ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಒಂದಾದ “ಆಟಿ ಅಮಾಸೆದ ಪೊಲಬು” ಕಾರ್ಯಕ್ರಮ ಆ.4ರಂದು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಸುಭಾಷ್ ರೈ ಕಡಮಜಲು ನೆರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್.ಗಟ್ಟಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಆರ್ಕೆ ಲ್ಯಾಡರ್ಸ್ನ ಕೇಶವ, ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ವೈದ್ಯ ಡಾ.ನಿರಂಜನ್ ರೈ, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಪಾಲ್ಗೊಳ್ಳಲಿದ್ದಾರೆ.
ಆಟಿ ಆಮಾವಾಸ್ಯೆ ಪ್ರಯುಕ್ತ ತುಳುನಾಡಿನ 72 ಬಗೆಯ ವಿಶೇಷ ಖಾದ್ಯಗಳನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ಪರಿಚಯಿಸಿ ಅದನ್ನು ಸವಿಯುವ ಅವಕಾಶವನ್ನು ಮಾಡಲಾಗಿದೆ. ನೆಲನೆಲ್ಲಿ ಕಷಾಯ, ಪಾಲೆಕೆತ್ತೆ ಕಷಾಯ, ಕುಂಟೋಲು ಕಾಪಿ, ಕಡೀರಬೇರಿನ ಕಷಾಯ, ಪುನರ್ಪುಳಿ ಸಾರು, ನುಗ್ಗೆ ಸೊಪ್ಪು ಸಾರು, ಚೀಮುಳ್ಳು ಸಾರು, ಲಿಂಬೆಹಣ್ಣು ಸಾರು, ಜಾರಿಗೆ ಪುಳಿ ಸಾರು, ಮಂತು ಪುಳಿ ಸಾರು, ನಾಚಿಕೆ ಮುಳ್ಳಿನ ಬೇರಿನ ಕಷಾಯ, ಅಂಬಡೆ ಉಪ್ಪಿನಕಾಯಿ, ಕರಂಡೆಕಾಯಿ ಉಪ್ಪಿನಕಾಯಿ, ದಾರೆಪುಳಿ ಉಪ್ಪಿನಕಾಯಿ, ಬಿಂಪುಳಿ ಉಪ್ಪಿನಕಾಯಿ, ಕೆಸುಎಲೆ ಚಟ್ನಿ, ನೇಂದ್ರ ಬಾರೆ ಚಿಪ್ಸ್, ಪುದೀನ ಸೊಪ್ಪು ಚಟ್ನಿ, ಪೂಂಬೆ ಚಟ್ನಿ, ಸೇರೆಕೊಡಿ ಚಟ್ನಿ, ತಿಮರೆ ಚಟ್ನಿ, ಕುಡು ಚಟ್ನಿ, ಉಪ್ಪಡ್ ಪಚ್ಚಿಲ ಉಂಡ್ಲುಂಗ, ಪೆಲಕ್ಕಾಯಿದ ಗೋಳಿಬಜೆ, ಮರ ಕೆರೆಂಗ್ ಚಿಪ್ಸ್, ಬಾರೆದ ಕಾಯಿದ ಉಪ್ಪುಕರಿ ಸಹಿತ 72 ಬಗೆಯ ಖಾದ್ಯಗಳಿವೆ. ವಿದ್ಯಾರ್ಥಿಗಳ ಪೋಷಕರಿಗೆ ತುಳುನಾಡಿನ ವಿವಿಧ ಜಾನಪದ ಸ್ಪರ್ಧೆಗಳನ್ನು ನಡೆಸಲಾಗುವುದು ಹಾಗೂ ವಿದ್ಯಾರ್ಥಿಗಳಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.