ಬೆಟ್ಟಂಪಾಡಿ: ಇಲ್ಲಿನ ಕೀಲಂಪಾಡಿ ಎಂಬಲ್ಲಿ ಕೇಸರಿನಗರ – ಒಡ್ಯ ಸಂಪರ್ಕ ರಸ್ತೆಯ ತಡೆಗೋಡೆ ಭಾರೀ ಮಳೆಗೆ ಕುಸಿತವಾದ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಣ್ಣು ಕುಸಿದು ಹೋಗುವ ಹಿನ್ನೆಲೆಯಲ್ಲಿ ಕುಸಿತವಾದ ಜಾಗಕ್ಕೆ ಬೆಟ್ಟಂಪಾಡಿ ಗ್ರಾ.ಪಂ. ವತಿಯಿಂದ ಪ್ಲಾಸ್ಟಿಕ್ ಟರ್ಪಾಲ್ ಹೊದಿಕೆ ಹಾಕಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಪ್ರಕಾಶ್ ರೈ, ಗಂಗಾಧರ ಎಂ.ಎಸ್. ರವರು ಪರಿಶೀಲನೆ ನಡೆಸಿ ಮತ್ತಷ್ಟು ಮಣ್ಣು ಕುಸಿದು ಹೋಗದಂತೆ ಪಂಚಾಯತ್ ವತಿಯಿಂದ ಪ್ಲಾಸ್ಟಿಕ್ ಹೊದಿಕೆಯ ವ್ಯವಸ್ಥೆ ಮಾಡಿದ್ದಾರೆ.
2019-20 ನೇ ಸಾಲಿನಲ್ಲಿ ಮಳೆಹಾನಿ ದುರಸ್ತಿ ಅನುದಾನದಲ್ಲಿ ಯೋಜನಾ ಉಪವಿಭಾಗ ವತಿಯಿಂದ ರೂ. 25 ಲಕ್ಷ ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಿಸಲಾಗಿತ್ತು. ನಿರ್ಮಾಣದ ವೇಳೆಯೇ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿಯ ಮಳೆಗೆ ತಡೆಗೋಡೆ ಸಂಪೂರ್ಣ ಧರಶಾಹಿಯಾಗಿದೆ.