ಬ್ರಹ್ಮಕಲಶೋತ್ಸವದ ಸರ್ವ ಸನ್ನದ್ದತೆಯಲ್ಲಿ ಕೆದಿಲ ಶ್ರೀ ಉಳ್ಳಾಕ್ಲು, ಧೂಮಾವತಿ, ಮಲರಾಯ ದೈವಸ್ಥಾನ

0

ಮಾ.11ರಿಂದ 15:ಶ್ರೀ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ತುಳುನಾಡಿನ ಪುರಾತನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕೆದಿಲ ಶ್ರೀ ಉಳ್ಳಾಕ್ಲು, ಧೂಮಾವತಿ, ಮಲರಾಯ ದೈವಸ್ಥಾನದಲ್ಲಿ  ಜೀರ್ಣೋದ್ದಾರದ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಮೂರನೇ ಬಾರಿಯ ಸಡಗರ ಸಂಭ್ರಮದ ಬ್ರಹ್ಮಕಲಶೋತ್ಸವಕ್ಕಾಗಿ ದೈವಸ್ಥಾನ ಸರ್ವ ಸನ್ನದ್ದಗೊಂಡಿದ್ದು, ಊರ ಮಂದಿ ತಮ್ಮ ಆರಾಧ್ಯ ದೈವಗಳನ್ನು ಬೆಳಕಿಗೆ ತಂದು ಆರಾಧನೆಗೆ ಒಳಪಡಿಸಲು ಕಾತುರ ಹೊಂದಿದೆ. ಮಾ.11ರಿಂದ 15 ರವರೆಗೆ ಶ್ರೀ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವವು ನಡೆಯಲಿದೆ.

ಕ್ಷೇತ್ರದ ಹಿನ್ನೆಲೆ: ಇತಿಹಾಸ ಪ್ರಸಿದ್ಧವಾದ ಸುಮಾರು 800 ವರ್ಷಗಳ ಇತಿಹಾಸವುಳ್ಳ  ಕೆದಿಲದ ಧರ್ಮಚಾವಡಿಯಲ್ಲಿ ಗ್ರಾಮ ದೈವಗಳ ಕೀರ್ತಿ ಕಾರಣಿಕದ ವೈಭವ, ಆಚಾರ ವಿಚಾರಗಳು, ಜನಜನಿತವಾಗಿವೆ. ಒಂದೊಮ್ಮೆ ಅನೇಕ ವರ್ಷಗಳವರೆಗೆ ನಿತ್ಯ ನೈಮಿತ್ಯಗಳು ನಡೆಯದೆ ದೈವಸ್ಥಾನವು ಪಾಳು ಬಿದ್ದಿತ್ತು. ಬದಲಾವಣೆ ಪ್ರಕೃತಿಯ ನಿಯಮ ಅದಕ್ಕನುಗುಣವಾಗಿ ಶ್ರೀ ದೈವಗಳ ಅನುಗ್ರಹದಿಂದ ಊರ ಪರವೂರ ಭಕ್ತ ಜನರ ಸಹಕಾರದಿಂದ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯವು 1986ರಿಂದ ಆರಂಭಗೊಂಡು 1991ನೇ ಇಸವಿಯಲ್ಲಿ ಪ್ರಥಮ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿತ್ತು. ಇದರ ಹಿಂದೆ  ನಾರಾಯಣ ಭಟ್ಟ ಪುಂಜತ್ತೋಡಿ,  ಜೆ.ಕೃಷ್ಣ ಭಟ್ಟ, ಮೀರಾವನ, ಕೈಂತಜೆ ಸುಬ್ಬಣ್ಣ ಭಟ್ಟ, ಕುಳ್ಳಜೆ,  ನಾರಾಯಣ ಭಟ್ಟ ಬಡೆಕ್ಕಿಲ,  ಮಾರಪ್ಪ ರೈ ಕಲ್ಲಾಜೆ ಈ ಐವರ ನೇತೃತ್ವದಲ್ಲಿ ಗ್ರಾಮಸ್ಥರ ಹಾಗೂ ಪರವೂರ ಭಕ್ತಾಭಿಮಾನಿಗಳ ನಿಸ್ವಾರ್ಥಸೇವೆ, ಶ್ರಮಸೇವೆ, ತನು ಮನ ಧನಗಳ ಸಹಾಯದಿಂದ ವೈಭವದ ಬ್ರಹ್ಮಕಲಶೋತ್ಸವ ನಡೆದಿರುವುದು ಇತಿಹಾಸ. ಶ್ರೀ ದೈವಗಳ ಅನುಗ್ರಹದಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದೊಂದಿಗೆ ಭಕ್ತ ಬಂಧುಗಳ ಪ್ರೀತಿ ವಿಶ್ವಾಸ, ತ್ರಿಕರಣಪೂರ್ವಕವಾಗಿ ಭಾಗವಹಿಸುವಿಕೆಯಿಂದಾಗಿ ದಿನೇ ದಿನೇ ಅಭಿವೃದ್ಧಿ  ಹೊಂದಿದ ಗ್ರಾಮ ದೈವಸ್ಥಾನದಲ್ಲಿ 2012ನೇ ಇಸವಿಯಲ್ಲಿ ಎರಡನೇ ಬ್ರಹ್ಮಕಲಶೋತ್ಸವ ನಡೆದಿತ್ತು.

ದೈವ ಸಾನ್ನಿಧ್ಯಗಳು: ಶ್ರೀ ಕ್ಷೇತ್ರದಲ್ಲಿ ಶ್ರೀ ಉಳ್ಳಾಕ್ಲು ದೈವಗಳು, ಮಲರಾಯ, ಧೂಮಾವತಿ, ಹಾಗೂ ಪರಿವಾರ ದೈವಗಳಾದ ರಕ್ತೇಶ್ವರಿ, ಪಿಲಿಚಾಮುಂಡಿ ದೈವಗಳ ಸಾನ್ನಿಧ್ಯಗಳಿವೆ.

ವಾರ್ಷಿಕ ಪರ್ವಗಳು: ಶ್ರೀ ಕ್ಷೇತ್ರದಲ್ಲಿ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ, ನಾಗರ ಪಂಚಮಿ, ದೀಪಾವಳಿ, ನವರಾತ್ರಿಯಲ್ಲಿ ಆಯುಧಪೂಜೆ ಮತ್ತು ದಶಮಿಯಿಂದು ನವರಾತ್ರಿ ಪೂಜೆ, ನವಾನ್ನ ಸಂತರ್ಪಣೆ ಹಾಗೂ ವಾರ್ಷಿಕವಾಗಿ ಮಾರ್ಚ್ ತಿಂಗಳಲ್ಲಿ  ಮೂರು ದಿವಸದ ಜಾತ್ರೋತ್ಸವವು  ಬಹಳ ವಿಜೃಂಭಣೆಯಿಂದ  ನಡೆಯುತ್ತಿರುವುದು ರೂಢಿಯಾಗಿದೆ.

ದೈವಗಳ ಕಾರಣಿಕ ಮಹಿಮೆ: ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಳಿಗಾಗಿ ಶ್ರೀ ದೈವಗಳಲ್ಲಿ ಪ್ರಾರ್ಥಿಸಲು ಊರ ಪರವೂರ ಅನೇಕ ಭಕ್ತ ಜನರು ದೈವಸ್ಥಾನಕ್ಕೆ ಆಗಮಿಸುತ್ತಾರೆ. ಭಕ್ತ ಜನರ ಕಷ್ಟಗಳು ನಿವಾರಣೆಯಾಗಿ, ಕೋರಿಕೆಗಳು ಈಡೇರಿದಂತಹ ಅನೇಕ ಉದಾಹರಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಸಂತಾನ ಭಾಗ್ಯ, ವಿವಾಹಸಿದ್ಧಿ, ಕೋರ್ಟುವ್ಯಾಜ್ಯಗಳು, ಭೂಮಿಯಲ್ಲಿ ಜಲಪ್ರಾಪ್ತಿ, ಉದ್ಯೋಗ ಭಾಗ್ಯ ಇವುಗಳನ್ನೆಲ್ಲಾ ಕರುಣಿಸಿದಂತಹ ದಿವ್ಯಶಕ್ತಿಗಳಾಗಿ ಇಲ್ಲಿನ ದೈವಗಳು ಭಕ್ತವರಪ್ರದಾಯಕವಾಗಿವೆ.

ರೂ 2.50 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ:
ದೈವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳು ರೂ.2.50 ಕೋಟಿ ವೆಚ್ಚದಲ್ಲಿ  ನಡೆದಿದ್ದು, ಜೀರ್ಣೋದ್ಧಾರ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ. ಪ್ರಸಿದ್ಧ ವಾಸ್ತುತಜ್ಞರಾದ ಮುನಿಯಂಗಳ ಶ್ರೀಕೃಷ್ಣ ಪ್ರಸಾದ್‌ರವರ ಮೂಲಕ ಜೀರ್ಣೋದ್ಧಾರ ಕಾರ್ಯಗಳು ನಡೆದಿವೆ. ಗರ್ಭಗುಡಿಯ ಕೆಲಸವನ್ನು ಶಿಲ್ಪಿ ಹರೀಶ್‌ ಆಚಾರ್ಯ, ಕಲ್ಲಿನ ಕೆಲಸವನ್ನು ರಾಜೇಂದ್ರ ಮತ್ತು ತಂಡದವರು ಮಾಡಿದ್ದಾರೆ. ಶ್ರೀ ದೈವಗಳ ಚಾವಡಿಯ ಹಳೇಯ ಹಂಚಿನ ಮೇಲ್ಛಾವಣಿ ತೆಗೆದು ತಾಮ್ರದ ಮಾಡನ್ನು ಮಾಡಲಾಗಿದೆ. ಅದೇ ರೀತಿ ಶ್ರೀ ಉಳ್ಳಾಕ್ಲು ದೈವಸ್ಥಾನದ ಗರ್ಭಗುಡಿಯನ್ನು ತೆಗೆದು ಶಿಲಾಪೀಠ, ತಾಮ್ರದ ಹೊದಿಕೆ ಇರುವ ಮಾಡು ಹಾಗೆಯೇ ದೈವಗಳ ನಡೆಗೆ ತಾಮ್ರದ ಮಾಡನ್ನು ಮಾಡಲಾಗಿದೆ. ಗರ್ಭಗುಡಿಯ ಎದುರಿನ ಗೋಪುರ ಹಾಗೂ ರಾಜಗೋಪುರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಶ್ರಮಸೇವೆಯ ಮೂಲಕವೇ ಸುಮಾರು 50 ರಿಂದ 60 ಲಕ್ಷ ರೂ. ವೆಚ್ಚದ ಕಾಮಗಾರಿಗಳು ನಡೆದಿದೆ. ಸಾಧಾರಣವಾಗಿ ಎರಡರಿಂದ ಮೂರುವರುಷಗಳ ವರೆಗೆ  ನಡೆಯಬೇಕಿದ್ದ ಜೀರ್ಣೋದ್ಧಾರ ಕೆಲಸಗಳನ್ನು ದೈವಗಳ ಅನುಗ್ರಹ ಹಾಗೂ ಭಕ್ತಾದಿಗಳ ಸಹಕಾರದಿಂದ, ಶ್ರಮಸೇವೆಯಿಂದ ಕೇವಲ 7 ತಿಂಗಳಲ್ಲಿ ಪೂರ್ತಿಗೊಳಿಸಿದ ಸಂತಸ ನಮಗಿದೆ ಎನ್ನುತ್ತಾರೆ ಗ್ರಾಮಸ್ಥರು.

ತೆಂಗಿನಗರಿಯ ಚಪ್ಪರ: ಬ್ರಹ್ಮಕಲಶೋತ್ಸವ ಸಭಾಂಗಣ, ಅನ್ನಛತ್ರ, ಪಾಕಶಾಲೆ ಎಲ್ಲವೂ ತೆಂಗಿನಗರಿಯಿಂದ ಮಾಡಲಾದ ಸಾಂಪ್ರದಾಯಿಕ ಚಪ್ಪರ ಅತ್ಯಾಕರ್ಷಕವಾಗಿದೆ. ದೈವಸ್ಥಾನದ ಎದುರುಭಾಗದಲ್ಲಿ ಗ್ರಾಮದ ಮನೆಗಳಿಂದ ಸಂಗ್ರಹಿಸಲ್ಪಟ್ಟ ತೆಂಗಿನ ಗರಿಯ ತಟ್ಟಿಯಿಂದ ಚಪ್ಪರ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಕಾರಣಿಕ ಮಹಿಮ ಕ್ಷೇತ್ರದಲ್ಲಿ ಸಕಲ ಭಕ್ತರೂ ಒಡಗೂಡಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನಡೆಸಲು ಈ ಮೂಲಕ ಪರವೂರ ಭಕ್ತರನ್ನೂ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಗ್ರಾಮಸ್ಥರು ಏಕಮನಸ್ಸಿನಿಂದ ಒಂದಾಗಿ ಬ್ರಹ್ಮಕಲಶೋತ್ಸವ ಸಂಭ್ರಮದ ದಿನಗಣನೆಯಲ್ಲಿದ್ದಾರೆ.

ಐದು ಬಂಡಿ ಇರುವ ಏಕೈಕ ಕ್ಷೇತ್ರ

ಕ್ಷೇತ್ರದಲ್ಲಿ ನೇಮೋತ್ಸವ ನಡೆಯುವ ಸಂದರ್ಭದಲ್ಲಿ ದೈವಗಳು ಬಂಡಿ ಉತ್ಸವ ನಡೆಯುವುದು ಪದ್ದತಿ.  ಅದರಂತೆ ಊರ ಪರವೂರ ಭಕ್ತಾದಿಗಳ ಸಹಕಾರದಲ್ಲಿ ಉಳ್ಳಾಕ್ಲು ದೈವಕ್ಕೆ ಕುದುರೆ ಬಂಡಿ, ಧೂಮಾವತಿ ಹಾಗೂ ಮಲರಾಯ ದೈವಕ್ಕೆ ಹಂದಿ ಬಂಡಿ, ರಕ್ತೇಶ್ವರಿ ದೈವಕ್ಕೆ ಸಿಂಹದ ಬಂಡಿ, ಪಿಲಿಚಾಮುಂಡಿಗೆ ಹುಲಿ ಬಂಡಿಯನ್ನು ನಿರ್ಮಿಸಲಾಗಿದ್ದು, ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀ ದೈವಗಳ ಬಂಡಿಯನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಈ ಕ್ಷೇತ್ರ ಐದು ಬಂಡಿಗಳಿರುವ ಏಕೈಕ ಕ್ಷೇತ್ರ ಎನಿಸಿಕೊಂಡಿದೆ.


ತಂಜಾವೂರು ಶೈಲಿಯ ರಾಜಗೋಪುರ

ಕ್ಷೇತ್ರದ ಎದುರುಭಾಗದಲ್ಲಿರುವ ಹಳೆಯ ರಾಜಗೋಪುರವನ್ನು ಕೆಡವಿ ನೂತನ ತಂಜಾವೂರು ಶೈಲಿಯಲ್ಲಿ ರಾಜಗೋಪುರವನ್ನು ನಿರ್ಮಿಸಲಾಗಿದೆ. ಸದ್ಯ ಇಂತಹ ರಾಜ ಗೊಪುರ ಈ ಭಾಗದಲ್ಲಿ ಕಾಣಸಿಗುವುದು ಅಪರೂಪವಾಗಿದೆ. ಇದು ದೈವಸ್ಥಾನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ತಂಜಾವೂರಿನ ಶಿಲ್ಪಿಗಳ ಮೂಲಕ ಇಲ್ಲಿನ ರಾಜಗೋಪುರ ರಚಿಸಲಾಗಿದ್ದು, ನೋಡಲು ಅತ್ಯಂತ ನಯನಮನೋಹರವಾಗಿದೆ.


ಕಾರ್ಯಕರ್ತರ ಪಾದಮುಟ್ಟಿ ನಮಸ್ಕರಿಸುತ್ತೇನೆ

ಯುವಶಕ್ತಿಯ ಶ್ರಮಸೇವೆ ಕಂಡಾಗ ಮನಸ್ಸು ತುಂಬಿಬರುತ್ತದೆ. ಈ ಕ್ಷೇತ್ರದಲ್ಲಿ ಊರಿನ ಎಲ್ಲರೂ ಒಗ್ಗಟ್ಟಾಗಿ ಅತ್ಯಂತ ಭಕ್ತಿ ಭಾವದಿಂದ ಒಂದುಗೂಡಿ ಜೀರ್ಣೋದ್ಧಾರ ಕಾರ್ಯವಾಗಿದೆ. ಈಗ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿಯೂ ನಿಸ್ವಾರ್ಥಭಾವದಿಂದ  ದೈವಗಳ ಚಾಕರಿಯವರು ಎಂಬ ಮನೋಭಾವದಿಂದ ಅಛಲ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದೇವೆ. ದೈವಗಳ ನುಡಿ ಮತ್ತು ದೈವಜ್ಞರ ಮಾತಿನಂತೆ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದೇವೆ. 50 ಲಕ್ಷ ರೂ. ಮೇಲ್ಪಟ್ಟು ಕೆಲಸ ಶ್ರಮದಾನದ ಮೂಲಕ ನಡೆದಿದೆ. ಈ ದಿಶೆಯಲ್ಲಿ ಗ್ರಾಮದ ಕಾರ್ಯಕರ್ತರಿಗೆ ಎಷ್ಟು ನಮಸ್ಕರಿಸಿದರೂ ಸಾಲದು. ಅವರಿಂದಾಗಿ ಇಷ್ಟು ಶೀಘ್ರವಾಗಿ ದೈವಸ್ಥಾನ ಕೆಲಸ ಕಾರ್ಯಗಳು ನಡೆದು ಬ್ರಹ್ಮಕಲಶೋತ್ಸವಕ್ಕೆ ಸಿದ್ದವಾಗಿದೆ.
ಜೆ. ಕೃಷ್ಣ ಭಟ್ಟ ಮೀರಾವನ
ಅಧ್ಯಕ್ಷರು, ಆಡಳಿತ ಸಮಿತಿ

LEAVE A REPLY

Please enter your comment!
Please enter your name here