ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಪೆರಾಬೆ ಎಂಬಲ್ಲಿ ಜೂ. 5ರಂದು ಮಧ್ಯಾಹ್ನ ಅಬ್ಬರಿಸಿದ ಸಿಡಿಲು-ಮಿಂಚು 2 ಮನೆಯ ಮೇಲೆ ಬಡಿದಿದ್ದು, 2 ಮನೆಗಳು ಭಾಗಶಃ ಹಾನಿಗೀಡಾಗಿದೆ. ಮನೆಯೊಂದರ ಮಾಲಕ ಗಾಯಗೊಂಡಿದ್ದು, ಗಾಯಾಳುವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೆರಾಬೆಯ ನಿವಾಸಿ ಬಿ.ಟಿ. ಸುಲೈಮಾನ್ ಎಂಬವರ ಪುತ್ರ ಬಿ.ಟಿ. ಸಂಶುದ್ದೀನ್ ಎಂಬವರ ಮನೆಗೆ ಮತ್ತು ಅವರ ಸಹೋದರ ಬಿ.ಟಿ. ಕರೀಂ ಎಂಬವರ ಮನೆಯ ಮೇಲೆ ಸಿಡಿಲು ಬಡಿದಿದೆ. ಈ ಪೈಕಿ ಸಂಶುದ್ದೀನ್ ತನ್ನ ಮನೆಯ ಒಳಗಿನ ವರಾಂಡದಲ್ಲಿ ಇದ್ದವರಿಗೆ ಸಿಡಿಲು ಬಡಿದಿದ್ದು, 2 ಕೈಗಳಿಗೆ ಗಾಯವಾಗಿದೆ. ಇವರನ್ನು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿ ಬಳಿಕ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮನೆಯ ಇನ್ನೊಂದು ಕೊಠಡಿಯಲ್ಲಿದ್ದ ಬಿ.ಟಿ. ಸಂಶುದ್ದೀನ್ ಅವರ ತಾಯಿ, ಪತ್ನಿ ಮತ್ತು ಈರ್ವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿ.ಟಿ. ಕರೀಂ ಮನೆಯಲ್ಲಿ ಯಾರೂ ಇಲ್ಲದೆ, ಮನೆಗೆ ಬೀಗ ಹಾಕಲಾಗಿದ್ದು, ಹೀಗಾಗಿ ಇವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
2 ಮನೆಗಳಿಗೂ ಅಪಾರ ಹಾನಿ:
ಸಿಡಿಲು ಬಡಿದ ಅಬ್ಬರಕ್ಕೆ ಬಿ.ಟಿ. ಸಂಶುದ್ದೀನ್ ಅವರ ಮನೆಯ ಗೋಡೆ ಮತ್ತು ನೆಲ ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್ ಸಂಪರ್ಕದ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದೇ ರೀತಿಯಲ್ಲಿ ಬಿ.ಟಿ. ಕರೀಂ ಅವರ ಮನೆಯಲ್ಲಿಯೂ ಹಾನಿ ಸಂಭವಿಸಿದೆ.
ಗೃಹಪ್ರವೇಶ ನಡೆದ ದಿನವೇ ಅವಘಡ:
ಬಿ.ಟಿ. ಸಂಶುದ್ದೀನ್ ಅವರು ಹೊಸದಾಗಿ ಮನೆ ನಿರ್ಮಿಸಿದ್ದು, ಸರಳ ರೀತಿಯಲ್ಲಿ ಇಂದು ಜೂ. 5ರಂದು ಬೆಳಗ್ಗೆ ಗೃಹ ಪ್ರವೇಶ ಮಾಡಿದ್ದರು. ಮನೆಗೆ ಪ್ರವೇಶ ಮಾಡಿದ ದಿನದಂದೇ ನಡೆದ ಅವಘಡದಿಂದ ಮನೆಯವರು ತೀರಾ ಆಘಾತಕ್ಕೆ ಒಳಗಾಗುವಂತಾಗಿದೆ.