ಪುತ್ತೂರು: ಬಾವಿಯ ಕೆಸರು ತೆಗೆದ ದುಡ್ಡಿನ ವಿಚಾರದಲ್ಲಿನ ತಕರಾರಿನಿಂದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಕಲಮಜಲು ಎಂಬಲ್ಲಿಂದ ವರದಿಯಾಗಿದೆ.
ಈ ಕುರಿತು ಐತ್ತಪ್ಪ (55ವ.) ಎಂಬವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ. ‘ಮೇ 2ರಂದು ಬೆಳಿಗ್ಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಲಮಜಲುವಿನ ಮಾವಿನಕಟ್ಟೆಯಲ್ಲಿದ್ದಾಗ ಹರ್ಷಿತ್ ಮತ್ತು ಅನಿಲ್ ಮೋಟಾರ್ ಸೈಕಲ್‌ನಲ್ಲಿ ಬಂದು, ನಿನ್ನೆ ಏನು ಹೇಳಿದ್ದು ನಿನ್ನನ್ನು ಬಿಡುವುದಿಲ್ಲ ಎಂದು ಹರ್ಷಿತ್ ತುಳುವಿನಲ್ಲಿ ಬೈಯುತ್ತಾ ಮೈ ಮೇಲೆ ಕೈ ಹಾಕಿ ಇಬ್ಬರೂ ಕೈಯಿಂದ ಹೊಡೆದು, ಅಲ್ಲೇ ಇದ್ದ ಅಡಿಕೆ ಸಲಾಕೆಯಿಂದ ನನ್ನ ಕೈ, ಕಿವಿಗೆ, ಕಾಲಿಗೆ ಹೊಡೆದು ಬೆದರಿಕೆಯೊಡ್ಡಿದ್ದಾರೆ. ನನ್ನ ಬೊಬ್ಬೆ ಕೇಳಿ ಪರಿಚಯದ ರವಿ ಎಂಬವರು ಓಡಿ ಬಂದು ತಡೆದಿದ್ದರು. ಈ ಸಮಯ ಆರೋಪಿಗಳು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಗೊಂಡಿದ್ದ ನನ್ನನ್ನು ಅಣ್ಣನ ಮಗ ಅಶ್ವಿತ್ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದುದಾಗಿ ಐತ್ತಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಮತ್ತು ಹರ್ಷಿತನ ಮಧ್ಯೆ ಬಾವಿಯ ಕೆಸರು ತೆಗೆದ ದುಡ್ಡಿನ ವಿಚಾರದಲ್ಲಿ ತಕರಾರು ಇದ್ದು, ಈ ವಿಚಾರದಲ್ಲಿ ಮಾತಿನ ಚಕಮಕಿ ಆಗಿದ್ದು, ಇದೇ ದ್ವೇಷದಿಂದ ಈ ಕೃತ್ಯವೆಸಗಿರುವುದಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ (ಅ.ಕ್ರ 55-2024) ಕಲಂ 504,506,323,324 R/W 34 ೈಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.