





ಸಾಧಿಸಬೇಕೇ ವಿನಃ ಪಶ್ಚಾತ್ತಾಪ ಪಡುವಂತಾಗಬಾರದು: ರಾಜಶ್ರೀ ನಟ್ಟೋಜ
ಪುತ್ತೂರು: ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಪೋಷಕರ ಸಂಪೂರ್ಣ ಸಕಾರಾತ್ಮಕ ಸಹಕಾರ ಹಾಗೂ ಪ್ರೋತ್ಸಾಹ ಸಿಕ್ಕಿದಾಗ ವಿದ್ಯಾರ್ಥಿಗಳು ಯಶಸ್ಸು ಪಡೆಯುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಆದರೆ ವಿದ್ಯಾರ್ಥಿಗಳದ್ದು ಎಪ್ಪತ್ತೈದು ಪ್ರತಿಶತ ಪ್ರಯತ್ನ ಮತ್ತು ಉಳಿದವರದ್ದು ಇಪ್ಪತ್ತೈದು ಪ್ರತಿಶತ ಎನ್ನುವುದನ್ನು ಅರಿತು ವಿದ್ಯಾರ್ಥಿಗಳು ಶ್ರದ್ದೆ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.
ಕೇವಲ ಪಾಠ, ಪರೀಕ್ಷೆಗಳು ಮಾತ್ರವಲ್ಲದೆ ಸ್ಪರ್ಧೆಗಳು, ಆಟೋಟ, ಸಾಂಸ್ಕೃತಿಕ, ದೇಶಭಕ್ತಿ ಆಧಾರಿತ ಕಾರ್ಯಕ್ರಮಗಳೇ ಮೊದಲಾದ ಕಾರ್ಯಕ್ರಮಗಳು ಜೊತೆ ಜೊತೆಗೆ ನಡೆದಾಗ ವಿದ್ಯಾರ್ಥಿಗಳಿಗೆ ಓದಿನಲ್ಲೂ ಆಸಕ್ತಿ ಸಿಗುವುದು. ಸಕಾಲಕ್ಕೆ ಸ್ಪರ್ಧಾತ್ಮಕ ಹಾಗೂ ಇಲಾಖಾ ಪರೀಕ್ಷೆಗಳಿಗೆ ಸಿದ್ದರಾಗುವ ಬಗೆಗೆ ಯೋಚನೆ ನಡೆಸಬೇಕು. ಉತ್ತಮ ಅಂಕ ಪಡೆದು ಗುರಿ ಸಾಧಿಸಬೇಕೇ ವಿನಃ ಅನಂತರ ಪಶ್ಚಾತ್ತಾಪ ಪಡುವಂತಾಗಬಾರದು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕರ್ನಾಟಕದಲ್ಲಿ ಯೋಗವನ್ನು ಪಠ್ಯದಲ್ಲಿ ಮೊದಲು ಅಳವಡಿಸಿಕೊಂಡ ಸಂಸ್ಥೆ ಅಂಬಿಕಾ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್, ಜೆಇಇ ಮೊದಲಾದವುಗಳಿಗೆ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸಿದ್ದರಾಗಬೇಕಾಗಿದೆ ಎಂದರಲ್ಲದೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರ ಮಹತ್ವ, ಮಾಡಬೇಕಾದ ಸಂಕಲ್ಪ ಮೊದಲಾದವುಗಳ ಬಗ್ಗೆ ತಿಳಿಸಿಕೊಟ್ಟರು.
ಮಕ್ಕಳ ಮೇಲೆ ಪೋಷಕರು ಪ್ರೀತಿಯ ಜೊತೆಗೆ ಒಂದು ಸಂದೇಹದ ಕಣ್ಣು ಇಟ್ಟಿರಬೇಕು. ನಮ್ಮೆಲ್ಲಾ ವ್ಯವಹಾರಗಳಿಗಿಂತ ಮುಖ್ಯ ನಮ್ಮ ಮಕ್ಕಳು ಎನ್ನುವುದನ್ನು ಅರಿತುಕೊಂಡು ಮಕ್ಕಳ ಜೊತೆಗೆ ಇರಬೇಕು. ಬೈಯುವುದಕ್ಕಿಂತ ಪ್ರೀತಿಯಿಂದ ಮಕ್ಕಳ ಮನ ಪರಿವರ್ತನೆ ಮಾಡಿ ಒಳ್ಳೆಯ ಫಲಿತಾಂಶ ಪಡೆಯುವಂತೆ ಮಕ್ಕಳನ್ನು ಉತ್ತೇಜಿಸುವುದು ಪೋಷಕರ ಕರ್ತವ್ಯ ಎಂದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ ಸಭೆಯ ಉದ್ದೇಶ ತಿಳಿಸಿಕೊಟ್ಟರು. ಪೋಷಕರು, ಶಿಕ್ಷಕರು ಆಡಳಿತ ಮಂಡಳಿಯ ಮಧ್ಯೆ ಮುಕ್ತ ಮಾತುಕತೆ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೂ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.















