ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಪುತ್ತೂರಿನಲ್ಲಿ ಪ್ರಚಾರ ಅಭಿಯಾನಕ್ಕೆ ಶಾಸಕರಿಂದ ಚಾಲನೆ

0

ಎರಡೂ ಸ್ಥಾನವನ್ನು ಗೆಲ್ಲಬೇಕಾದಲ್ಲಿ ಕಾರ್ಯಕರ್ತರ ಶ್ರಮ ಅಗತ್ಯ: ಅಶೋಕ್ ರೈ
ಈ ಚುನಾವಣೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ: ಅಭ್ಯರ್ಥಿ ಮಂಜುನಾಥ್

ಪುತ್ತೂರು:ವಿಧಾನಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಶಾಲಿಯಾಗಬೇಕು, ಇದಕ್ಕಾಗಿ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಆಯನೂರು ಮಂಜುನಾಥ್ ಅವರು ಓರ್ವ ಸಜ್ಜನ ಮತ್ತು ವಿದ್ಯಾವಂತ ರಾಜಕಾರಣಿಯಾಗಿದ್ದು ಈ ಹಿಂದೆಯೂ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಚಿರಪರಿಚಿತ ನಾಯಕರಾಗಿದ್ದಾರೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿರುವ ಇವರು ಎಂಥಾ ಸನ್ನಿವೇಶದಲ್ಲೂ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇದ್ದು ಬಡವರ ಬಗ್ಗೆ ಅಪಾರ ಕಾಳಜಿ ಇರುವ ನಾಯಕರಾಗಿದ್ದು ಇವರಿಗೆ ಪುತ್ತೂರಿನಲ್ಲಿ ಹೆಚ್ಚು ಮತ ಚಲಾವಣೆಯಾಗುವಂತೆ ನಾವು ಕಾರ್ಯಪೃವೃತ್ತರಾಗಬೇಕಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಮಟ್ಟದಲ್ಲಿ ಕಾರ್ಯಕರ್ತರು ಮತದಾರನ ಬಳಿ ತೆರಳಿ ಮತಯಾಚನೆ ಮಾಡುವಂತೆ ಶಾಸಕರು ಮನವಿ ಮಾಡಿದರು.

ಚುನಾವಣೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ: ಆಯನೂರು ಮಂಜುನಾಥ್
ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ರವರು ಮಾತನಾಡಿ ರಾಜ್ಯ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಕೊರತೆ ಇದೆ, ವಿಧಾನಸಭೆಯಲ್ಲಿ ಮಂಜೂರಾದ ಬಿಲ್‌ಗಳು ವಿಧಾನಪರಿಷತ್‌ನಲ್ಲಿ ಪಾಸಾಗುತ್ತಿಲ್ಲ ಈ ಕಾರಣಕ್ಕೆ ಕಾಂಗ್ರೆಸ್ ಬಹುಮತ ಪಡೆಯಬೇಕಾದ ಅನಿವಾರ್ಯತೆ ಇದ್ದು ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದು ಎಲ್ಲರನ್ನೂ ಗೆಲ್ಲಿಸುವ ಮೂಲಕ ಪಕ್ಷದ ಬಲವರ್ಧನೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಈ ವಿಚಾರವನ್ನು ಕಾರ್ಯಕರ್ತರಿಗೆ ಈಗಾಗಲೇ ತಿಳಿಸಿದ್ದಾರೆ ಎಂದು ಹೇಳಿದರು.


ಮತದಾರರ ಸಮಸ್ಯೆಗಳಿಗೆ ಖಂಡಿತವಾಗಿಯೂ ಸ್ಪಂದಿಸುವೆ, ಅನ್ಯಾಯವಾದಾಗ ಸ್ವಪಕ್ಷದವರ ವಿರುದ್ದವೂ ನಾನು ಹೋರಾಟಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಮತದಾರರಿಗೆ ಅನ್ಯಾಯವಾದಾಗ ಧ್ವನಿ ಎತ್ತುವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.


ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ , ವಿಟ್ಲ ಉಪ್ಪಿನಂಗಡಿ ಬ್ಲಾಕ್ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ರವರು ವಲಯ ಮತ್ತು ಬೂತ್ ಅಧ್ಯಕ್ಷರುಗಳು ಕೈಗೊಳ್ಳಬೇಕಾದ ಪ್ರಚಾರ ಕಾರ್ಯಗಳ ಬಗ್ಗೆ ವಿವರಣೆ ನೀಡಿ ಎಲ್ಲ ಮತದಾರರನ್ನು ಭೇಟಿಯಾಗಿ ಮತಯತಾಚನೆ ಮಾಡುವಂತೆ ವಿನಂತಿಸಿದರು.


ಚುನಾವಣಾ ಉಸ್ತುವಾರಿ ಉಡುಪಿಯ ಗಫೂರ್ ಸಾಹೇಬ್ ರವರು ಅಭ್ಯರ್ಥಿ ಪರಿಚಯ ಹಾಗೂ ಚುನಾವಣಾ ರೂಪುರೇಶೆಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಬಂಟ್ವಾಳ ಉಸ್ತುವಾರಿ ಮುಸ್ಥಫಾ ಸುಳ್ಯ, ಸುಳ್ಯ ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಸುಳ್ಯ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ. ಪಕ್ಷದ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು, ವಿಜಯಕುಮಾರ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು. ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಪಕ್ಷದ ವಲಯ ಅಧ್ಯಕ್ಷರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here