ಸಿಶೇ ಕಜೆಮಾರ್
ಒಂದು ಕಾಲದಲ್ಲಿ ತುಳುವರಿಗೆ ಕಷ್ಟ ಮತ್ತು ಇಷ್ಟದ ತಿಂಗಳು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದ ಆಟಿ ತಿಂಗಳು. ಇಂದು ಅಂದಿನ ಕಾಲದಲ್ಲಿದ್ದ ಕಷ್ಟಗಳಿಲ್ಲದಿದ್ದರೂ ಆ ತಿಂಗಳ ಮೇಲಿನ ಇಷ್ಟ ಇಂದಿಗೂ ಹಾಗೇ ಇದೆ. ಪರಶುರಾಮನ ಸೃಷ್ಟಿಯ ತುಳುನಾಡು ದೈವ ದೇವರುಗಳ ನೆಲೆಬೀಡು ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ತುಳುವರಿಗೆ ಪ್ರತಿಯೊಂದು ತಿಂಗಳು ಕೂಡ ವಿಶೇಷವೇ, ಆಟಿ ತಿಂಗಳು ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರ ತಿಂಗಳು ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದೇ ಆಟ ಅಮಾವಾಸ್ಯೆಯ ದಿನ. ಆಟಿ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ವಿಶೇಷತೆ ಇದೆ. ಆಟಿ ಕಷ್ಟದ ತಿಂಗಳು ಆದರೂ ಇಷ್ಟದ ತಿಂಗಳೂ ಆಗಿದೆ.
ಹೌದು….ಇಂದು ಆಟಿದ ಅಮಾವಾಸ್ಯೆ, ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಆಟಿಯ ಅಮಾವಾಸ್ಯೆಯಂದು ಆಗಿದೆ. ಈ ದಿನವೇ ಆಟದ ಅಗೇಲು ಕೊಡುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ತುಳುವರು ದೈವಾರಾಧಕರು. ಮನೆಯ ದೈವಗಳಿಗೆ ಈ ದಿನ ವಿಶೇಷವಾದ ಅಗೇಲು ಬಡಿಸುವ ಕ್ರಮ ಮಾಡುತ್ತಾರೆ. ಇದಲ್ಲದೆ ನಮ್ಮನ್ನಗಲಿದ ಮನೆಯ ಸದಸ್ಯರಿಗೆ ಅಂದರೆ ಪ್ರೇತಗಳಿಗೆ ಬಡಿಸುವ ಕ್ರಮವೂ ನಡೆಯುತ್ತದೆ. ತುಳುವರದ್ದು ಕೂಡು ಕುಟುಂಬ ಪದ್ಧತಿ, ಹಾಗಿದ್ದ ಮೇಲೆ ಸಾವು ಇಲ್ಲದ ಮನೆಯನ್ನು ಹುಡುಕುವುದು ಕಷ್ಟ. ಮನುಷ್ಯನ ಆತ್ಮವನ್ನು ತುಳುವರು ಪ್ರೇತ, ಕುಲೆ ಎಂದು ನಂಬುತ್ತಾರೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ.
ಆಟಿ ಅಮಾವಾಸ್ಯೆ ದಿನ ಹಾಲೆ ಮರದ ರಸ ಅಂದರೆ ’ಆಟಿದ ಮರ್ದ್’ ಕುಡಿಯುವ ಕ್ರಮ ತುಳುನಾಡಿನಲ್ಲಿ ಪ್ರಚಲಿತವಾಗಿದೆ. ಹಾಲೆ ಮರ ಅಥವಾ ಸಪ್ತಪರ್ನಿಯಾ ಇದನ್ನು ತುಳುವಿನಲ್ಲಿ ಪಾಲೆದ ಮರ, ಬಲಿಯೇಂದ್ರ ಮರ ಎಂದೂ ಕರೆಯುತ್ತಾರೆ. ಇಂಗ್ಲೀಷ್‌ನಲ್ಲಿ ’ಡೆವಿಲ್ ಟ್ರೀ’ ಎನ್ನುತ್ತಾರೆ. ಈ ಮರದ ತೊಗಟೆಯ ರಸವನ್ನು ಈ ದಿನ ಕುಡಿಯುತ್ತಾರೆ. ಬೆಳಗ್ಗಿನ ಜಾವ ಹಾಲೆ ಮರದ ತೊಗಟೆಯನ್ನು ಚೂಪು ಕಲ್ಲಿನಲ್ಲಿ ಜಜ್ಜಿ ತರಲಾಗುತ್ತದೆ. ಹೀಗೆ ತಂದ ತೊಗಟೆಯಿಂದ ರಸ ತೆಗೆದು ಅದನ್ನು ಸೋಸಿ ಕುಡಿಯುತ್ತಾರೆ. ಈ ರಸದಲ್ಲಿ ವಿಶೇಷವಾದ ಔಷಽಯ ಗುಣವಿದೆ ಎಂದು ನಂಬಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ಈ ಮರದ ರಸ ಒಳಗೊಂಡಿದೆ ಇದು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ. ಆಟಿ ಅಮಾವಾಸ್ಯೆ ದಿನ ಸಾವಿರದೊಂದು ಬಗೆಯ ಔಷಽಗಳು ಈ ರಸದಲ್ಲಿ ಕೂಡಿಕೊಂಡಿರುತ್ತವೆ ಎಂಬುದು ತುಳುವರ ನಂಬಿಕೆ. ಸಸ್ಯ ಸಂಬಂಧಿ ಔಷಧಿಗಳನ್ನು ತೆಗೆದುಕೊಳ್ಳುವಾಗ ಜಾಗೃತೆ ಇರಲಿ, ಬಳ್ಳವರಿಂದ ತಿಳಿದುಕೊಂಡು ಔಷಧಿ ಸೇವನೆ ಮಾಡುವುದು ಒಳಿತು. ಕೆಲವೊಮ್ಮೆ ಹಾಲೆ ಮರ ಎಂದು ಭಾವಿಸಿ ಬೇರೆ ಯಾವುದೋ ಮರದ ತೊಗಟೆ ತಂದು ರಸ ಕುಡಿಯುವ ಅಪಾಯವೂ ಇದೆ. ಆದ್ದರಿಂದ ಮರದ ಬಗ್ಗೆ ಎಚ್ಚರ ಇರಲಿ.
ಆಟ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರೆಯುವ ಫಲವಸ್ತುಗಳಲ್ಲಿ ಔಷಧಿಯ ಗುಣಗಳಿವೆ ಎನ್ನುವ ನಂಬಿಕೆಯೂ ಇದೆ. ಆಟಿ ತಿಂಗಳಿಗಾಗಿಯೇ ತಯಾರಿಸಿದ ಹಪ್ಪಳ, ಸಾಂತಣಿ, ಹಲಸಿನ ಬೀಜ, ಉಪ್ಪು ನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ, ಉಪ್ಪಡಚ್ಚಿಲ್,ನೀರು ಕುಕ್ಕು ಇತ್ಯಾದಿಗಳ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆಟಿ ತಿಂಗಳಲ್ಲಿ ಮನೆಯ ಹೆಂಗಸರು ತಿನಿಸುಗಳನ್ನು ಮಾಡುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಅರಿಶಿನ ಎಲೆಯ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ, ಎಳೆ ಬಿದಿರಿನ ಪಲ್ಯ, ಸುರುಳಿ,ಮುಟ್ಟಲಾಂಬು ಇತ್ಯಾದಿ ಅಣಬೆಗಳ ಗಸಿ, ತಜಂಕ್ ಪಲ್ಯ, ಮೋಡೆ, ಹಲಸಿನ ಎಲೆಯ ಕಡುಬು, ಹಲಸಿನ ಕಡುಬು, ಪತ್ರೊಡೆ, ಕೆಸುವಿನ ಚಟ್ಟಿ, ತಿಮರೆದ ಚಟ್ಟಿ, ಮಾವಿನಕಾಯಿ ಚಟ್ಟಿ, ಹುರುಳಿಸಾರು, ಸೌತೆ ಪದೆಂಗಿ ಗಸಿ, ತಜಂಕ್ ವಡೆ, ತೇವು ಪದ್‌ಪೆ ಗಸಿ ಇತ್ಯಾದಿ ತಿನಿಸಿಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದು, ತಿನ್ನಬಹುದಾಗಿದೆ.