ಪುತ್ತೂರು:ಚೆಲ್ಯಡ್ಕದ ಮುಳುಗು ಸೇತುವೆಗೆ ಕಳೆದ ಎರಡು ದಿನಗಳ ಹಿಂದ ಲೋಕೋಪಯೋಗಿ ಇಲಾಖೆಯಿಂದ ದುರಸ್ಥಿಗೊಳಿಸಿ, ಅಳವಡಿಸಿದ ಸ್ಲಾಬ್ ಒಂದೇ ದಿನದ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದೀಗ ಮತ್ತೆ ಸೇತುವೆ ಮೇಲೆ ಹೊಂಡ ಬಿದ್ದಿದೆ. ಈ ಬೃಹತ್ ಹೊಂಡವನ್ನು ಬೆಟ್ಟಂಪಾಡಿ ಗ್ರಾ.ಪಂ ನೇತೃತ್ವದಲ್ಲಿ ಸ್ಥಳೀಯ ಯುವಕ ಸಹಕಾರದೊಂದಿಗೆ ದುರಸ್ಥಿಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶಿಥಿಲಗೊಂಡಿರುವ ಚೆಲ್ಯಡ್ಕ ಸೇತುವೆಯನ್ನು ಪರಿಶೀಲನೆ ನಡೆಸಿ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ರವರು ಮುನ್ನೆಚ್ಚರಿಕಾ ಕ್ರಮವಾಗಿ ಸೇರುವ ಮೇಲೆ ಘನ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರು. ಈ ಸೇತುವೆ ಮೇಲೆ ಗುಂಡಿ ಬಿದ್ದಿದ್ದು ಅದನ್ನು ಇತ್ತೀಚೆಗೆ ದುರಸ್ತಿಪಡಿಸಲಾಗಿದ್ದರೂ ದುರಸ್ತಿ ಕಾಮಗಾರಿ ಮಾಡುವಾಗ ಕಾಂಕ್ರೀಟ್ ಹಾಕದೆ ಕೇವಲ ಜಲ್ಲಿ ಹಾಕಿ ಸೇತುವೆ ಮೇಲಿನ ಗುಂಡಿ ಮುಚ್ಚಿದ್ದರು. ಇದು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಮತ್ತೆ ಗುಂಡಿ ಬಿದ್ದು ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾ.ಪಂನ ಬೆಟ್ಟಂಪಾಡಿ ಗ್ರಾ. ಪಂ. ಅಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ.ಜಿ, ಪಿಡಿಒ ಸೌಮ್ಯ ಹಾಗೂ ಸಿಬ್ಬಂದಿ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂಧಿಸಿದ ಕಾರ್ಯನಿರ್ವಹಣಾಧಿಕಾರಿಯವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸ್ಲ್ಯಾಬ್ ಅಳವಡಿಸಿ ದುರಸ್ಥಿಪಡಿಸಲಾಗಿತ್ತು. ಇದು ಒಂದೇ ದಿನ ಎಡೆಬಿಡದೆ ಸುರಿದ ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ.
ಬಿಟ್ಟಿ ಸಂದಾಯ-ಸ್ಥಳೀಯರ ಆರೋಪ
ಗುಂಡಿ ಬಿದ್ದ ಸೇತುವೆಗೆ ಲೋಕೋಪಯೋಗಿ ಇಲಾಖೆಯವರು ಕಾಂಕ್ರೀಟ್ ಹಾಕದೇ ಕೇವಲ ಜಲ್ಲಿ ಹಾಕಿರುವುದರಿಂದ ಮಳೆ ನೀರಿನ ರಭಸಕ್ಕೆ ಅವೆಲ್ಲವೂ ಕೊಚ್ಚಿ ಹೋಗಿದೆ. ಕಾಂಕ್ರೀಟ್ ಹಾಕಿ ಭದ್ರಪಡಿಸಿಬೇಕಾಗಿದ್ದ ಅವರು ಗುಂಡಿಗೆ ಕೇವಲ ಜಲ್ಲಿ ಹಾಕಿ ಬಿಟ್ಟಿ ಸಂದಾಯ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರಿಂದ ದುರಸ್ಥಿ:
ಇಲಾಖೆಯ ಮುಖಾಂತರ ಎರಡು ಬಾರಿ ದುರಸ್ಥಿಗೊಳಿಸಿದ ಸೇತುವೆಯ ಮೇಲೆ ಮತ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದನ್ನು ಬೆಟ್ಟಂಪಾಡಿ ಗ್ರಾ.ಪಂನ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಹಕಾರದೊಂದಿಗೆ ದುರಸ್ಥಿಗೊಳಿಸಿದರು. ಹರೀಶ್ ಗೌಡ ಗುಮ್ಮಟೆಗದ್ದೆ, ಪುರುಷೋತ್ತಮ ಗುಮ್ಮಟೆಗದ್ದೆ, ಯೋಗೀಶ್ ಕಲ್ಪಣೆ, ಚರಣ್ ಗುಮ್ಮಟೆಗದ್ದೆ, ರಾಮಚಂದ್ರ ಸರಳಿಕಾನ, ಅಶೋಕ್ ಗುಮ್ಮಟೆಗದ್ದೆ, ಲೋಕನಾಥ ಚೆಲ್ಯಡ್ಕ, ವಿಠಲ ಪೂಜಾರಿ ಗುಮ್ಮಟೆಗದ್ದೆ, ಧನುಷ್ ಚೆಲ್ಯಡ್ಕ ದುರಸ್ಥಿ ಕಾರ್ಯದಲ್ಲಿ ಸಹಕರಿಸಿದರು. ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯ ಪ್ರಕಾಶ್ ರೈ ಬೈಲಾಡಿ, ಪಿಡಿಓ ಸೌಮ್ಯ, ಸಿಬಂದಿ ಸಂದೀಪ್ ಉಪಸ್ಥಿತರಿದ್ದರು.