ಪುತ್ತೂರು: 137 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ “ಸುದಾನ ವಿದ್ಯಾಸಂಸ್ಥೆ”ಗಳ ಉದಯವಾಗಿದ್ದು ಇದೀಗ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ‘ಸುದಾನ ಪದವಿ ಪೂರ್ವ ಕಾಲೇಜ್’ ಅನ್ನು ಪ್ರಾರಂಭಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.
ರಾಜ್ಯ ಸರಕಾರದ ಸ್ಪೀಕರ್ ಆಗಿರುವ ಯು.ಟಿ ಖಾದರ್‌ರವರು ನೂತನ ಸುದಾನ ಪದವಿ ಪೂರ್ವ ಕಾಲೇಜ್‌ನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ|ವಿಜಯ ಹಾರ್ವಿನ್‌ರವರು ವಹಿಸಿಕೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.