸಿ.ಐ ಪುತ್ತೂರು, ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವ-ಸಾಮೆತ್ತಡ್ಕ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ

0

ಪುತ್ತೂರು: ಸರ್ಕಾರದ ಸುತ್ತೋಲೆಯಂತೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ, ಪೋಷಕರಿಗೆ ತರಬೇತಿ ಕಾರ್ಯಾಗಾರವು ಫೆ.28 ರಂದು ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು.


ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ, ಜೆ.ಸಿ.ಐ ಪುತ್ತೂರು ಮತ್ತು “ನಮ್ಮ ಶಾಲೆ”ಸ. ಹಿ. ಪ್ರಾ. ಶಾಲೆ ಸಾಮೆತ್ತಡ್ಕ ಇದರ ಸಹಭಾಗಿತ್ವದಲ್ಲಿ ನಡೆದ ಕಾರ್ಯಾಗಾರಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಜೆಸಿಐ ಅಧ್ಯಕ್ಷ ಮೋಹನ್ ಕೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಜೆಸಿಐ ತರಬೇತಿ ವಿಭಾಗದ ಉಪಾಧ್ಯಕ್ಷರು ಹಾಗೂ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೆಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಶಾಲಾಭಿವೃದ್ಧಿ ಸಮಿತಿಯ ಜವಾಬ್ದಾರಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ, ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಹಾಗೂ ಪೋಷಕರು ಪ್ರಾಥಮಿಕ ಹಂತದಲ್ಲಿ ತಮ್ಮ ಮಕ್ಕಳ ಬಗ್ಗೆ ಹೇಗೆ ಗಮನ ವಹಿಸಬೇಕು ಎಂಬುದರ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಎಲ್ಲಾ ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಂಪೂರ್ಣವಾಗಿ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ವಿದ್ಯಾಭಿಮಾನಿಯಾದ ದಿನೇಶ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪವಿತ್ರ, ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್, ಅಂಗನವಾಡಿ ಶಿಕ್ಷಕಿ ಹೇಮಾವತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಫಾಹಿಜ್, ಶಾಲಾ ಅಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರು, ಮಕ್ಕಳ ಪೋಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here