ರೂ.1,48,159 ನಿವ್ವಳ ಲಾಭ, ಬೋನಸ್ 0.66 ಪೈಸೆ, ಶೇ.10 ಡಿವಿಡೆಂಡ್
ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ, ಕುಟ್ಟಿನೋಪಿನಡ್ಕ, ಕುರಿಯ ಗ್ರಾಮದ ಡಿಂಬ್ರಿಬೈಲು, ಆರ್ಯಾಪು ಗ್ರಾಮದ ಸಂಟ್ಯಾರು, ಕೂರೇಲು ವ್ಯಾಪ್ತಿಗೆ ಒಳಪಟ್ಟ ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಜು.9 ರಂದು ಸಂಘದ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ಪರ್ಪುಂಜ ರಾಜ್ ಕಾಂಪ್ಲೆಕ್ಸ್ನಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು 2023-24 ನೇ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ವರದಿ ವರ್ಷದಲ್ಲಿ ಸಂಘದಲ್ಲಿ 125 ಮಂದಿ ಸದಸ್ಯರಿದ್ದು ವರ್ಷಾಂತ್ಯಕ್ಕೆ ರೂ.37300 ಪಾಲು ಬಂಡವಾಳವಿರುತ್ತದೆ ಎಂದು ತಿಳಿಸಿದ ಅವರು, ಸಂಘದ ವರದಿ ವರ್ಷದಲ್ಲಿ ಹಾಲು ವ್ಯಾಪಾರ ಮತ್ತು ಪಶು ಆಹಾರ ವ್ಯಾಪಾರದಲ್ಲಿ ಹಾಗೂ ಇತರ ಆದಾಯ ಸೇರಿ ರೂ.5,47,907.26 ಲಾಭ ಗಳಿಸಿ ಇದರಲ್ಲಿ ಆಡಳಿತ ವೆಚ್ಚ ಮತ್ತು ಇತರ ಖರ್ಚು ರೂ.3,97,747.65 ಕಳೆದು ರೂ.1,48,159.61 ನಿವ್ವಳ ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಸಂಘದ ಗಳಿಸಿದ ನಿವ್ವಳ ಲಾಭದ ಅನುಗುಣವಾಗಿ ಸದಸ್ಯರಿಗೆ ಲೀಟರ್‌ಗೆ 66 ಪೈಸೆ ಬೋನಸ್ ಹಾಗೂ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.
ಸಂಘದಲ್ಲಿ ಒಕ್ಕೂಟದಿಂದ ತರಿಸಿದ ಜಂತು ಹುಳದ ಮಾತ್ರೆಗಳನ್ನು ಸದಸ್ಯರ ಜಾನುವಾರುಗಳಿಗೆ ಉಚಿತವಾಗಿ ವಿತರಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ಕೊಡಲಾಗಿದೆ. ಸಂಘದ ಸದಸ್ಯರ 27 ಜಾನುವಾರುಗಳಿಗೆ ಒಕ್ಕೂಟದಿಂದ ವಿಮಾ ಯೋಜನೆಯನ್ನು ಮಾಡಿಕೊಡಲಾಗಿದೆ. ಯಶಸ್ವಿನಿ ಯೋಜನೆಯಡಿ 87 ಮಂದಿ ಸದಸ್ಯರಿಗೆ 23 ಯಶಸ್ವಿನಿ ಕಾರ್ಡ್ ನೀಡಲಾಗಿದೆ ಎಂದು ಕಾರ್ಯದರ್ಶಿ ಸರೋಜ ಆರ್.ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ|ಡಿ.ಆರ್ ಸತೀಶ್ ರಾವ್‌ರವರು ಮಾತನಾಡಿ, ಹಾಲಿನ ದರ ಹೆಚ್ಚಳದಲ್ಲಿ ಒಕ್ಕೂಟದ ಪಾತ್ರ ಯಾವುದೂ ಇಲ್ಲ ಇದು ಸರಕಾರದ ನಿರ್ಧಾರವಾಗಿದೆ. ಪ್ರಸ್ತುತ ಹಾಲಿನ ಉತ್ಪತ್ತಿ ದಿನಕ್ಕೆ 1ಕೋಟಿ 9 ಲೀಟರ್ ಇದೆ ಎಂದ ಅವರು ಹಾಲಿನ ಕ್ವಾಟಿಟಿಯನ್ನು ಹೆಚ್ಚಳ ಮಾಡಲಾಗಿದ್ದು ರೂ.2 ಜಾಸ್ತಿ ಮಾಡಿದ್ದರೂ ಪ್ಯಾಕೆಟ್‌ನಲ್ಲಿ 50ಎಂಎಲ್ ಹಾಲು ಹೆಚ್ಚುವರಿಯಾಗಿ ಗ್ರಾಹಕರಿಗೆ ಸಿಗುತ್ತಿದೆ ಎಂದು ತಿಳಿಸಿದರು. ಇತರೆ ಆಹಾರ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಹಿಂಡಿ ದರವೂ ಹೆಚ್ಚಾಗಿದೆ ಎಂದ ಅವರು, ಡೈರಿಯಿಂದ ಹೈನುಗಾರರಿಗೆ ಕೊಡುವ ಹಾಲಿನ ದರವು ದ.ಕದಲ್ಲೇ ಅತೀ ಹೆಚ್ಚು ಇದೆ ಎಂದು ತಿಳಿಸಿದರು.ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಎಸ್.ರವರು ಮಾತನಾಡಿ, ಹೈನುಗಾರರು ಗುಣಮಟ್ಟದ ಹಾಲನ್ನು ಸಂಘಕ್ಕೆ ಕೊಡುವ ಮೂಲಕ ಸಂಘದ ಅಭಿವೃದ್ದಿಯೊಂದಿಗೆ ತಾವು ಕೂಡ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು. ಸದಸ್ಯರೊಂದಿಗೆ ನಾನು ಜೊತೆಯಾಗಿರುತ್ತೇನೆ ಎಂದು ಹೇಳಿದರು.
ಬಹುಮಾನ ವಿತರಣೆ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದವರಲ್ಲಿ 13 ಸಾವಿರ ಲೀ.ಹಾಲು ಹಾಕಿದ ಕಿಶೋರ್ ಕುಮಾರ್ ಪ್ರಥಮ ಬಹುಮಾನ ಪಡೆದುಕೊಂಡರೆ, 12 ಸಾವಿರ ಲೀ.ಹಾಲು ಹಾಕಿದ ವಿನಯ ಕುಮಾರ್ ರೈ ದ್ವಿತೀಯ ಹಾಗೂ 4 ಸಾವಿರ ಲೀ.ಹಾಲು ಹಾಕಿದ ಉಮೇಶ್ ಪೂಜಾರಿ ತೃತೀಯ ಬಹುಮಾನ ಪಡೆದುಕೊಂಡರು. ಉಳಿದಂತೆ 3 ಸಾವಿರ ಲೀಟರ್‌ಗಿಂತ ಹೆಚ್ಚು ಹಾಲು ಹಾಕಿದ ಶ್ಯಾಮಸುಂದರ ರೈ ಕೊಪ್ಪಳ, ಕುಸುಮಾ, ನಾರಾಯಣ ಪೂಜಾರಿ,ವೀರಪ್ಪ ಮೂಲ್ಯ, ಚಂದ್ರಶೇಖರ ರೈ, ರಾಜೇಶ್ ಶೆಟ್ಟಿ, ರಾಮಣ್ಣ ಗೌಡ, ಸದಾಶಿವ, ಗೀತಾ ರೈ ಹಾಗೇ ಹಾಲು ಹಾಕುತ್ತಿರುವ ಸದಸ್ಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಬಾರಿಕೆ ನಾರಾಯಣ ರೈ, ಜೈರಾಜ್ ಭಂಡಾರಿ ಡಿಂಬ್ರಿ, ಮಿತ್ರದಾಸ ರೈ ಡೆಕ್ಕಳ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ, ಕಸ್ತೂರಿ ಟಿ.ಶೆಟ್ಟಿ ಕೂರೇಲು ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ಯಾಮ್ ಸುಂದರ ರೈ ಕೊಪ್ಪಳ ಸ್ವಾಗತಿಸಿದರು. ನಿರ್ದೇಶಕಿ ಶರಣಾಕ್ಷಿ ಆಳ್ವ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕ ವಂದಿಸಿದರು.ಹಾಲು ಪರೀಕ್ಷಕಿ ಬೇಬಿ ಪರ್ಪುಂಜ ಸಹಕರಿಸಿದ್ದರು.
ಯುವಕರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು: ಬೂಡಿಯಾರ್ ರಾಧಾಕೃಷ್ಣ ರೈ
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವಲ್ಲಿ ಒಕ್ಕೂಟ ಹಾಗೂ ಬ್ಯಾಂಕ್‌ನಿAದ ಬಹಳಷ್ಟು ಸಹಕಾರವನ್ನು ನೀಡಲಾಗುತ್ತಿದೆ. ಮೊದಲನೆಯದಾಗಿ ಯುವಕರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಸ್ವಾಭಿಮಾನಿಯಾಗಿ ಜೀವನ ನಡೆಸಲು ಹೈನುಗಾರಿಕೆ ಸಹಕಾರಿಯಾಗಿದೆ. ಇದು ಕೃಷಿಗೆ ಪೂರಕವಾಗಿರುವುದರಿಂದ ಹೈನುಗಾರಿಕೆಯೊಂದಿಗೆ ಕೃಷಿ ಅಭಿವೃದ್ಧಿ ಕೂಡ ಸಾಧ್ಯವಾಗುತ್ತದೆ. ಕೆಲಸದವರನ್ನು ಹೆಚ್ಚಾಗಿ ಅನುಕರಿಸದೇ ಸ್ವತಃ ಮನೆಯವರೇ ಕೆಲಸದಲ್ಲಿ ತೊಡಗಿಸಿಕೊಂಡಾಗ ಹೈನುಗಾರಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ಈಗಾಗಲೇ ಬಹಳಷ್ಟು ಯುವಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಲಾಭ ಕಂಡು ಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು.
ಇಂಜೆಕ್ಷನ್‌ನಿಂದ ಹೆಣ್ಣು ಕರು
ಹೈನುಗಾರರಿಗೆ ಗಂಡು ಕರುವಿನ ಬಗ್ಗೆ ಬಹಳಷ್ಟು ತಲೆನೋವು ಇತ್ತು. ಗಂಡು ಕರು ಹುಟ್ಟಿದರೆ ಏನು ಮಾಡೋದು ಎಂಬ ಚಿಂತೆ ಇತ್ತು. ಆದರೆ ಇದೀಗ ಹೆಣ್ಣು ಕರುವಿನ ಇಂಜೆಕ್ಷನ್ ಬಂದಿದ್ದು ಇದರಿಂದ ಶೇ.99 ರಷ್ಟು ಹೆಣ್ಣು ಕರುವೇ ಹುಟ್ಟುತ್ತದೆ. ಇದರ ಪ್ರಯೋಜನವನ್ನು ಹೈನುಗಾರರು ಪಡೆದುಕೊಳ್ಳಬೇಕು ಎಂದು ತಿಳಿಸಿದ ಡಾ| ಸತೀಶ್ ರಾವ್‌ರವರು, ಒಂದು ಇಂಜೆಕ್ಷನ್ ಬೆಲೆ 675 ಇದ್ದು ಇದರಲ್ಲಿ ಕೇಂದ್ರ ಸರಕಾರವು 425 ರೂ. ಸಬ್ಸಿಡಿ ಕೊಟ್ಟಿದ್ದು ಹೈನುಗಾರರು ಕೇವಲ 250 ರೂ. ಪಾವತಿಸಿದರೆ ಸಾಕಾಗುತ್ತದೆ ಎಂದು ತಿಳಿಸಿದರು.
ಜಾಗ ಬೇಕಾಗಿದೆ.
ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇರುವುದರಿಂದ ಪ್ರಸ್ತುತ ಇರುವ ಕಛೇರಿಯ ಸುತ್ತಮುತ್ತ 3ರಿಂದ5 ಸೆಂಟ್ಸ್ ಜಾಗ ಇದ್ದರೆ ಸಂಘಕ್ಕೆ ಬೇಕಾಗಿದೆ. ಇದರಲ್ಲಿ ಸ್ವಂತ ಕಟ್ಟಡ ಹಾಗೂ ಮಿಲ್ಕ್ ಪಾರ್ಲರ್ ಆರಂಭಿಸುವ ಯೋಜನೆ ಇದೆ ಎಂದು ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದರು.