ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯಿಂದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

0

ಪುತ್ತೂರು: ನೋವಾ ಐವಿಎಫ್ ಫರ್ಟಿಲಿಟಿ ಇದರ ನೇತೃತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿ ಇವುಗಳ ಸಹಯೋಗದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆ.3 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ, ಮಕ್ಕಳ ತಜ್ಞರಾದ ಡಾ.ಕೃಷ್ಣಾನಂದ ಕೆ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮದುವೆಯಾದ ದಂಪತಿಗಳು ತಮ್ಮ ಮಕ್ಕಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ದಾಂಪತ್ಯ ಜೀವನದಲ್ಲಿ ಮಕ್ಕಳನ್ನು ಹೊಂದುವುದು ಅದು ಭಾಗ್ಯವೇ ಸರಿ. ಆದರೆ ಕೆಲವು ದಂಪತಿಗೆ ಕೆಲವೊಂದು ಕಾರಣಗಳಿಗಾಗಿ ಮಕ್ಕಳು ಆಗದೇ ಇರಬಹುದು. ಸೂಕ್ತ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ಈ ನಿಟ್ಟಿನಲ್ಲಿ ಇಂತಹ ತಪಾಸಣಾ ಶಿಬಿರಗಳು ಬಹಳ ಉಪಯುಕ್ತವೆನಿಸುವುದು ಎಂದರು.


ಅಧ್ಯಕ್ಷತೆ ವಹಿಸಿದ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್‌ರವರು ಮಾತನಾಡಿ, ನಮ್ಮ ಆಹಾರ ಪದ್ಧತಿ, ನಾವು ಸೇವಿಸುವ ಮದ್ದುಗಳಿಂದಾಗಿ ಕೆಲವೊಮ್ಮೆ ಗರ್ಭ ಧರಿಸಲು ಸಾಧ್ಯವಾಗದೇ ಇರಬಹುದು. ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಮಕ್ಕಳಾಗದ ಸಂದರ್ಭದಲ್ಲಿ ತಜ್ಞ ವೈದ್ಯರೊಂದಿಗೆ ಕೌನ್ಸಿಲಿಂಗ್ ಮಾಡುವ ಅಗತ್ಯವಿದ್ದು ಈ ನೋವಾ ಐವಿಎಫ್ ಫರ್ಟಿಲಿಟಿರವರೊಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು ಸಂತಾನ ಭಾಗ್ಯ ಕರುಣಿಸುವಂತಾಗಲಿ ಎಂದರು.


ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ಸಹಾಯಕ ವೈದ್ಯೆ ಡಾ.ಪರ್ಲ್‌ರವರು ಮಾತನಾಡಿ, ಮದುವೆಯಾದ ಮಹಿಳೆಯರಿಗೆ ಯಾಕೆ ಪ್ರೆಗ್ನೆನ್ಸಿ ಆಗ್ತಾ ಇಲ್ಲ ಎಂಬುದನ್ನು ನಾವು ಮೊದಲು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ನೋವಾ ಐವಿಎಫ್ ಫರ್ಟಿಲಿಟಿಯಲ್ಲಿ ಈ ಬಗ್ಗೆ ಬೇಕಾದ ಚಿಕಿತ್ಸಾ ವಿಧಾನಗಳಿವೆ. ದಂಪತಿಗಳು ವರ್ಷಾನುಗಟ್ಟಲೇ ಕಾಯದೆ ಮಕ್ಕಳಾಗುವ ಬಗ್ಗೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿಕೊಳ್ಳಬೇಕು ಮಾತ್ರವಲ್ಲ ದಂಪತಿಗಳಿಗೆ ಈ ಚಿಕಿತ್ಸೆ ಬಗ್ಗೆ ನಂಬಿಕೆ ಹಾಗೂ ತಾಳ್ಮೆ ಬೇಕಾಗಿದೆ ಎಂದರು.


ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಸ್ಮಿತಾ ಕೆ., ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ಟ, ಉಪ್ಪಿನಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಕೇಶವ್, ನಿಕಟಪೂರ್ವ ಅಧ್ಯಕ್ಷ ಜಗದೀಶ್ ನಾಯಕ್ ಉಪಸ್ಥಿತರಿದ್ದರು. ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ಸೈಕಾಲಾಜಿಕಲ್ ಕೌನ್ಸಿಲರ್ ದೀಕ್ಷಿಜಾ ವಂದಿಸಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮುರಳಿ, ಚರಣ್ ಕುಮಾರ್, ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮಂಜುನಾಥ್, ಹರ್ಷರವರು ಸಹಕರಿಸಿದರು.


20ಕ್ಕೂ ಮಿಕ್ಕಿ ಫಲಾನುಭವಿಗಳು ಭಾಗಿ..
ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ,ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು, ಪಿಸಿಓಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್‌ನಂತಹ ಸಮಸ್ಯೆಯಿದ್ದ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಫಲಾನುಭವಿಗಳು ತಜ್ಞರಿಂದ ಸೂಕ್ತ ಸಲಹೆ-ಸೂಚನೆ ಪಡೆದುಕೊಂಡರು.

LEAVE A REPLY

Please enter your comment!
Please enter your name here