ಪುತ್ತೂರು:ಮಾಯ್ ದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಜೂ.8ರಂದು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಶಾಲಾ ಸಂಚಾಲಕ ಫಾ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಶಾಲೆಗೆ ಬರುವುದು ಜೀವನ ರೂಪಿಸಲು. ಶಾಲೆಯಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ದೀಪದಂತೆ ಬೆಳಗಿ ತಮ್ಮ ಹೆತ್ತವರಿಗೆ, ಶಿಕ್ಷಕರಿಗೆ ಮತ್ತು ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕು. ಪ್ರತಿ ದಿನವು ಹೊಸತನದಿಂದ ಕೂಡಿರಬೇಕು ಎಂದು ಸಂದೇಶ ನೀಡಿ ಆಶೀರ್ವದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮುಕ್ಕ ಚರ್ಚ್‌ನ ಧರ್ಮಗುರು ಫಾ|ಸ್ಟ್ಯಾನಿ ಪಿಂಟೊರವರು ಮಾತನಾಡಿ, ನಮ್ಮಲ್ಲಿ ಆತ್ಮ ವಿಶ್ವಾಸವಿರಬೇಕು ಆದರೆ ಅತಿಯಾದ ಆತ್ಮ ವಿಶ್ವಾಸವು ಅಪಾಯಕಾರಿ. ಗುರಿ ಮುಟ್ಟುವ ಛಲವಿರಬೇಕು. ಈ ಛಲದ ಹಾದಿಯ ಸಾಧನೆ ನಿಮ್ಮ ಈ ಶೈಕ್ಷಣಿಕ ವರ್ಷದ ಸಫಲತೆಗೆ ಕಾರಣ ಎಂದು ಹೇಳಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ಮಾತನಾಡಿ, ಎಲ್ಲರ ಸತತ ಪ್ರಯತ್ನಗಳಿಂದ 100 ಶೇಕಡಾ ಫಲಿತಾಂಶವು ಈ ಶಾಲೆಗೆ ಲಭಿಸಿದೆ ಎಂದು ತಿಳಿಸಿದರು. ಕಳೆದ ಸಾಲಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ, ಶಾಲಾ ಹಿರಿಯ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊರವರು ಪ್ರಾಸ್ತವಿಕವಾಗಿ ಮಾತನಾಡಿದರು. ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಹಾಗೂ ಗಣ್ಯರನ್ನು ಶಾಲಾ ವಾದ್ಯವೃಂದದೊಂದಿಗೆ ಬರಮಾಡಿಕೊಳ್ಳಲಾಯಿತು. ಸಮಾರಂಭವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಎಲ್ಲಾ ಪ್ರತಿಭಾನ್ವಿತರಿಗೆ ಸ್ಮರಣಿಕ ನೀಡಿ ಗೌರವಿಸಿದರು.
ಲೆನಿಟಾ ಮೋರಸ್ ವಂದಿಸಿದರು. ಶಿಕ್ಷಕಿ ಡೋರಿನ್ ವಿಲ್ಮಾ ಲೋಬೋರವರು ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಹೆಸರುಗಳನ್ನು ವಾಚಿಸಿದರು. ಶಿಕ್ಷಕಿ ರೂಪ ಡಿ’ಕೋಸ್ಟರವರು ಕಾರ್ಯಕ್ರಮ ನಿರೂಪಿಸಿದರು.