ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ – ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವ ಆಚರಣೆ

0

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಕನ್ನಡ ಮತ್ತು ಇತಿಹಾಸ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವ ಹಾಗೂ ವಿಶೇಷ ಉಪನ್ಯಾಸ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ. ಅವರು ಉದ್ಘಾಟಿಸಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಅವರ ಆಶಯದಂತೆ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಾವಿಂದು ಅವರ ಕಾರ್ಯಸಾಧನೆಗಳ ಕುರಿತು ಅನುಸಂಧಾನ ಮಾಡುತ್ತಿರುವುದು ತುಂಬಾ ಮಹತ್ವ ಪಡೆದುಕೊಳ್ಳುತ್ತದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬದುಕು-ಸಾಧನೆ ಕುರಿತು ಉಜಿರೆಯ ಎಸ್. ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ.ಎ ಅವರು ಉಪನ್ಯಾಸ ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯುಳ್ಳ ಯೋಜನೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು ಇಂದಿನ ಆಡಳಿತ ವ್ಯವಸ್ಥೆಗಳಿಗೆ ಮಾರ್ಗದರ್ಶಿಯಾಗಿವೆ. ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಮೂಲಕ ಏಷ್ಯಾದಲ್ಲಿಯೇ ಬೆಂಗಳೂರು ನಗರದ ಮೂಲಕ ಮೊಟ್ಟಮೊದಲ ವಿದ್ಯುತ್ ದೀಪ ಬೆಳಗಿಸಿದ ಕೀರ್ತಿ ಒಡೆಯರ್ ಅವರಿಗೆ ಸಲ್ಲುತ್ತದೆ. ಕೇವಲ ಒಣಬೇಸಾಯವನ್ನು ಅವಲಂಬಿಸಿ ಕೃಷಿಯಲ್ಲಿ ಹಿಂದುಳಿದಿದ್ದ ಭೂಮಿಯನ್ನು ಕೆ.ಆರ್‌.ಎಸ್‌ ಜಲಾಶಯದ ಮೂಲಕ ಸಂಪತ್ಭರಿತ ನಾಡನ್ನಾಗಿ ಪರಿವರ್ತಿಸಿ ಈ ನಾಡಿಗೆ ಚಿರಋಣಿಯಾಗಿದ್ದಾರೆ. ರಾಜರಾಗಿ ಅರಮನೆಯಲ್ಲಿ ಜನಿಸಿದ್ದರೂ ಕೂಡ ಶ್ರೀಸಾಮಾನ್ಯನಾಗಿ ನಿಸ್ವಾರ್ಥ ಸಮಾಜಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈದ್ಯಕೀಯದಂತಹ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದು ಕನ್ನಡ ನಾಡಿನಲ್ಲಿ ನವ ಮನ್ವಂತರ ಸೃಷ್ಟಿಸಿದ್ದು ಒಡೆಯರ್ ಅವರ ಈ ಕೊಡುಗೆ ವಿಶ್ವದಲ್ಲಿಯೇ ಮಾದರಿಯಾಗಿದೆ. ಸ್ವಾತಂತ್ರ್ಯ ಪೂರ್ವ ಭಾರತದ ಅವರ ಆಡಳಿತದಲ್ಲಿ ಮಹಾರಾಜ ಶಿಕ್ಷಣ ಸಂಸ್ಥೆ ಎಂಬ ವಿದ್ಯಾಲಯಗಳ ಮೂಲಕ ಸಮಾಜದ ಎಲ್ಲರಿಗೂ ಶಿಕ್ಷಣ ದೊರಕಿಸಿಕೊಟ್ಟದ್ದು ಆಧುನಿಕ ಭಾರತಕ್ಕೆ ಒಡೆಯರ್ ಅವರು ಬರೆದ ಶ್ರೇಷ್ಠ ಮುನ್ನುಡಿಯಾಗಿದೆ. ಒಡೆಯರ್ ಅವರ ವ್ಯಕ್ತಿತ್ವವನ್ನು ವಿದ್ಯಾರ್ಥಿ ಜೀವನದಲ್ಲಿಯೇ ತಿಳಿದುಕೊಂಡು ಉತ್ತಮ ವ್ಯವಸ್ಥೆ ರೂಪಿಸುವಲ್ಲಿ ಇಂದಿನ ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಡಬ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸೇಸಪ್ಪ ರೈ ಅವರು ಮಾತನಾಡುತ್ತಾ ಇಂದಿನ ಯುವಪೀಳಿಗೆಯು ನಮ್ಮ ಪರಂಪರೆಯ ಐತಿಹಾಸಿಕ ವ್ಯಕ್ತಿಗಳು ಕಟ್ಟಿಕೊಟ್ಟ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕಾದದು ಇಂದಿನ ಕಾಲದ ಮಹತ್ವದ ಜವಾಬ್ದಾರಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಹುಮುಖಿ ವ್ಯಕ್ತಿತ್ವದ ಕ್ರಿಯಾಶೀಲ ಕಾರ್ಯಗಳು ಇಂದಿನ ವಿದ್ಯಾರ್ಥಿಗಳಲ್ಲಿ ಮರುಹುಟ್ಟು ಪಡೆದುಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಅನೇಕ ಹೊಸ ಯೋಜನೆಗಳಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯೂ ಕನ್ನಡದ ಬದುಕಿನ ಅಸ್ತಿತ್ವದ ದೃಷ್ಟಿಯಿಂದ ಮಹತ್ವದ್ದಾಗಿದೆ. 109 ವರ್ಷಗಳ ಹಿಂದೆ ಸ್ಥಾಪನೆಯಾದ ಸಾಹಿತ್ಯ ಪರಿಷತ್ತು ಇಂದು ರಾಜ್ಯ, ಜಿಲ್ಲೆ, ತಾಲೂಕುಗಳಷ್ಟೇ ಅಲ್ಲದೆ ಹೊರದೇಶಗಳಲ್ಲಿಯೂ ಕೂಡ ವಿಸ್ತರಿಸಿ ಕನ್ನಡ ಸಾಹಿತ್ಯ ಪರಿಷತ್ತು ವಿಸ್ತಾರವಾಗಿ ಬೆಳೆದಿದೆ. ಈ ಹಿನ್ನಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮಗೆ ಪ್ರಾತಃಸ್ಮರಣೀಯರಾಗಿದ್ದು ಅವರ ಆಶಯದಂತೆ ಇಂದು ಅತಿ ಹೆಚ್ಚು ಕಾರ್ಯಯೋಜನೆಗಳನ್ನು ಆಯೋಜಿಸಿ ಕನ್ನಡ ಸೇವೆ ಮಾಡುತ್ತ ಕ್ರೀಯಾಶೀಲವಾಗಿದೆ. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿಗೆ ಬರುವುದಷ್ಟೇ ಮುಖ್ಯವಲ್ಲ ವಿದ್ಯಾರ್ಥಿಗಳಿದ್ದಲ್ಲಿಯೇ ಸಾಹಿತ್ಯ ಪರಿಷತ್ತು ಹೋಗಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ಅನೇಕ ವಿದ್ಯಾರ್ಥಿಗಳು ಸಾಹಿತ್ಯದ ಒಡನಾಟದಿಂದ ಓದು ಬರಹಗಳ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಂಡಿದ್ದಷ್ಟೇ ಅಲ್ಲದೇ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಅಭಿರುಚಿಯೊಂದಿಗೆ ಸಾಹಿತ್ಯದ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನೆಲ್ಯಾಡಿಯ ಉದ್ಯಮಿಗಳಾದ ಸತೀಶ್ ದುರ್ಗಾಶ್ರೀ ಅವರು ಅತಿಥಿಗಳಾಗಿ ಕಾರ್ಯಕ್ರಮ ಕುರಿತು ಮಾತನಾಡುತ್ತಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವರ ಸೇವೆ ಅವರ ಯೋಜನೆಗಳು ಹಾಗೂ ಸರ್ವರಿಗೂ ಶಿಕ್ಷಣವನ್ನು ದೊರಕಿಸಿಕೊಡುವ ಅವರ ಪ್ರಯತ್ನ ಸ್ಮರಿಸುವಂಥದ್ದು. ಅವರ ಆಶಯದಂತೆ ಇಂದಿನ ಮಕ್ಕಳು ಒಳ್ಳೆಯ ಪ್ರಜೆಗಳಾಗಿ ರೂಪಗೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನೂರಂದಪ್ಪ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಭವ್ಯಶ್ರೀ ಮತ್ತು ಭಾರತಿ ತಂಡದವರು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಪಾವನಾ ರೈ ಅವರು ವಂದಿಸಿದರು. ಚಂದ್ರಕಲಾ ಬಿ. ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here