ಪುತ್ತೂರು:ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರನ್ನು ಈಗಲೇ ಆಯ್ಕೆ ಮಾಡಬೇಕು ಎಂದು ಪಕ್ಷದ ಕೆಲವು ಪ್ರಮುಖರು ಜಿಲ್ಲಾಧ್ಯಕ್ಷರನ್ನು ಒತ್ತಾಯಿಸಿರುವ ಘಟನೆ ವರದಿಯಾಗಿದೆ.
ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾಗಿರುವ ಕುರಿತು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖರ ಸಭೆ ನಡೆದಿದೆ.
ಜಿಲ್ಲೆಯ ಇತರ ಎಲ್ಲ ಮಂಡಲಗಳಿಗೆ ಅಧ್ಯಕ್ಷರ ನೇಮಕವಾಗಿದೆ.ಪುತ್ತೂರು ಮಂಡಲಕ್ಕೆ ಮಾತ್ರ ಅಧ್ಯಕ್ಷರ ನೇಮಕವಾಗಿಲ್ಲ.ಇನ್ನೇನು ಲೋಕಸಭಾ ಚುನಾವಣೆ ಘೋಷಣೆಯಾಗಲಿರುವುದರಿಂದ ಇಂದೇ ಪುತ್ತೂರು ಮಂಡಲದ ಬಿಜೆಪಿ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಪುತ್ತೂರು ಬಿಜೆಪಿ ಮುಖಂಡರು ಜಿಲ್ಲಾಧ್ಯಕ್ಷರ ಮೇಲೆ ಒತ್ತಡ ಹೇರಿದರು.ಪುತ್ತೂರು ಬಿಜೆಪಿ ಅಧ್ಯಕ್ಷ ಹುದ್ದೆ ನೀಡುವುದಾದರೆ ಮಾತ್ರ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪುತ್ತಿಲ ಪರಿವಾರದ ಕಾರ್ಯಕರ್ತರು ಷರತ್ತು ವಿಧಿಸಿದ್ದುದು ಮತ್ತು ಇದಕ್ಕೆ ಪೂರಕವೆನ್ನುವಂತೆ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಆಯ್ಕೆ ಇನ್ನೂ ನಡೆಯದೇ ಇರುವುದು ಹಾಗೂ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷ ಹುದ್ದೆ ನೀಡುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಆಯ್ಕೆ ಈಗಲೇ ನಡೆಯಬೇಕು ಎಂದು ಇಲ್ಲಿನ ಬಿಜೆಪಿ ಪ್ರಮುಖರು ಜಿಲ್ಲಾಧ್ಯಕ್ಷರ ಮೇಲೆ ಒತ್ತಡ ತಂದಿರುವುದ ಹಿಂದಿನ ಉದ್ದೇಶ ಏನಿರಬಹುದು ಎನ್ನುವುದು ನಿಗೂಢವಾಗಿದೆ.ಮಾಜಿ ಶಾಸಕ ಸಂಜೀವ ಮಠಂದೂರು,ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ,ಗೋಪಾಲಕೃಷ್ಣ ಹೇರಳೆ, ಭಾಮಿ ಅಶೋಕ್ ಶೆಣೈ,ಜೀವಂಧರ್ ಜೈನ್ ಸಹಿತ ಪಕ್ಷದ ಪ್ರಮುಖರು ಸಭೆಯಲ್ಲಿದ್ದರು.