ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು 8 ಕೆ.ಜಿ. ರಸಬಾಳೆಹಣ್ಣು, 4 ಕೆ.ಜಿ. ಟೊಮೇಟೋ ಕಟ್ಟಿ ಇಡಿ ಎಂದು ತಿಳಿಸಿ ವಯೋವೃದ್ದ ವ್ಯಾಪಾರಿಯಿಂದ ಮೊಬೈಲ್ ಮತ್ತು ನಗದು ಹಣವನ್ನು ಪಡೆದು ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿರುವ ಫಕ್ರುದ್ದೀನ್ (75) ಎಂಬ ವೃದ್ಧ ವ್ಯಾಪಾರಿಯ ಅಂಗಡಿಗೆ ಬಂದ 40 ರ ಹರೆಯದ ವ್ಯಕ್ತಿ 8 ಕೆ.ಜಿ. ಮಾಗಿದ ರಸಬಾಳೆ ಹಣ್ಣು ಹಾಗೂ 4 ಕೆ.ಜಿ. ಟೋಮೇಟೋ ಬೇಕೆಂದು ತಿಳಿಸಿ, ಮೊಬೈಲ್ ಬಿಟ್ಟು ಬಂದಿದ್ದೇನೆ. ಇನ್ನಷ್ಟು ತರಕಾರಿ ಬೇಕೆಂದು ಮನೆಯಲ್ಲಿ ತಿಳಿಸಿದ್ದಾರೆ. ಪೋನಾಯಿಸಿ ವಿಚಾರಿಸುವುದಕ್ಕಾಗಿ ಒಮ್ಮೆ ಪೋನ್ ಕೊಡಿ ಎಂದು ವ್ಯಾಪಾರಿಯ ಮೊಬೈಲ್ ಪೋನ್ ಪಡೆದುಕೊಂಡ ವ್ಯಕ್ತಿ , ಪೋನಾಯಿಸುವ ನಟನೆ ಮಾಡಿ 1000 ರೂಪಾಯಿ ಕೊಡಿ ಎಂದ ಅವರಲ್ಲಿ ಕೇಳಿದ. ಆಗ ವ್ಯಾಪಾರಿಯು ಅಷ್ಟು ಹಣ ನನ್ನಲ್ಲಿ ಇಲ್ಲ ಎಂದಾಗ ವ್ಯಾಪಾರಿಯ ಬಳಿ ಇದ್ದ 500 ರೂಪಾಯಿ ಪಡೆದುಕೊಂಡು ಮೊಬೈಲ್ ಪೋನ್ ನೊಂದಿಗೆ ಈಗ ಬರುವೆನೆಂದು ತಿಳಿಸಿ ಹೋದಾತ ಬಳಿಕ ನಾಪತ್ತೆಯಾಗಿದ್ದಾನೆ.
ಬಾಳೆಹಣ್ಣು ಮತ್ತು ಟೋಮೆಟೋವನ್ನು ಕಟ್ಟಿ ಗ್ರಾಹಕನನ್ನು ಕಾಯುತ್ತಿದ್ದ ಫಕ್ರುದ್ಧೀನ್ ರವರಿಗೆ ಎಷ್ಟು ಹೊತ್ತಾದರೂ ಆತ ಬಾರದೇ ಇದ್ದಾಗ ತಾನು ಮೋಸ ಹೋಗಿರುವ ವಿಚಾರ ತಿಳಿದು ಕಂಗಾಲಾಗಿದ್ದಾರೆ. ವಂಚಕನು ತನ್ನ ಮೊಬೈಲ್ ನಿಂದ ಪೋನಾಯಿಸಿದ್ದು ನಿಜವಾಗಿದ್ದರೆ ಅದರ ಸಹಾಯದಿಂದ ವಂಚಕನನ್ನು ಪತ್ತೆ ಹಚ್ಚಿ ಇನ್ನಷ್ಟು ಮಂದಿಗೆ ವಂಚನೆ ಎಸಗದಂತೆ ತಡೆಗಟ್ಟಬೇಕೆಂದು ವಿನಂತಿಸಿ ತನ್ನ ಹಣ ಮತ್ತು ಮೊಬೈಲ್ ನ್ನು ಹಿಂದುರುಗಿಸಿ ಕೊಡಬೇಕೆಂದು ವ್ಯಾಪಾರಿಯು ಪೊಲೀಸರ ಮೊರೆ ಹೋಗಿದ್ದಾರೆ.