ಮಕ್ಕಳ ಮನೆಗೆ ಪ್ಲಾಸ್ಟಿಕ್ ಸಂಗ್ರಹಣೆಯ ಕೈಚೀಲ ಹಂಚೋಣದೊಂದಿಗೆ ಪುಣ್ಚಪ್ಪಾಡಿ ಶಾಲೆಯ ಆರಂಭೋತ್ಸವ “ಸ್ವಚ್ಛ ಕಲಿಕಾರಂಭ”

0


“ಏನಿದು ಸ್ವಚ್ಛ ಕಲಿಕಾರಂಭ…?

ಸವಣೂರು : ಅಕ್ಷರ ರಥ, ಕಲಿಕಾ ಪಲ್ಲಕ್ಕಿ, ಕಲಿಕಾ ಮಂಟಪ, ಪುಸ್ತಕ ಜೋಳಿಗೆ, ಕಲಿಕಾ ಚೀಲ ಹಂಚೋಣ, ಕಲಿಕಾ ಹುಂಡಿ ಹೀಗೆ ಪ್ರತಿ ವರ್ಷ ವಿಶಿಷ್ಟವಾಗಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಪುಣ್ಚಪ್ಪಾಡಿ ಶಾಲೆಯ ವಿಶೇಷತೆ.
ಈ ವರ್ಷ ಒಂದು ಹೆಜ್ಜೆ ಪ್ರಕೃತಿಯ ಉಳಿವಿನ ಕಡೆಗೆ ಎನ್ನುವ ಧ್ಯೇಯದೊಂದಿಗೆ ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭೂಮಿಯ ಆಶಯದಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಚೀಲವನ್ನು ಹಂಚಿ ಪ್ರಕೃತಿಯ ಉಳಿವಿನ ಅರಿವಿನ ಹಂಚಿಕೆಯ ಪರಿಕಲ್ಪನೆಯೇ “ಸ್ವಚ್ಛ ಕಲಿಕಾರಂಭ”. ಪ್ರತಿ ಮಗು ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಗ್ರಹಿಸಿ ವಾರಕ್ಕೊಮ್ಮೆ ಶಾಲೆಗೆ ನೀಡುವುದು, ಆ ಮೂಲಕ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸುವುದು. ಈ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮಗುವಿಗೆ ಬಹುಮಾನವನ್ನು ನೀಡುವುದು. “ಗಾಂಧಿ ಗ್ರಾಮ ಪುರಸ್ಕಾರ ” ಪುರಸ್ಕೃತ ಸವಣೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಯಿತು.

ಶಾಲೆಯ ಹಿರಿಯ ವಿದ್ಯಾರ್ಥಿ, ದಾನಿ ಸುರೇಶ್ ರೈ ಸೂಡಿಮುಳ್ಳು ನೀಡಿದ ಮೇಜುಗಳು ಹಾಗೂ 7 ನೇ ತರಗತಿ ವಿದ್ಯಾರ್ಥಿಗಳು ನೀಡಿದ ಕೊಡುಗೆಗಳ ಹಸ್ತಾಂತರ, ದಾನಿಗಳು ನೀಡಿದ ಪುಸ್ತಕಗಳು, ಲೇಖನ ಸಾಮಗ್ರಿಗಳ ಹಂಚಿಕೆ, ಶಾಲಾ ಆವರಣದಲ್ಲಿ ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಿ, ಮಕ್ಕಳನ್ನು ಆರತಿ ಬೆಳಗಿ ತ್ಯಾಜ್ಯ ನಿರ್ವಹಣೆಯ ವೀಶೇಷ ಚೀಲಗಳನ್ನು ನೀಡಿ ಕೊಡುಗೆಗಳ ಶಾಲಾರ್ಪಣೆಯ ಮೂಲಕ ಶಾಲಾ ಆರಂಭೋತ್ಸವ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸ್ವಚ್ಛತೆಯ ಶಿಕ್ಷಣ ನಮ್ಮ ಬದುಕಿನ ಭಾಗವಾಗಬೇಕು. ಪ್ರಕೃತಿಯನ್ನು ತ್ಯಾಜ್ಯ ಮುಕ್ತ ಮಾಡುವುದು ನಮ್ಮ ನಿತ್ಯದ ಜವಾಬ್ದಾರಿಯಾಗಬೇಕು ಎಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ ಕೃಷ್ಣ ಕುಮಾರ್ ರೈ ದೇವಸ್ಯ ಹೇಳಿದರು.
ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು , ಸ.ಹಿ.ಪ್ರಾ ಶಾಲೆ ಪುಣ್ಚಪ್ಪಾಡಿ ಇದರ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ್ ಸವಣೂರು ಇಲ್ಲಿಯ ಕಾರ್ಯದರ್ಶಿ ಮನ್ಮಥ ಮಾತನಾಡಿ ಶಾಲಾ ಶಿಕ್ಷಣದ ಭಾಗವಾಗಿ ನಮ್ಮ ಮನೆ, ಪರಿಸರ, ಶಾಲೆ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಈ ದಿವಸ ಪುಣ್ಚಪ್ಪಾಡಿ ಶಾಲೆಯು ಸ್ವಚ್ಛ ಕಲಿಕಾರಂಭದೊಂದಿಗೆ ಆರಂಭೋತ್ಸವ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರಾಧಾಕೃಷ್ಣ ದೇವಸ್ಯ ಮಾತನಾಡಿ ಹೊಸ ಶೈಕ್ಷಣಿಕ ವರ್ಷವು ಹೊಸ ಕಲಿಕೆಯನ್ನು ನೀಡಲಿ. ನಾವು ಬೆಳೆಯುವುದರೊಂದಿಗೆ ನಮ್ಮ ಶಾಲೆ ನಮ್ಮ ಊರನ್ನು ಉಳಿಸುವ ಕಾರ್ಯ ನಮ್ಮದಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ದಾನಿಗಳಾದ. ಸುಹಾಸ್ ಕಾರಂತ್, ಉಲ್ಲಾಸ್ ಕಾರಂತ್, ಕೃಷ್ಣ ಕುಮಾರ್ ರೈ ದೇವಸ್ಯ, ಹರೀಶ ಪಿ., ಭರತ್ ಓಡಂತರ್ಯ, ಶಾಲಾ ಶಿಕ್ಷಕರು ನೀಡಿದ ಲೇಖನ ಸಾಮಗ್ರಿಗಳನ್ನು ನೀಡಲಾಯಿತು. ಸರ್ಕಾರದಿಂದ ನೀಡಿದ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.


ಶಾಲಾ ಹಿರಿಯ ವಿದ್ಯಾರ್ಥಿ ಶ್ರೀ ಸುರೇಶ್ ರೈ ಸೂಡಿಮುಳ್ಳು ನೀಡಿದ ಮೇಜುಗಳನ್ನು ಶಾಲಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಸದಸ್ಯರಾದ ಬಾಬು ಜರಿನಾರು ಗಿರಿಶಂಕರ ಸುಲಾಯ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರೀಶ ಪಿ.. ಕಡಬ ಪೋಲೀಸ್ ಠಾಣೆ, ಲಿಂಗಪ್ಪ ರೈ ಚೆಂಬುತ್ತೋಡಿ, ಪಂಚಾಯತ್ ಸಿಬ್ಬಂದಿಗಳಾದ ಪ್ರಮೋದ್ ರೈ, ದಯಾನಂದ, ಯತೀಶ್ ಕೆ ಎಂ., ಪಂಚಾಯತ್ ಕಸ ನಿರ್ವಹಣಾ ಘಟಕದ ಸಿಬ್ಬಂದಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು.ಶಿಕ್ಷಕರಾದ ಶೋಭಾ ಕೆ. ಸ್ವಾಗತಿಸಿ ಚಂದ್ರಿಕಾ ಎಸ್. ವಂದಿಸಿದರು. ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here